ಭಗವಾನ್ ಮಹಾವೀರರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಆಧುನಿಕ ಜಗತ್ತು ಬಹಳಷ್ಟು ಮುಂದುವರಿದಿದ್ದರೂ ಮಾನವೀಯತೆ, ಪರೋಪಕಾರ ಗುಣಗಳು ಮಾಯವಾಗುತ್ತಿರುವುದು ನೋವಿನ ಸಂಗತಿ.
ಲಕ್ಷ್ಮೇಶ್ವರ: ಜಗತ್ತಿನ ಎಲ್ಲೆಡೆ ಕಾಡುತ್ತಿರುವ ಯುದ್ಧ, ಘರ್ಷಣೆ, ರಕ್ತಪಾತಗಳಿಗೆ ಭಗವಾನ್ ಮಹಾವೀರರ ತತ್ವ ಹಾಗೂ ಸಿದ್ಧಾಂತಗಳೆ ಪರಿಹಾರ. ಸತ್ಯ, ಶಾಂತಿ, ಅಹಿಂಸೆ ಪರಮ ಧರ್ಮವಾಗಬೇಕಿದೆ ಎಂದು ಖ್ಯಾತ ಸಾಹಿತಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನ ಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ತಿಳಿಸಿದರು.
ಭಾನುವಾರ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಎಲ್.ಆರ್. ಮಲಸಮುದ್ರ ಅವರ ಸ್ವಗೃಹದಲ್ಲಿ ನಡೆದ ಮಾಸದ ಮಾತು ಕಾರ್ಯಕ್ರಮ ಸರಣಿಯ 31ನೇ ಕಾರ್ಯಕ್ರಮ ಭಗವಾನ್ ಮಹಾವೀರ ಜಯಂತಿ ಕುರಿತು ಉಪನ್ಯಾಸ ನೀಡಿದರು.ಭಗವಾನ್ ಮಹಾವೀರರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಆಧುನಿಕ ಜಗತ್ತು ಬಹಳಷ್ಟು ಮುಂದುವರಿದಿದ್ದರೂ ಮಾನವೀಯತೆ, ಪರೋಪಕಾರ ಗುಣಗಳು ಮಾಯವಾಗುತ್ತಿರುವುದು ನೋವಿನ ಸಂಗತಿ. ಭಗವಾನ್ ಮಹಾವೀರರ ಅಹಿಂಸೆಯ ತತ್ವಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕ ಎಲ್.ಆರ್. ಮಲಸಮುದ್ರ ಮಾತನಾಡಿ, ಯುದ್ಧವಿಲ್ಲದೆ ಜಗತ್ತು ಗೆದ್ದ ಮಹಾಪುರುಷ ಭಗವಾನ್ ಮಹಾವೀರರ ವಿಚಾರಗಳು ಪ್ರಸ್ತುತ ಜಗತ್ತಿಗೆ ಅತ್ಯಂತ ಸೂಕ್ತ ಉತ್ತರಗಳನ್ನು ನೀಡಬಲ್ಲವು. ಅವುಗಳನ್ನು ಅರಿತು ಆಚರಿಸಬೇಕಾಗಿದೆ. ಅಂತಹ ಮಹಾಪುರುಷನ ಜಯಂತಿ ಅಂಗವಾಗಿ ಅವರ ವಿಚಾರಗಳ ಚಿಂತನೆಯನ್ನು ಆಯೋಜಿಸುವ ಅವಕಾಶ ನಮಗೆ ಸಿಕ್ಕಿದ್ದು ನಮ್ಮ ಸೌಭಾಗ್ಯ ಎಂದರು. ಈ ವೇಳೆ ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ ಮಾತನಾಡಿ, ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರು ಅಹಿಂಸಾ ಪರಮೋ ಧರ್ಮ ಎನ್ನುವ ಮೂಲಮಂತ್ರವನ್ನು ಜಗತ್ತಿಗೆ ನೀಡಿದರು ಎಂದರು.ಹಿರಿಯ ವಕೀಲ ಎ.ಬಿ. ಪಾಟೀಲ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಜೈನ ಧರ್ಮ ಜಗತ್ತಿನಲ್ಲಿ ಕಳವಳಕಾರಿ ಸ್ಥಿತಿಯಲ್ಲಿದೆ. ಸದಾ ಅಹಿಂಸೆಯನ್ನೇ ಪ್ರತಿಪಾದಿಸುವ ಜೈನ ಧರ್ಮೀಯರು ಚಿಕ್ಕೋಡಿಯಲ್ಲಿ ಜೈನ ಮುನಿಯೊಬ್ಬರನ್ನು ಹತ್ಯೆ ಮಾಡಿದಾಗಲೂ ಹತ್ಯೆ ಮಾಡಿದವರನ್ನು ಕ್ಷಮಿಸಿದ್ದು ಜಗತ್ತಿಗೆ ಮಾದರಿ ಎಂದರು. ಇನ್ನೋರ್ವ ಮುಖ್ಯ ಅತಿಥಿ ಸಂಸ್ಕೃತಿ ಚಿಂತಕ ಅನಂತರಾಜ ಮಿಣಜಗಿ ಮಾತನಾಡಿ, ವರ್ಧಮಾನ ಮಹಾವೀರದ ಅಪರಿಗ್ರಹ, ಅನೇಕಾಂತವಾದ ತತ್ವಗಳು ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಬಲ್ಲವು ಎಂದರು.