ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ ಮಣಿಪಾಲ ಮಾಹೆ ವಿವಿ ವತಿಯಿಂದ ಎಂಎಚ್‌ಆರ್‌ಸಿ ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ ಸೈಕ್ಲಿಂಗ್ ಮತ್ತು ರನ್ನಿಂಗ್ ಕಾರ್ಯಕ್ರಮ ಆಯೋಜಿಸಿತ್ತು.

ಮಣಿಪಾಲ : ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ ಮಣಿಪಾಲ ಮಾಹೆ ವಿವಿ ವತಿಯಿಂದ ಎಂಎಚ್‌ಆರ್‌ಸಿ ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ ಸೈಕ್ಲಿಂಗ್ ಮತ್ತು ರನ್ನಿಂಗ್ ಕಾರ್ಯಕ್ರಮ ಆಯೋಜಿಸಿತ್ತು.

ಕರಾವಳಿ ಕರ್ನಾಟಕದ ವಿವಿಧೆಡೆಯ ಸೈಕ್ಲಿಸ್ಟ್‌ಗಳು ಮತ್ತು ಓಟಗಾರರು ಮಣಿಪಾಲ್ ಹಾಸ್ಪಿಸ್ ಆ್ಯಂಡ್ ರೆಸ್ಪೈಟ್ ಸೆಂಟರ್‌ (ಎಂಎಚ್‌ಆರ್‌ಸಿ)ನಲ್ಲಿ ಗಂಭೀರ, ಗುಣಪಡಿಸಲಾಗದ, ಜೀವನದ ಅಂತಿಮ ಹಂತದಲ್ಲಿರುವ ರೋಗಿಗಳಿಗೆ ಲಭ್ಯವಿರುವ ಸಹಾನುಭೂತಿಯ ಆರೈಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಅಂತಿಮ ಹಂತದ ಕ್ಯಾನ್ಸರ್, ಅಂಗಾಂಗ ವೈಫಲ್ಯ, ದೀರ್ಘಕಾಲೀನ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಜೀವನದ ಕೊನೆಯ ತಿಂಗಳುಗಳನ್ನು ನಿಯಂತ್ರಿಸಲಾಗದ ನೋವು, ಪದೇಪದೇ ಆಸ್ಪತ್ರೆ ಭೇಟಿ, ಒಂಟಿತನದಲ್ಲಿ ಕಳೆಯುತ್ತಾರೆ. ಅವರಿಗೆ ಮಾಹೆಯ ಎಂಎಚ್‌ಆರ್‌ಸಿಯಲ್ಲಿ ಉಚಿತ ಉಪಶಾಮಕ ಮತ್ತು ಹಾಸ್ಪಿಸ್ ಆರೈಕೆ ಲಭ್ಯವಿದೆ ಎಂಬ ಅರಿವನ್ನು ಮೂಡಿಸುವುದಕ್ಕಾಗಿ ಈ ಓಟ ಮತ್ತು ಸೈಕಲ್ ಸವಾರಿಯ ಉದ್ದೇಶವಾಗಿತ್ತು.

ಗಣ್ಯರಿಂದ ಚಾಲನೆ: ಮಂಗಳೂರಿನ ಲಾಲ್‌ಬಾಗ್ ಸಮೀಪದ ಕಾರ್ಪೊರೇಷನ್ ಸರ್ಕಲ್‌ನಿಂದ ಬೆಳಗ್ಗೆ 5.15ಕ್ಕೆ ಆರಂಭವಾದ ಸೈಕಲ್ ಸವಾರಿಗೆ ಮಾಹೆಯ ಸಹಕುಲಪತಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, 6.30ಕ್ಕೆ ಓಟಕ್ಕೆ ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಹಾಗೂ ಎಂಎಚ್‌ಆರ್‌ಸಿಯ ನಿರ್ದೇಶಕಿ ಡಾ. ಸೀಮಾ ರಾವ್ ಚಾಲನೆ ನೀಡಿದರು. ರನ್ನಿಂಗ್ ಮತ್ತು ಸೈಕ್ಲಿಂಗ್ ಕ್ಲಬ್‌ಗಳ ಸದಸ್ಯರು, ವೈದ್ಯರು, ದಾದಿಯರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 150 ಸೈಕ್ಲಿಸ್ಟ್‌ಗಳು ಮತ್ತು 150 ಓಟಗಾರರು ಭಾಗವಹಿಸಿದ್ದರು. ಎಂಎಚ್‌ಆರ್‌ಸಿಗೆ ಆಗಮಿಸಿದ ಭಾಗಿಗಳನ್ನು ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮತ್ತು ಕುಲಪತಿ ಡಾ. ಶರತ್ ಕೆ. ರಾವ್ ಸ್ವಾಗತಿಸಿದರು.