ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ವಿವಾದಗಳನ್ನು ಹುಟ್ಟುಹಾಕಿ, ಸರ್ವಾಧಿಕಾರಿ ಧೋರಣೆ ತಳೆದು ಕೊನೆಗೆ ಸಮ್ಮೇಳನ ಯಶಸ್ವಿಯಾಗಲು ಸಹಕರಿಸಿದ ಸಕ್ಕರೆ ನಾಡಿನ ಜನರಿಗೆ ಕೃತಜ್ಞತೆಯನ್ನೂ ಅರ್ಪಿಸದೆ ಓಡಿಹೋಗಿರುವ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ಜಿಲ್ಲೆಯ ಜನರ ಪಾಲಿನ ಖಳನಾಯಕರಾಗಿದ್ದಾರೆ ಎಂದು ಜನಪದ ಮತ್ತು ಬೀದಿನಾಟಕ ಕಲಾತಂಡಗಳ ಒಕ್ಕೂಟದ ಅಧ್ಯಕ್ಷ ಎಸ್.ಬಸವರಾಜು ಆರೋಪಿಸಿದರು.ಕಳೆದ ಆರು ತಿಂಗಳಿಂದ ಜಿಲ್ಲೆಯ ಎಲ್ಲಾ ಆತಿಥ್ಯಗಳನ್ನು ಸ್ವೀಕರಿಸಿ ಮಂಡ್ಯ ಜನರ ಒಗ್ಗಟ್ಟನ್ನು ಒಡೆದಿದ್ದಾರೆ. ಎಲ್ಲರ ಭಾವನೆಗಳ ಜೊತೆ ಆಟವಾಡಿದ್ದಾರೆ. ಹಾವೇರಿ ಮತ್ತು ಮಂಡ್ಯ ಜನರ ನಡುವೆ ವೈಮನಸ್ಸು ಉಂಟುಮಾಡಲು ಯತ್ನಿಸಿದ್ದಾರೆ. ರಾಜ್ಯಾಧ್ಯಕ್ಷರಾಗಿ ಮಾಡಬೇಕಾದ ಎಲ್ಲಾ ಕೆಲಸಗಳನ್ನು ಬಿಟ್ಟು ಉಳಿದೆಲ್ಲಾ ಕೆಲಸಗಳನ್ನು ಜೋಷಿ ಮಾಡಿರುವುದೇ ಮಂಡ್ಯ ಸಾಹಿತ್ಯ ಸಮ್ಮೇಳನದ ದೊಡ್ಡ ಸಾಧನೆಯಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸರ್ಕಾರ ಸಮ್ಮೇಳನಕ್ಕೆ ನಿಯೋಜಿಸಿದ್ದ ಹಣ ಬಿಡುಗಡೆಗೊಳ್ಳುವ ಮೊದಲು ಸಮ್ಮೇಳನಕ್ಕೆ ಹಣಕಾಸಿನ ವ್ಯವಸ್ಥೆ ಮಾಡಿ ತಮ್ಮದೇ ತಂಡವನ್ನು ಕಟ್ಟಿಕೊಂಡು ಸಮ್ಮೇಳನದ ಕಾರ್ಯ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ಮಾಡಿದ ಸಮ್ಮೇಳನದ ಸಂಚಾಲಕಿಯಾಗಿದ್ದ ಮೀರಾ ಶಿವಲಿಂಗಯ್ಯ ಅವರನ್ನು ಹಲವಾರು ಬಾರಿ ನೇರವಾಗಿ ಅವಮಾನ ಮಾಡಿದ್ದಾರೆ. ಹಗಲಿರುಳೆನ್ನದೆ ದುಡಿದ ನಿಸ್ವಾರ್ಥ ಮನಸ್ಸುಗಳಿಗೆ ಘಾಸಿ ಉಂಟುಮಾಡಿದ್ದಾರೆ. ಸಮ್ಮೇಳನ ಮುಗಿದ ಮರುದಿನವೇ ಸಂಚಾಲಕಿ ಸಹಿತ ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳ ಹುದ್ದೆಗಳನ್ನು ಒಮ್ಮೆಲೆ ರದ್ದುಪಡಿಸಿ ಕನ್ನಡ ವಿರೋಧಿ ಧೋರಣೆ ಅನುಸರಿಸಿದ್ದಾರೆ ಎಂದು ಕಿಡಿಕಾರಿದರು.ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಾಹಿತಿಗಳಲ್ಲದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ನಿರ್ಧಾರವನ್ನು ಸ್ವತಃ ತಾವೇ ಮಾಡಿಕೊಂಡು ಬಂಡವಾಳಶಾಹಿಗಳನ್ನು ಸರ್ವಾಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿ ಕನ್ನಡ ನಾಡು, ಭಾಷೆ, ನೆಲ- ಜಲ, ಸಂಸ್ಕೃತಿಯನ್ನು ಬಂಡವಾಳಶಾಹಿಗಳಿಗೆ ಒತ್ತೆ ಇಡುವ ಇವರ ಪ್ರಯತ್ನ ಫಲಿಸದಿದ್ದುದಕ್ಕೆ ಮಂಡ್ಯದ ಕನ್ನಡಿಗರ ಭಾವನೆಗಳ ಜೊತೆ ಚೆಲ್ಲಾಟವಾಡುವ ಕೆಲಸಕ್ಕೆ ಇಳಿದಿದ್ದಾರೆ ಎಂದು ದೂಷಿಸಿದರು.
ಮಹೇಶ್ ಜೋಷಿ ಅವರ ಎಲ್ಲಾ ಕನ್ನಡ ವಿರೋಧಿ ಆಲೋಚನೆಗಳನ್ನು ಮಂಡ್ಯದ ಜನರು ಎಂದಿಗೂ ಸ್ವೀಕರಿಸುವುದಿಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಹಗಲಿರುಳು ದುಡಿದ ಸಾವಿರಾರು ಸಾಹಿತ್ಯ ಪ್ರೇಮಿಗಳು, ಜಿಲ್ಲೆ, ತಾಲೂಕು, ಹೋಬಳಿ ಘಟಕದ ಪದಾಧಿಕಾರಿಗಳಿಗೆ ಸೌಜನ್ಯಕ್ಕಾದರೂ ಧನ್ಯವಾದ ಹೇಳುವ ಸೌಜನ್ಯ ಪ್ರದರ್ಶಿಸಿಲ್ಲ. ಅವರ ವರ್ತನೆಯಿಂದಲೇ ಪರಿಷತ್ತನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತಿದ್ದಾರೆ ಎಂಬುದು ವೇದ್ಯವಾಗುತ್ತದೆ ಎಂದು ಟೀಕಿಸಿದರು.ಸಮ್ಮೇಳನದ ಸಂಚಾಲಕಿ ಹುದ್ದೆ ಸಹಿತ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳ ಹುದ್ದೆಗಳನ್ನು ರದ್ದು ಮಾಡಿದ್ದೀರಿ. ಹಾಗಾದರೆ ಸಮ್ಮೇಳನದ ಖರ್ಚು-ವೆಚ್ಚಗಳನ್ನು ಸಾರ್ವಜನಿಕರಿಗೆ ತಿಳಿಸುವವರು ಯಾರು ಎಂದು ಪ್ರಶ್ನಿಸಿರುವ ಅವರು, ಹೊಸದಾಗಿ ಆಯ್ಕೆಗೊಂಡಿರುವ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಮ್ಮೇಳನದ ಸಂಪೂರ್ಣ ಖರ್ಚು- ವೆಚ್ಚಗಳನ್ನು ಸಾರ್ವಜನಿಕರಿಗೆ ನೀಡುವ ತನಕ ಪರಿಷತ್ತಿನ ಹುದ್ದೆಯನ್ನು ವಹಿಸಿಕೊಳ್ಳದಿರುವಂತೆ ಮನವಿ ಮಾಡಿದರು.
ಮಂಡ್ಯದ ಅಸ್ಮಿತೆ ಹಾಗೂ ಗೌರವ- ಮರ್ಯಾದೆಯನ್ನು ಕಾಪಾಡುವ ಸಲುವಾಗಿ ಜೋಷಿ ಅವರ ಎಲ್ಲ ಧೋರಣೆಗಳನ್ನು ಜನರು ಸಹಿಸಿಕೊಂಡಿದ್ದಾರೆ.ನಾಡು, ಭಾಷೆ, ನೆಲ, ಜಲ, ಸಂಸ್ಕೃತಿ ವಿಷಯದಲ್ಲಿ ಮಂಡ್ಯ ಜನರು ಅತಿ ಹೆಚ್ಚು ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಕೊಂಡಿದ್ದೇವೆ. ಮತ್ತೆ ಮತ್ತೆ ಈ ಸಂಬಂಧಗಳ ಜೊತೆಗೆ ಆಟವಾಡುವ ಪ್ರಯತ್ನ ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದರು.ಗೋಷ್ಠಿಯಲ್ಲಿ ವೈರಮುಡಿ, ಉಮಾಪತಿ, ಶೇಖರ್, ನಾಗರಾಜು, ಶ್ವೇತಾ ಇತರರಿದ್ದರು.