ಕಾಂಗ್ರೆಸ್‌ ನಾಯಕರ ವಿರುದ್ಧ ಡೀಸಿಗೆ ಮಹೇಶ್ ದೂರು

| Published : Apr 02 2024, 01:00 AM IST

ಸಾರಾಂಶ

ಇತ್ತೀಚಿಗೆ ಕೊಳ್ಳೇಗಾಲದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎನ್.ಮಹೇಶ್ ಜಿಲ್ಲಾಡಳಿತ ಭವನದಲ್ಲಿ ಚುನಾವಣಾಧಿಕಾರಿ ಶಿಲ್ಪಾನಾಗ್ ಅವರಿಗೆ ದೂರು ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇತ್ತೀಚಿಗೆ ಕೊಳ್ಳೇಗಾಲದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎನ್.ಮಹೇಶ್ ಜಿಲ್ಲಾಡಳಿತ ಭವನದಲ್ಲಿ ಚುನಾವಣಾಧಿಕಾರಿ ಶಿಲ್ಪಾನಾಗ್ ಅವರಿಗೆ ದೂರು ಸಲ್ಲಿಸಿದರು.ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ, ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಎನ್.ಮಹೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮಾ.೨೮ ರಂದು ಕೊಳ್ಳೇಗಾಲದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಬಿಜೆಪಿ ಅಭ್ಯರ್ಥಿ ಬಾಲರಾಜು ಅವರ ಬಗ್ಗೆ ಬಹಳ ಕೆಟ್ಟದಾಗಿದೆ ಮಾತನಾಡಿದ್ದಾರೆ. ಅವರಿಗೆ ನಾಯಕತ್ವ ಗುಣ ಇಲ್ಲ. ಅವರೊಬ್ಬ ಲೀಡರ್‌ ಅಲ್ಲ ಹಾಗೂ ನನ್ನ ಬಗ್ಗೆ ಇಲ್ಲೊಬ್ಬ ಸಮಾಜಘಾತುಕ ಎನ್.ಮಹೇಶ್ ಇದ್ದಾರೆ. ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗೆ ಏನು ಮಾಡಿಲ್ಲ ಎನ್ನುತ್ತಿದ್ದಾರೆ ಎನ್.ಮಹೇಶ್ ಅವರು ಶಿಕ್ಷಣ ಸಚಿವರಾಗಿದ್ದ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ಕೊಡುವ ದುಡ್ಡಲ್ಲಿ ೩೦ ಕೋಟಿ ರು. ಲೂಟಿ ಹೊಡೆದಿದ್ದಾರೆ. ಈಗ ಬಾಲರಾಜು ಅವರನ್ನು ಹಾಳು ಮಾಡಲು ಬಂದಿದ್ದೀಯಾ ಎಂದು. ಅವರಿಂದ ನಾವೇನು ಕಲಿಯಬೇಕಿಲ್ಲ ಎಂದಿದ್ದರು. ಇದು ಮಾಧ್ಯಮದಲ್ಲಿ ಸುದ್ದಿಯಾಗಿದೆ. ಇದು ನನ್ನ ಮಾನಹಾನಿ ಮಾಡುವಂತಹ ಮಾತಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಕೆ.ವೆಂಕಟೇಶ್, ಡಾ.ಎಚ್‌.ಸಿ. ಮಹದೇವಪ್ಪ ಕೂಡ ಇದ್ದರು. ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ ಹಿನ್ನಲೆ ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ನಾಳಿದ್ದು ನ್ಯಾಯಾಲಯದಲ್ಲಿ ದೂರು ಸಲ್ಲಿಸುವುದಾಗಿ ತಿಳಿಸಿದರು. ಈ ಮೂವರು ಬಂದು ತಮ್ಮ ಮೇಲೆ ೩೦ ಕೋಟಿ ಭ್ರಷ್ಟಾಚಾರ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಇಲ್ಲದಿದ್ದರ ಮೂರು ವರ್ಷ ಜೈಲಿಗೆ ಹೋಗಲಿ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಕೊಳ್ಳೇಗಾಲ ನಗರಸಭಾ ಸದಸ್ಯ ರಾಮಕೃಷ್ಣ, ಜಗದೀಶ್‌ ಶಂಕನಪುರ ಹಾಜರಿದ್ದರು.