ಹಾಸನ ಲೆಜೆಂಡ್ಸ್‌ ತಂಡಕ್ಕೆ ಮಾಹೆ ಐಡಿಎಲ್‌ ಲೆಜೆಂಡ್ಸ್ ಟ್ರೋಫಿ

| Published : Nov 27 2024, 01:02 AM IST

ಸಾರಾಂಶ

ಐಡಿಎಲ್‌ ಲೆಜೆಂಡ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಹಾಸನ ಲೆಜೆಂಡ್ಸ್‌ ತಂಡ ಮಂಗಳೂರು ಲೆಜೆಂಡ್ಸ್‌ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ರಾಜ್ಯಮಟ್ಟದ ಪ್ರತಿಷ್ಠಿತ ಮಾಹೆ ಐಎಂಎ ಡಾಕ್ಟರ್ಸ್ ಲೀಗ್ (ಐಡಿಎಲ್‌) ಲೆಜೆಂಡ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಹಾಸನ ಲೆಜಂಡ್ಸ್‌ ತಂಡವು ಮಂಗಳೂರು ಲೆಜೆಂಡ್ಸ್‌ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

45 ವರ್ಷ ಮೇಲ್ಪಟ್ಟ ಹಿರಿಯ ವೈದ್ಯರಿಗಾಗಿ ನ. 22 ರಿಂದ 24 ರವರೆಗೆ ಮಣಿಪಾಲ್ ಎಂಡ್ ಪಾಯಿಂಟ್ ಮತ್ತು ಎಂಐಟಿ ಮೈದಾನದಲ್ಲಿ ನಡೆದ ಈ ಪಂದ್ಯಾವಳಿಯನ್ನು ಐಎಂಎ ಉಡುಪಿ ಕರಾವಳಿ ಶಾಖೆ, ಐಎಂಎ ಮಂಗಳೂರು ಮತ್ತು ಮಾಹೆ ಜಂಟಿಯಾಗಿ ಆಯೋಜಿಸಿದ್ದವು.

ಸೆಮಿಫೈನಲ್‌ನಲ್ಲಿ ಉಡುಪಿ ಮತ್ತು ದಾವಣಗೆರೆ ತಂಡವು ಹಾಸನ ಮತ್ತು ಮಂಗಳೂರು ತಂಡಗಳ ವಿರುದ್ಧ ಆಕರ್ಷಕ ಪ್ರದರ್ಶನ ನೀಡಿದವು. ಫೈನಲ್‌ನಲ್ಲಿ ಹಾಸನ ಲೆಜೆಂಡ್ಸ್ ತಂಡದ ಬೌಲರ್‌ಗಳು ಮಂಗಳೂರು ತಂಡಕ್ಕೆ 10 ಓವರ್‌ಗಳಲ್ಲಿ ಕೇವಲ 51 ರನ್‌ಗಳನ್ನು ಮಾತ್ರ ನೀಡಿದರು. ಹಾಸನದ ಬ್ಯಾಟ್ಸ್‌ಮನ್‌ಗಳು ಕೇವಲ 7.5 ಓವರ್‌ಗಳಲ್ಲಿ ಸುಲಭವಾಗಿ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಸಮಾರೋಪ ಸಮಾರಂಭದಲ್ಲಿ ಮಾಹೆ ಮಣಿಪಾಲದ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್, ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಐಎಂಎ ಉಡುಪಿ ಅಧ್ಯಕ್ಷ ಡಾ.ಸುರೇಶ್ ಶೆಣೈ ಹಾಗೂ ಡಾ. ಕರಾವಳಿ, ಆಟಗಾರರು ಮತ್ತು ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದರು.

ಪಂದ್ಯಾವಳಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಹಾಸನ ಲೆಜೆಂಡ್ಸ್‌ ನ ಡಾ. ರಮೇಶ್‌ ಅವರು 129 ರನ್‌ಗಳನ್ನು ಗಳಿಸಿದ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ ಆಗಿ ಹೊರ ಹೊಮ್ಮಿದರು. 9 ವಿಕೆಟ್‌ ಪಡೆದ ಮತ್ತು 6 ಸಿಕ್ಸರ್‌ ಸಿಡಿಸಿದ ದಾವಣಗೆರೆ ಲೆಜೆಂಟ್ಸ್‌ ತಂಡದ ಡಾ. ಬಿನಯ್‌ ಸಿಂಗ್‌ ಉತ್ತಮ ಬೌಲರ್‌ ಆಗಿ ಮಿಂಚಿದರು. ಹಾಸನ ಲೆಜೆಂಡ್ಸ್‌ನ ಡಾ. ಮಧುಸೂದನ್‌ಗೆ ಟೂರ್ನಮೆಂಟ್‌ನ ಬೌಲರ್ ಪ್ರಶಸ್ತಿ, ದಾವಣಗೆರೆ ಸ್ಟಾರ್ಸ್‌ನ ವಿಜಯ್ ಶಂಕರ್‌ಗೆ ಉತ್ತಮ ಫೀಲ್ಡರ್ ಮತ್ತು 6 ಸ್ಟಂಪ್‌ ಮಾಡುವ ಮೂಲಕ ಗಮನ ಸೆಳೆದ ಉಡುಪಿ ಲೆಜೆಂಡ್ಸ್‌ನ ಡಾ. ರಾಜೇಶ್ ಭಕ್ತ ಅವರಿಗೆ ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ನೀಡಲಾಯಿತು. ಹಾಸನದ ಡಾ.ರಮೇಶ್ ಅವರ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಪ್ಲೇಯರ್ ಕಿರೀಟವನ್ನು ಪಡೆದರು.