ಜಗತ್ತಿಗೆ ಸಹಾನುಭೂತಿಯ ಹೊಸ ಧರ್ಮ ಪರಿಚಯಿಸಿದ್ದ ಮಹಾವೀರ: ಮುಲ್ಲಂಗಿ ನಂದೀಶ್

| Published : Apr 11 2025, 12:30 AM IST

ಜಗತ್ತಿಗೆ ಸಹಾನುಭೂತಿಯ ಹೊಸ ಧರ್ಮ ಪರಿಚಯಿಸಿದ್ದ ಮಹಾವೀರ: ಮುಲ್ಲಂಗಿ ನಂದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಹಾವೀರ ಜಯಂತಿ ಕೇವಲ ಧಾರ್ಮಿಕ ಹಬ್ಬವಲ್ಲ. ಬದಲಾಗಿ ಕರುಣೆ, ನೈತಿಕತೆ ಮತ್ತು ಅಹಿಂಸೆಯನ್ನು ಪ್ರತಿಬಿಂಬಿಸುವ ದಿನವಾಗಿದೆ.

ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮೇಯರ್

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮಹಾವೀರ ಜಯಂತಿ ಕೇವಲ ಧಾರ್ಮಿಕ ಹಬ್ಬವಲ್ಲ. ಬದಲಾಗಿ ಕರುಣೆ, ನೈತಿಕತೆ ಮತ್ತು ಅಹಿಂಸೆಯನ್ನು ಪ್ರತಿಬಿಂಬಿಸುವ ದಿನವಾಗಿದ್ದು, ಸತ್ಯ, ಕ್ಷಮೆ ಮತ್ತು ಭೌತಿಕತೆಯಿಂದ ನಿರ್ಲಿಪ್ತತೆಯ ಮಾರ್ಗವನ್ನು ಅನುಸರಿಸುವ ಮೂಲಕ ಸರಳ ಮತ್ತು ಶಾಂತಿಯುತ ಜೀವನವನ್ನು ನಡೆಸಲು ಕಲಿಸುತ್ತದೆ ಎಂದು ಮೇಯರ್ ಮುಲ್ಲಂಗಿ ನಂದೀಶ್ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ತೇರುಬೀದಿ ರಸ್ತೆಯ ಶ್ರೀ ಪಾರ್ಶ್ವನಾಥ ಭವನ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಮಹಾವೀರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಜ್ಞಾನೋದಯವನ್ನು ಹುಡುಕುತ್ತಾ ತಮ್ಮ ಐಷಾರಾಮಿ ಜೀವನ ತ್ಯಜಿಸಿ 12 ವರ್ಷಗಳ ತೀವ್ರ ಧ್ಯಾನ ಮತ್ತು ತಪಸ್ಸಿನ ನಂತರ, ಅವರು ಕೇವಲ ಜ್ಞಾನ ಪಡೆದು ತಮ್ಮ ಜೀವನದ ಉಳಿದ ಭಾಗವನ್ನು ಅಹಿಂಸೆ, ಸತ್ಯ ಮತ್ತು ಸ್ವಯಂ-ಶಿಸ್ತಿನ ಬೋಧನೆಗಳನ್ನು ಹರಡಲು ಕಳೆದರು ಎಂದು ಮಹಾವೀರರ ಜೀವನದ ಬಗ್ಗೆ ಪರಿಚಯಿಸಿದರು.

ಸಾಧ್ವಜಿ ಶ್ರೀ ಸೂರ್ಯಪ್ರಭ ಶ್ರೀಜಿ ವಿಶೇಷ ಉಪನ್ಯಾಸ ನೀಡಿ, ಜೈನ ಧರ್ಮದ ಇಪ್ಪತ್ತನಾಲ್ಕನೇ ತೀರ್ಥಂಕರರಾದ ಭಗವಾನ್ ಮಹಾವೀರರು ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿದರು. ಸಹಾನುಭೂತಿಯ ಹೊಸ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ್ದ ಭಗವಾನ್ ಮಹಾವೀರರು ಅಹಿಂಸೆ, ಪ್ರೀತಿ ಮತ್ತು ತಪಸ್ವಿ ಆಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಕೆ.ಸುಧಾ ತಂಡದವರು ಭಗವಾನ್ ಮಹಾವೀರರ ಕುರಿತ ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು ಮತ್ತು ಜೈನ ಸಮುದಾಯದ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು.

ಪಾಲಿಕೆಯ ಸದಸ್ಯ ಗಾದೆಪ್ಪ ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜೈನ್ ಸಂಘದ ಅಧ್ಯಕ್ಷ ಉತ್ಸವ್ ಲಾಲ್ ಜೀ ವರ್ಗೇಚ ಸೇರಿದಂತೆ ಸಮುದಾಯ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇತರರಿದ್ದರು.

ಮಹಾವೀರ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆ ನಗರದ ಶ್ರೀ ಪಾರ್ಶ್ವನಾಥ್ ಭವನದಿಂದ ಆರಂಭವಾಗಿ ತೇರು ಬೀದಿ, ಕಾಳಮ್ಮ ಬೀದಿ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಪೋಲಿಸ್ ಠಾಣೆ ರಸ್ತೆ ಮೂಲಕ ಶ್ರೀ ಪಾರ್ಶ್ವನಾಥ್ ಭವನ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.