ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ನೂತನ ಅಧ್ಯಕ್ಷರಾಗಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧಿಕಾರ ಸ್ವೀಕಾರ

| Published : Jun 16 2024, 01:45 AM IST

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ನೂತನ ಅಧ್ಯಕ್ಷರಾಗಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧಿಕಾರ ಸ್ವೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ರಿಜಿಸ್ಟ್ರಾರ್‌ ನೂತನ ಅಧ್ಯಕ್ಷರಿಗೆ ಆದೇಶ ಪತ್ರ ನೀಡಿದರು. ಕೊಡಗು ಜಾನಪದ ಪರಿಷತ್‌ ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ನಗರದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ರಿಜಿಸ್ಟ್ರಾರ್ ಅಜ್ಜಿಕುಟ್ಟೀರ ಗಿರೀಶ್ ಅವರು ನೂತನ ಅಧ್ಯಕ್ಷರಿಗೆ ಆದೇಶ ಪತ್ರ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ, ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬಾಚರಣಿಯಂಡ ಅಪ್ಪಣ್ಣ, ಕೊಡಗು ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಮತ್ತು ಬಳಗದವರು ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.

ಅಧಿಕಾರ ಸ್ವೀಕಾರಕ್ಕೆ ಮೊದಲು ಮುಕ್ಕೋಡ್ಲು ವ್ಯಾಲಿ ಡ್ಯೂ ತಂಡದವರಿಂದ ಬಟ್ಟೆಪಾಟ್ ಹಾಡುವುದರ ಮೂಲಕ ಅಧ್ಯಕ್ಷರನ್ನು ಸಭಾಂಗಣಕ್ಕೆ ಕರೆತರಲಾಯಿತು. ನೆಲ್ಲಕ್ಕಿ ನಡುಬಾಡೆಯಲ್ಲಿ ಬಾಳೋಪಾಟ್ ತಂಡದವರು ಕಾವೇರಿ ಮಾತೆಯನ್ನು ಸ್ಥುತಿಸಿ ಹಾಡಿದರು. ನಂತರ ಚಾಮೆರ ದಿನೇಶ್ ಬೆಳ್ಯಪ್ಪನವರು ಒಕ್ಕಣೆ ಕಟ್ಟಿ ದೇವರ ಹೆಸರಿನಲ್ಲಿ ಅಧ್ಯಕ್ಷರ ಮುಂದಿನ ದಿನಗಳ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲೆಂದು ಅರ್ಪಣೆಯ ನುಡಿಯನ್ನಾಡಿದರು.

ಅಧ್ಯಕ್ಷರು ತಮ್ಮ ಭಾಷಣದಲ್ಲಿ ಅಕಾಡೆಮಿಯ ಸರ್ವಸದಸ್ಯರ ನೇಮಕಾತಿಯ ನಂತರ ಸಭೆ ಕರೆದು ಮುಂದಿನ ಕಾರ್ಯಯೋಜನೆಯನ್ನು ರೂಪಿಸುವುದರ ಮೂಲಕ ಕಾರ್ಯಪ್ರವೃತರಾಗುವಂತೆ ಹೇಳಿದರು.

ಸರ್ವ ಸದಸ್ಯರು ಹಾಗೂ ಜನಾಂಗಗಳ ಒಗ್ಗೂಡುವಿಕೆಯಿಂದ ಅಕಾಡೆಮಿಯ ಕಾರ್ಯಕ್ರಮಗಳನ್ನು ಉನ್ನತ ಮಟ್ಟದಲ್ಲಿ ಮುನ್ನಡೆಸಿ ಕೊಡುವುದು ಸರ್ವರ ಅಗತ್ಯ ಎಂದು ಬಯಸಿದರು.

ರಿಜಿಸ್ಟ್ರಾರ್ ಎ.ಸಿ.ಗಿರೀಶ್‌ರವರು ಅಕಾಡೆಮಿಯ ಕಾರ್ಯೋದ್ದೇಶವನ್ನು ಸಂಕ್ಷಿಪ್ತವಾಗಿ ಸಭೆಗೆ ವಿವರಿಸಿದರು. ಸಭೆಯಲ್ಲಿ ಜಿ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಮನೆಯಪಂಡ ಕಾಂತಿಸತೀಶ್, ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪಂಡ ಬೋಸ್‌ಮೊಣ್ಣಪ್ಪ, ಕಿಗ್ಗಟ್ಟ್ನಾಡ್ ಹಿರಿಯನಾಗರಿಕ ವೇದಿಕೆಯ ಸಂಸ್ಥಾಪಕರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಡಿಕ್ಕಿ ಅಣ್ಣಯ್ಯ ಪಾರುವಂಗಡ ಸನ್ನಿ ಮೊಣ್ಣಪ್ಪ, ಕೆಂಜಂಗಡ ರೋಶನ್ ನಾಣಯ್ಯ, ಹಂಚೆಟ್ಟಿರ ಮನುಮುದ್ದಪ್ಪ, ಚೇನಂಡ ಗಿರೀಶ್ ಪೂಣಚ್ಚ, ಸೋಮೆಯಂಡ ಬೋಸ್ ಬೆಳ್ಯಪ್ಪ, ಮೂವೇರ ರೇಖಾ ಪ್ರಕಾಶ್, ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಮಾಚಿಮಂಡ ಮೀನಾ ವಸಂತ್, ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಹಿರಿಯರಾದ ಲಕ್ಷ್ಮೀನಾರಾಯಣ, ಕರ್ನಂಡ ಬೊಳ್ಳಮ್ಮ ನಾಣಯ್ಯ, ಆಚೆಯಡ ಗಗನ್, ಬಾಳೆಯಡ ಪ್ರತೀಶ್, ಕೊಡಗು ಜಾನಪದ ಪರಿಷತ್ ಸದಸ್ಯರಾದ ಅಂಬೆಕಲ್ಲು ಕುಶಾಲಪ್ಪ, ಸಂಪತ್ ಕುಮಾರ್ ಇದ್ದರು.