ಸಾರಾಂಶ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳ ವತಿಯಿಂದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮಹಾವೀರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಕನ್ನಡಪ್ರಭ ವಾರ್ತೆ ಉಡುಪಿ
ಸತ್ಯ, ಅಹಿಂಸೆ, ಸಮಾನತೆ, ಸಹಬಾಳ್ವೆ ಮುಂತಾದ ಒಳ್ಳೆಯ ನಡವಳಿಕೆಗಳ ಮೂಲಕ ಪರಿಪೂರ್ಣತೆಯ ಬದುಕಿನ ಕಡೆಗೆ ಸಾಗುವ ಜ್ಞಾನವನ್ನು ಕೊಟ್ಟವರು ಭಗವಾನ್ ಮಹಾವೀರರು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದರು.ಅವರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳ ವತಿಯಿಂದ ಆಯೋಜಿಸಿದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಜೈನ ಧರ್ಮದ ಮೂಲಕ ಸಾಹಿತ್ಯ, ಸಂಸ್ಕೃತಿ, ಕಲೆಗೆ ಸಾಕಷ್ಟು ಕೊಡುಗೆಗಳು ಸಿಕ್ಕಿವೆ. ದೇವಸ್ಥಾನ, ಬಸದಿಯಲ್ಲಿನ ಕಲೆಗಳ ಮೂಲಕ ನಾವು ಅಂದಿನ ಕಾಲಘಟ್ಟದಲ್ಲಿ ಜೈನ ಧರ್ಮ ಎಷ್ಟೊಂದು ಉಚ್ಛ್ರಾಯ ಸ್ಥಿತಿಯಲ್ಲಿ ಇತ್ತು ಎಂದು ತಿಳಿದುಕೊಳ್ಳಬಹುದು ಎಂದರು.ಜೈನ್ ಮಿಲನದ ಅಧ್ಯಕ್ಷ ದೀಪ ಜೈನ್ ಮಾತನಾಡಿ, ಇಂದಿನ ಯಾಂತ್ರಿಕ ಯುಗದ ಕೆಟ್ಟ ಪರಿಸರದಲ್ಲಿ ಸ್ವಾರ್ಥ, ಒತ್ತಡ, ಆಸೆ ಎಂಬ ಮಹಾ ಬೇಲಿಯಲ್ಲಿ ಸಿಲುಕಿದಂತಹ ನಮಗೆ ಮಹಾವೀರರ ವಿಚಾರಧಾರೆಗಳು ಸದಾ ಚೇತೋಹಾರಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತ್ಯ ಶಕ್ತಿಯನ್ನು ತುಂಬಿದೆ. ಮಹಾವೀರರ ಆದರ್ಶ, ತತ್ವಗಳನ್ನು ನಾವು ನಮ್ಮ ಬದುಕಿನಲ್ಲಿ ಸಕಾರಾತ್ಮಕವಾಗಿ ರೂಢಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಜೈನ್ ಮಿಲನದ ಸುಧೀರ್ ಕುಮಾರ್, ರಾಜವರ್ಮ ಅರಿಗ, ಶಶಿಕಲಾ ಅರಿಗ, ಸುರೇಂದ್ರ ಕುಮಾರ್. ಕ.ಸಾ.ಪ.ದ ನರಸಿಂಹಮೂರ್ತಿ, ಜೈನ್ ಸಮುದಾಯದ ಸದಸ್ಯರು ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು.