ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಹೆಬ್ರಿ ನಗರ ಪೊಲೀಸ್ ಠಾಣೆಗೆ ತಮ್ಮ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಸಮುದಾಯ ಸುರಕ್ಷತೆಯನ್ನು ಸುಧಾರಿಸಲು 5 ಸುಧಾರಿತ ಕಂಪ್ಯೂಟರ್ ಮತ್ತು 2 ಪ್ರಿಂಟರ್‌ಗಳ ಕೊಡುಗೆ ನೀಡಲಾಯಿತು.ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು, ಈ ಕೊಡುಗೆಯು ಪೊಲೀಸ್ ಇಲಾಖೆಗೆ ಆಧುನಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಹಾಗೂ ಸ್ಥಳೀಯ ಕಾನೂನು ಜಾರಿಯನ್ನು ಬೆಂಬಲಿಸುವಲ್ಲಿ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದರಿಂದ ಠಾಣೆಯಲ್ಲಿ ಅಂಕಿ ಅಂಶಗಳ ನಿರ್ವಹಣೆ ಮತ್ತು ಸೈಬರ್ ಸಂಬಂಧಿತ ಪ್ರಕರಣಗಳ ನಿರ್ವಹಣೆೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಹೆಬ್ರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಟಿ.ಎಂ. ಕೃತಜ್ಞತೆಯನ್ನು ವ್ಯಕ್ತಪಡಿಸಿ, ಈ ವ್ಯವಸ್ಥೆಗಳು, ತನಿಖೆಗಳು ಮತ್ತು ಪ್ರಕರಣ ನಿರ್ವಹಣೆಯಲ್ಲಿ ನಮ್ಮ ದಕ್ಷತೆಯನ್ನು ಹೆಚ್ಚು ಸುಧಾರಿಸುತ್ತದೆ ಎಂದರು.ಈ ಔಪಚಾರಿಕ ಹಸ್ತಾಂತರ ಸಮಾರಂಭದಲ್ಲಿ ಮಾಹೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ರವಿರಾಜ ಎನ್.ಎಸ್., ಸಹಉಪಕುಲಪತಿಗಳಾದ ಡಾ. ನಾರಾಯಣ ಸಭಾಹಿತ್, ಡಾ. ಶರತ್ ರಾವ್, ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ, ಯೋಜನಾ ಸಲಹೆಗಾರ ಮುತ್ತಣ್ಣ, ಮಾಹಿತಿ - ತಂತ್ರಜ್ಞಾನ ಉಪನಿರ್ದೇಶಕ ಸತೀಶ್ ಕಾಮತ್ ಹಾಗೂ ಠಾಣೆಯ ಪೊಲೀಸ್ ಪ್ರತಿನಿಧಿಗಳು ಉಪಸ್ಥಿತರಿದ್ದರು.