ಕಾರಟಗಿ: ಭಗವಾನ್ ಮಹಾವೀರರು ತಮ್ಮ ಸಂಪೂರ್ಣ ಜೀವನ ಮನುಷ್ಯರ ಕಲ್ಯಾಣಕ್ಕಾಗಿ ಮೀಸಲಿಟ್ಟು ವಿಶ್ವದ ಶಾಂತಿಗೆ ಶ್ರಮಿಸಿದ್ದರು. ಅಹಿಂಸಾವಾದಿಗಳಾಗಿರುವ ಜೈನ ಸಮುದಾಯ ತ್ಯಾಗ, ಪ್ರೀತಿ, ಮಮತಾಮಯಿ ಗುಣ ಹೊಂದಿದವರು ಎಂದು ಗ್ರೇಡ್-೨ ತಹಸೀಲ್ದಾರ್ ಷಣ್ಮುಖಪ್ಪ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಹಾವೀರರ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಭಗವಾನ್ ಮಹಾವೀರರು ಕ್ರಿ.ಪೂ. ೫೯೯ರಲ್ಲಿ ಜನಿಸಿದರು. ಆ ಶುಭ ಸಂದರ್ಭವನ್ನು ಪ್ರಪಂಚದಾದ್ಯಂತ ಮಹಾವೀರ ಜನ್ಮ ಕಲ್ಯಾಣ ಎಂದು ಭಕ್ತಿ ಸಂತೋಷದಿಂದ ಆಚರಿಸಲಾಗುತ್ತಿದೆ. ಮಹಾವೀರರು ಸಮಾಜದ ಪ್ರತಿಯೊಂದು ವರ್ಗವನ್ನು ರಾಜರಿಂದ ಹಿಡಿದು ಸಾಮಾನ್ಯ ಜನರ ವರೆಗೆ ಸಮಾನವಾಗಿ ನೀತಿ ಮಾರ್ಗಕ್ಕೆ ಮಾರ್ಗದರ್ಶನ ಮಾಡಿದರು. ಬದುಕು ಮತ್ತು ಬದುಕಲು ಬಿಡಿ ಎಂಬ ಅವರ ಸಂದೇಶವು ಮಾನವೀಯತೆಗೆ ಶಾಶ್ವತ ಸ್ಫೂರ್ತಿಯಾಗಿ ಉಳಿದಿದೆ ಎಂದರು. ಇದಕ್ಕೂ ಮುಂಚೆ ತಹಸೀಲ್ದಾರ್ ಕಚೇರಿಯ ನೌಕರರು, ಸಿಬ್ಬಂದಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.ಪುರಸಭೆ: ಇಲ್ಲಿನ ಪುರಸಭೆ ಕಚೇರಿಯಲ್ಲಿ ಸೋಮವಾರ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಕಚೇರಿಯ ಚೆನ್ನಬಸವ ಸ್ವಾಮಿ ಹಿರೇಮಠ ಮಹಾವೀರರ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಆನಂತರ ಪುರಸಭೆ ನೌಕರರು, ಸಿಬ್ಬಂದಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ನಾಗೇಶ, ಹನುಮೇಶ, ಶಾಹಿದ್ ಸಾಬ್, ಹನುಮಂತಪ್ಪ ಇದ್ದರು.
ಪಾಲಿಟೆಕ್ನಿಕ್ ಕಾಲೇಜು: ಇಲ್ಲಿನ ನಾಗನಕಲ್ ಹೊರವಲಯದಲ್ಲಿ ಇರುವ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಭಗವಾನ ಮಹಾವೀರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಉಪನ್ಯಾಸಕ ವಿರೂಪಾಕ್ಷಯ್ಯಸ್ವಾಮಿ ಮಾತನಾಡಿ, ಭಗವಾನ್ ಮಹಾವೀರರ ಜೀವನ ಚರಿತ್ರೆ ಅವರ ತತ್ವಜ್ಞಾನ, ಅಹಿಂಸಾ ಸಿದ್ಧಾಂತ, ಸತ್ಯ ಮತ್ತು ತ್ಯಾಗದ ಮಹತ್ವದ ಕುರಿತು ವಿವರಿಸಿದರು. ಈ ವೇಳೆ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಂಜುನಾಥ ಹಿರೇಮಠ, ಉಪನ್ಯಾಸಕರಾದ ಎಚ್. ಮಧುಕೇಶ ಮತ್ತು ಮಂಜುನಾಥ ಮುಕ್ಕುಂದಿ ಇದ್ದರು.