ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಆರೋಗ್ಯ ವಿಜ್ಞಾನ ವಿಭಾಗದ ನೂತನ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ಅವರನ್ನು ನೇಮಕ ಮಾಡಲಾಗಿದೆ.

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಆರೋಗ್ಯ ವಿಜ್ಞಾನ ವಿಭಾಗದ ನೂತನ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ಅವರನ್ನು ನೇಮಕ ಮಾಡಲಾಗಿದೆ. ಮ್ಯಾಥ್ಯೂಸ್ ಜೇಕಬ್ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಲ್ಲಿ 36 ವರ್ಷಗಳ ಸುದೀರ್ಘ ಸೇವಾ ಅನುಭವ ಹೊಂದಿದ್ದಾರೆ. ಕ್ಲಿನಿಕಲ್ ಕೇರ್, ವೈದ್ಯಕೀಯ ಶಿಕ್ಷಣ, ಸಂಶೋಧನೆ, ಆರೋಗ್ಯ ರಕ್ಷಣಾ ನಾಯಕತ್ವ ಮತ್ತು ಸಾಂಸ್ಥಿಕ ಆಡಳಿತದಲ್ಲಿ ಅಪಾರ ಪರಿಣತಿ ಹೊಂದಿದ್ದಾರೆ. ಪ್ರಸಿದ್ಧ ಅರಿವಳಿಕೆ ಮತ್ತು ಕ್ರಿಟಿಕಲ್ ಕೇರ್ ತಜ್ಞರಾಗಿರುವ ಇವರು, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಹೊಸ ಆವಿಷ್ಕಾರಗಳನ್ನು ತರುವ ಜೊತೆಗೆ ರೋಗಿಗಳ ಆರೈಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಶ್ರಮಿಸಿದ್ದಾರೆ. ಅವರು ಪುಣೆಯ ಪ್ರತಿಷ್ಠಿತ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಮತ್ತು ಅರಿವಳಿಕೆ ಹಾಗೂ ಕ್ರಿಟಿಕಲ್ ಕೇರ್‌ನಲ್ಲಿ ಎಂಡಿ ಪದವಿ ಪಡೆದಿದ್ದಾರೆ. ಜತೆಗೆ ಡಿಎನ್‌ಬಿ ಮತ್ತು ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್‌ನ ಸದಸ್ಯತ್ವವನ್ನು ಹೊಂದಿದ್ದಾರೆ. ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‌ನಿಂದ ಆಸ್ಪತ್ರೆ ಆಡಳಿತದಲ್ಲಿ ಎಕ್ಸಿಕ್ಯೂಟಿವ್ ಸ್ನಾತಕೋತ್ತರ ಡಿಪ್ಲೊಮಾ, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಿಂದ ಮೆಡಿಕಲ್ ಲಾ ಮತ್ತು ಎಥಿಕ್ಸ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕನ್‌ ಕಾಲೇಜ್ ಆಫ್ ಎಮರ್ಜೆನ್ಸಿ ಮೆಡಿಸಿನ್ ಎಕ್ಸ್‌ಪರ್ಟ್ಸ್ ಫೆಲೋಶಿಪ್, ವೃದ್ಧಾಪ್ಯ ವೈದ್ಯಕೀಯದಲ್ಲಿ ಪ್ರಮಾಣಪತ್ರ ಮತ್ತು ಕಾರ್ಯತಂತ್ರದ ರಕ್ಷಣಾ ನಿರ್ವಹಣೆಯಲ್ಲಿ ತರಬೇತಿ ಪಡೆದು ತಮ್ಮ ಜ್ಞಾನದ ಹರವನ್ನು ವಿಸ್ತರಿಸಿಕೊಂಡಿದ್ದಾರೆ. ಎನ್‌ಎಬಿಎಚ್‌ ಮೌಲ್ಯಮಾಪಕರಾಗಿ ಮತ್ತು ಸಿಎಎಚ್‌ಒನ ಆಡಳಿತ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಶಸ್ತ್ರ ಪಡೆಗಳು ಮತ್ತು ಆರೋಗ್ಯ ವಲಯಕ್ಕೆ ಅವರು ನೀಡಿದ ಅಸಾಧಾರಣ ಸೇವೆ ಹಾಗೂ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, 2023ರಲ್ಲಿ ಪ್ರತಿಷ್ಠಿತ ‘ವಿಶಿಷ್ಟ ಸೇವಾ ಪದಕ’ ನೀಡಿ ಗೌರವಿಸಲಾಗಿದೆ.