ಸಂಗೀತ ದೀಕ್ಷೆ ನೀಡಿದ ಮಹಾತ್ಮ: ಕೋಡಿಮಠದ ಶ್ರೀ

| Published : Mar 03 2024, 01:31 AM IST

ಸಾರಾಂಶ

ದೀನ-ದಲಿತರು, ಕುರುಡು, ಕುಂಟರಿಗೆ ಭಿಕ್ಷೆ ಬೇಡಿ ಬದುಕುವುದನ್ನು ನಿಲ್ಲಿಸಿ, ಸ್ವಂತ ಇಚ್ಛಾಶಕ್ತಿಯಿಂದ ಬದುಕಲು ಸಂಗೀತ ಶಿಕ್ಷಣ ನೀಡಿದ ಮಹಾತ್ಮರು ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಭಾರತ ಶರಣರ ಗ್ರೀನ್ ಲ್ಯಾಂಡ್, ಶರಣರ ನೆನೆವುದೇ ಘನತರವಾದುದು. ಯೋಗಿಯ ದರ್ಶನದ ಫಲ ಸದಾ ಸಿಕ್ಕೇ ಸಿಗುತ್ತದೆ. ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳು ಲೋಕ ವಂದ್ಯರು ಎಂದು ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ಡಾ. ಶಿವಾನಂದಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳ ಸಾನಿಧ್ಯದಲ್ಲಿ ನಡೆದ ಲಿಂ.ಕುಮಾರ ಶಿವಯೋಗಿಗಳವರ ೯೪ನೇ ಪುಣ್ಯಸ್ಮರಣೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾಲ ಜ್ಞಾನ ಅಲ್ಲಗಳೆಯಲು ಸಾಧ್ಯವಿಲ್ಲ. ಯೋಗಿಗಳಿಗೆ ಕಾಲ ಜ್ಞಾನವಿರುತ್ತದೆ. ವಚನ ಸಾಹಿತ್ಯದಲ್ಲಿ ಇಂತಹ ಹಲವು ಕಾಲಜ್ಞಾನದ ವಚನಗಳಿವೆ. ಅವು ಸತ್ಯವೂ ಹೌದು. ಭಾರತ ಶರಣರ ನಾಡು. ಜಾತ್ಯತೀತವಾಗಿ ಮುಂದಿನ ಪೀಳಿಗೆಗೆ ಸಂಸ್ಕಾರಯುತ ಸನ್ಯಾಸಿಗಳನ್ನು ನೀಡುವಲ್ಲಿ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳ ದೂರದೃಷ್ಟಿಯ ಫಲವೇ ಶಿವಯೋಗ ಮಂದಿರ. ದೀನ-ದಲಿತರು, ಕುರುಡು, ಕುಂಟರಿಗೆ ಭಿಕ್ಷೆ ಬೇಡಿ ಬದುಕುವುದನ್ನು ನಿಲ್ಲಿಸಿ, ಸ್ವಂತ ಇಚ್ಛಾಶಕ್ತಿಯಿಂದ ಬದುಕಲು ಸಂಗೀತ ಶಿಕ್ಷಣ ನೀಡಿದ ಮಹಾತ್ಮರು ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳು. ಸನ್ಯಾಸಿಯ ಸುತ್ತ ಸಂಶಯದ ಹುತ್ತ ಕಟ್ಟಬೇಡಿ. ಗುರುಗಳು ಸಮಾಧಾನದಿಂದ ಮಠದ ಮೂಲಕ ಸಾಮಾಜಿಕ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಹಾನಗಲ್ಲು ಪುಣ್ಯ ನೆಲ. ಇಲ್ಲಿ ಯಾವಾಗಲೂ ಧರ್ಮ ನೆಲೆಸಿರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಮಹಾಸ್ವಾಮಿಗಳವರು, ದೇವರು ಧರ್ಮದ ಹೆಸರಿನಲ್ಲಿ ನಮ್ಮ ಮನಸ್ಸು ಬುದ್ಧಿ ವಿವೇಕಗಳನ್ನು ಶುಚಿಯಾಗಿಟ್ಟುಕೊಳ್ಳೋಣ. ವೀರಶೈವ ಪರಂಪರೆಯಲ್ಲಿ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳವರು ಜಾತಿ, ಮತ, ಪಂಥದ ಮೇರೆ ಮೀರಿ ಒಂದಾಗಿ ಬದುಕಲು ಹೇಳಿ ಕೊಟ್ಟವರು. ಅಂತವರ ಸ್ಮರಣೆ ಎಂದರೆ ಅದು ಪರಮಾತ್ಮನ ಸ್ಮರಣೆಯೇ ಸರಿ ಎಂದರು.

ತಾಳೀಕೋಟೆ ಖಾಸ್ಗರತ್ತೇಶ್ವರಮಠದ ಸಿದ್ದಲಿಂಗದೇವರು ನುಡಿ ನಮನ ಸಲ್ಲಿಸಿ, ಗುರುವಿನ ಮಹಿಮೆ ಅರಿವಿನ ಮೂಲಕ ಸಾಧ್ಯ. ಜಗ ಬೆಳಗಲು ಹೇಗೆ ಸೂರ್ಯನ ಅಗತ್ಯವಿದೆಯೋ ಹಾಗೇಯೇ ನಮ್ಮ ಬದುಕು ಬೆಳಗಲು ಗುರು ಬೇಕು. ಧರ್ಮ, ನೀತಿ, ಪ್ರೀತಿಯಿಂದ ಮಾತ್ರ ಎಲ್ಲವನ್ನೂ ಗೆಲ್ಲಲು ಸಾಧ್ಯ. ನಾಳೆಗಾಗಿ ನಾವು ಇಂದೇ ಜಾಗೃತರಾಗಿ ಧರ್ಮ ಸಂಸ್ಕಾರಗಳನ್ನು ಉಳಿಸಿಕೊಳ್ಳೋಣ ಎಂದರು.

ಮೂಲೆಗದ್ದೆ ಚನ್ನಬಸವ ಮಹಾಸ್ವಾಮಿಗಳು, ಬಿಜಕಲ್ಲ ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು, ಸವಳಂಗದ ಅಕ್ಕಮಹಾದೇವಿ ಮಾತಾಜಿ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ನ್ಯಾಯವಾದಿ ಸುಭಾಸಸಿಂಗ ಜಮಾದಾರ, ಚಿಕ್ಕೋಡಿ ತಾಲೂಕಿನ ಖಡಡಕಲಾಟದ ಪ್ರೊ. ಮಿಥುನ ಗುರುಲಿಂಗಪ್ಪ ಅಂಕಲಿ, ಹೇರೂರಿನ ನೀಡ್ಸ ಆಫ್ ಪಬ್ಲಿಕ್ ಡಿಜಿಟಲ್ ಮೀಡಿಯಾದ ಲಿಂಗರಾಜ ರಾಮಾಪುರ ಅವರಿಗೆ ಶ್ರೀರಕ್ಷೆ ಗೌರವ ಸಮ್ಮಾನ ನೀಡಲಾಯಿತು. ಶಿಕ್ಷಕಿ ಸುನಿತಾ ಉಪ್ಪಿನ, ಗಿರೀಶ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಐ.ಪಿ. ಕುಂಕೂರ ಸ್ವಾಗತಿಸಿದರು.

ಪುಸ್ತಕ ಬಿಡುಗಡೆ:

ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳ ಕುರಿತಾಗಿ ಸಿ.ಆರ್. ಯರವಿನತೆಲಿಮಠ ಅವರು ಬರೆದ ಕಾರಣಿಕ ಕುಮಾರ ಶಿವಯೋಗಿ ಕೃತಿ ಬಿಡುಗಡೆಗೊಳಿಸಲಾಯಿತು.