ಸಾರಾಂಶ
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜಿಸಿಪಿಎಎಸ್)ನ ಆಶ್ರಯದಲ್ಲಿ ತಮ್ಮ ಎರಡು ದಿನಗಳ ಹಿಂದುಸ್ಥಾನಿ ಸಂಗೀತ ರಸ ಗ್ರಹಣ ಶಿಬಿರದಲ್ಲಿ ವಿದುಷಿ ಶ್ರೀಮತಿ ದೇವಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಹಲವು ಘರಾನಗಳು, ಪ್ರಕಾರ, ಪ್ರಯೋಗಗಳನ್ನೊಳಗೊಂಡ ಹಿಂದೂಸ್ತಾನಿ ಸಂಗೀತವು ಶ್ರೀಮಂತವೂ ಹಾಗೂ ವೈವಿಧ್ಯಪೂರ್ಣವೂ ಆಗಿದೆ ಎಂದು ವಿದುಷಿ ಶ್ರೀಮತಿ ದೇವಿ ಹೇಳಿದ್ದಾರೆ.ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜಿಸಿಪಿಎಎಸ್)ನ ಆಶ್ರಯದಲ್ಲಿ ತಮ್ಮ ಎರಡು ದಿನಗಳ ಹಿಂದುಸ್ಥಾನಿ ಸಂಗೀತ ರಸ ಗ್ರಹಣ ಶಿಬಿರದಲ್ಲಿ ಅವರು ಮಾತನಾಡಿದರು.
ಗ್ವಾಲಿಯರ್, ಜೈಪುರ, ಆಗ್ರಾ, ಕಿರಾಣಾ ಮುಂತಾದ ಘರಾನಗಳು, ಖಮಾಲ್, ಠುಮ್ರಿ, ಠಪ್ಜಾ ಇತ್ಯಾದಿ ಪ್ರಕಾರಗಳು, ಅಲ್ಲಾದಿಯಾ ಖಾನ್, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಕುಮಾರ ಗಂಧರ್ವ, ಕಿಶೋರಿ ಅಮೋನ್ಕರ್, ಪರ್ವಿನ್ ಸುಲ್ತಾನಾ ಅಂಥವರ ಪ್ರಯೋಗಗಳೆಲ್ಲ ಸೇರಿ ಹಿಂದೂಸ್ತಾನಿ ಸಂಗೀತವು ಶ್ರೀಮಂತ ಮತ್ತು ವೈವಿಧ್ಯಪೂರ್ಣವಾಗಿದೆ ಎಂದು ಹೇಳಿದರು.ತಮ್ಮ ಎರಡು ದಿನಗಳ ಶಿಬಿರದಲ್ಲಿ ಹಿಂದೂಸ್ತಾನಿ ಸಂಗೀತದ ಸ್ವರ, ಲಯ, ರಾಗ ಇತ್ಯಾದಿ ಸೂಕ್ಷ್ಮಗಳನ್ನು ವಿವರಿಸಿದ ಅವರು, ತಮ್ಮ ಪ್ರಾತ್ಯಕ್ಷಿಕೆಯ ಮೂಲಕ ಘರಾನಾ ಪ್ರಕಾರ, ಪ್ರಯೋಗಗಳ ವ್ಯತ್ಯಾಸಗಳನ್ನು ಪ್ರಸ್ತುತ ಪಡಿಸಿದರು. ಹಿಂದೂಸ್ತಾನಿ ಸಂಗೀತದ ಬೆಳವಣಿಗೆಯ ಹಿಂದೆ ಹಲವು ಪ್ರತಿಭೆಗಳು ಕೆಲಸ ಮಾಡಿದ್ದನ್ನು ವಿವರಿಸಿದ ಅವರು, ಹಿಂದೂಸ್ತಾನಿ ಸಂಗೀತವು ಮತಧರ್ಮಗಳ ಚೌಕಟ್ಟನ್ನು ಮೀರಿ ಬೆಳೆದಿದೆ ಎಂದು ನುಡಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಹಿಂದೂಸ್ತಾನಿ ಸಂಗೀತ ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಪ್ರತಿನಿಧಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಗಣ್ಯರಾದ ಡಾ. ರಾಜಾರಾಮ್ ತೊಳ್ಪಾಡಿ, ಡಾ. ಶ್ರೀಕುಮಾರ್, ಪ್ರೊ. ನೇಮಿರಾಜ್ ಶೆಟ್ಟಿ, ಡಾ. ಭ್ರಮರಿ ಶಿವಪ್ರಕಾಶ್, ಡಾ. ನಿರಂಜನ, ಡಾ. ಪ್ರಭಾಕರ ಮಲ್ಯ ಮುಂತಾದವರು ಉಪಸ್ಥಿತರಿದ್ದರು.