ಮಹಿಳೆಯರು ಜಾಗೃತರಾಗಿ ಸಂಘಟಿತರಾಗಬೇಕು. ಸಂಘಟನೆ ಜೀವನ ಭದ್ರತೆಗೆ ಬುನಾದಿಯಾಗುವುದು

ಭಟ್ಕಳ: ಇಲ್ಲಿನ ರೈಲ್ವೆ ನಿಲ್ದಾಣದ ಸನಿಹದ ಶ್ರೀನಾಗ ಮಾಸ್ತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಶರನ್ನವ ನವರಾತ್ರಿಯ ನಾಲ್ಕನೇ ದಿನ ಮಹಿಳಾ ದಸರಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಸಿಎಫ್‌ ಹಸ್ತಾ ಶೆಟ್ಟಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಶಕ್ತಿಮಾತೆಯ ಆರಾಧನೆ ನಡೆಯುವ ಶರನ್ನವ ರಾತ್ರಿಯಲಿ ಮಹಿಳೆಯರಿಗಾಗಿಯೇ ವೇದಿಕೆ ಕಲ್ಪಿಸಿ ಮಹಿಳಾ ದಸರಾ ಆಚರಣೆ ನಡೆಸುತ್ತಿರುವುದು ಇಡೀ ಜಿಲ್ಲೆಗೆ ಮಾದರಿಯಾಗಿದೆ. ಪ್ರತಿದಿನ ಕುಟುಂಬ ಕಂಡ ಮಕ್ಕಳು ಹಿರಿಯರ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರಿಗೆ ತಮ್ಮೆಲ್ಲ ಒತ್ತಡಗಳಿಂದ ಹೊರಬಂದು ತಮ್ಮಲ್ಲಿರುವ ಸಾಂಸ್ಕೃತಿಕ ಪ್ರತಿಭೆಯನ್ನು ಅನಾವರಣಗೊಳಿಸುವ ಈ ವೇದಿಕೆ ನಿಜಕ್ಕೂ ಅದ್ಭುತ ಕಲ್ಪನೆಯಾಗಿದೆ ಎಂದರು.

ಮುಖ್ಯ ಅತಿಥಿ ಬಿಎಸ್‌ಎನ್‌ಡಿಪಿ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದೀಪಾ ನಾಯ್ಕ ಮಾತನಾಡಿ, ಮಹಿಳೆಯರು ಜಾಗೃತರಾಗಿ ಸಂಘಟಿತರಾಗಬೇಕು. ಸಂಘಟನೆ ಜೀವನ ಭದ್ರತೆಗೆ ಬುನಾದಿಯಾಗುವುದು. ಪರಸ್ಪರ ಸ್ನೇಹ-ಸಹಕಾರದಿಂದ ಕಷ್ಟದ ನಿರ್ವಹಣೆಯಲ್ಲಿ ಧೈರ್ಯ ಒದಗಿಸುವುದು. ನಾಗ ಮಾಸ್ತಿ ಕ್ಷೇತ್ರದಲ್ಲಿ ನವರಾತ್ರಿ ಹೆಸರಿನಲ್ಲಿ ಮಹಿಳಾ ದಸರಾ ಆಚರಿಸುವ ಮೂಲಕ ಮಹಿಳೆಯರಿಗೆ ನೀಡಿದ ಗೌರವ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಡಾ. ಸವಿತಾ ಕಾಮತ್, ಸಿದ್ಧಾರ್ಥ ಕಾಲೇಜನ ಪ್ರಾಂಶುಪಾಲೆ ಅರ್ಚನಾ ನಾಯ್ಕ ಮಾತನಾಡಿ, ಮಹಿಳಾ ವೇದಿಕೆಯ ಸಂಭ್ರಮವನ್ನು ಶ್ಲಾಘಿಸಿದರು. ಲತಾ ನಾಗರಾಜ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರೇಖಾ ನಾಯ್ಕ ಸ್ವಾಗತಿಸಿದರೆ, ಶ್ರೀನಾಗ ಮಾಸ್ತಿ ಟ್ರಸ್ಟ್‌ ಅಧ್ಯಕ್ಷ ಸತೀಶಕುಮಾರ್ ನಾಯ್ಕ್ ಪ್ರಾಸ್ತಾವಿಕ ಮಾತನಾಡಿದರು. ಭಾಗ್ಯ ನಾಯ್ಕ ವಂದಿಸಿದರು. ಶಿಕ್ಷಕಿ ಪ್ರತಿಭಾ ಕರ್ಕಿಕರ್ ಕಾರ್ಯಕ್ರಮ ನಿರೂಪಿಸಿದರು.