ಯುವತಿಯರನ್ನು ಕಾಮದ ಕೂಪಕ್ಕೆ ತಳ್ಳುವ ಜಾಲದ ವಿರುದ್ಧ ಸಾಮಾಜಿಕ ಹೋರಾಟಕ್ಕೆ ಡಾ.ನಾಗಲಕ್ಷ್ಮಿ ಚೌದರಿ ಕರೆ

| Published : Apr 13 2025, 02:04 AM IST

ಯುವತಿಯರನ್ನು ಕಾಮದ ಕೂಪಕ್ಕೆ ತಳ್ಳುವ ಜಾಲದ ವಿರುದ್ಧ ಸಾಮಾಜಿಕ ಹೋರಾಟಕ್ಕೆ ಡಾ.ನಾಗಲಕ್ಷ್ಮಿ ಚೌದರಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಪ್ರತಿ ಹೆಜ್ಜೆಯಲ್ಲೂ ಹುಷಾರಾಗಿರಬೇಕು. ಅದರಲ್ಲೂ ಯುವತಿಯರು ಇನ್‌ಸ್ಟ್ರಾ ಗ್ರಾಂ, ಫೇಸ್‌ ಬುಕ್‌ ಮೊದಲಾದ ಜಾಲತಾಣಗಳ ಬಗ್ಗೆ ಎಚ್ಚರವಹಿಸಬೇಕು. ಡಾರ್ಕ್‌ ವೆಬ್‌ಸೈಟ್‌ ಡೌನ್‌ ಲೋಡ್‌ ಮಾಡಿಕೊಂಡು ಜಾಲಕ್ಕೆ ಸಿಕ್ಕಿಬೀಳಬಾರದು. ಪ್ರೀತಿಸಿ, ತಂದೆ- ತಾಯಿಯನ್ನು ಒಪ್ಪಿಸಿ ಮದುವೆಯಾಗಿ. ಆದರೆ ಪ್ರೀತಿಸಿ, ಓಡಿ ಹೋಗಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ಯುವತಿಯರನ್ನು ಕಾಮದ ಕೂಪಕ್ಕೆ ತಳ್ಳುವ ಜಾಲದ ವಿರುದ್ಧ ಸಾಮಾಜಿಕ ಹೋರಾಟ ನಡೆಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಕರೆ ನೀಡಿದರು.

ಜನಪರ ಸಾಹಿತ್ಯ ಪರಿಷತ್ತು ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ, ಸಾಧಕಿಯರಿಗೆ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿ. ಮೈಸೂರಿನಲ್ಲಿ ಈ ರೀತಿಯ ಘಟನೆ ನಡೆದಿದೆ ಎಂದು ಕೇಳಿ ಆಘಾತವಾಯಿತು. ಇಲ್ಲಿನ ಒಡನಾಡಿ ಸೇರಿದಂತೆ ರಾಜ್ಯದಲ್ಲಿ ಅನೇಕ ಸಂಘ, ಸಂಸ್ಥೆಗಳು ಈ ರೀತಿಯ ಜಾಲದ ವಿರುದ್ಧ ಹೋರಾಟ ಮಾಡುತ್ತಿವೆ. ನೀವು ಕೈಜೋಡಿಸಿ. ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ಈ ರೀತಿಯ ಘಟನೆಗಳಿಗೆ ಇತಿಶ್ರೀ ಹಾಡಬಹುದು ಎಂದರು.

ಈ ರೀತಿಯ ಘಟನೆಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳು ಎಲ್ಲಿಯೇ ನಡೆಯಲಿ ಮೊದಲು ಮಹಿಳಾ ಸಹಾಯವಾಣಿಗೆ ದೂರು ನೀಡಿ. ದೂರವಾಣಿ ಕರೆ ಮಾಡಿದರೆ ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. ಆದ್ದರಿಂದ ಈ ಬಗ್ಗೆ ಯಾವುದೇ ಭಯಪಡಬೇಡಿ ಎಂದು ಅವರು ಅಭಯ ನೀಡಿದರು.

ಮಹಿಳೆಯರು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಪ್ರತಿ ಹೆಜ್ಜೆಯಲ್ಲೂ ಹುಷಾರಾಗಿರಬೇಕು. ಅದರಲ್ಲೂ ಯುವತಿಯರು ಇನ್‌ಸ್ಟ್ರಾ ಗ್ರಾಂ, ಫೇಸ್‌ ಬುಕ್‌ ಮೊದಲಾದ ಜಾಲತಾಣಗಳ ಬಗ್ಗೆ ಎಚ್ಚರವಹಿಸಬೇಕು. ಡಾರ್ಕ್‌ ವೆಬ್‌ಸೈಟ್‌ ಡೌನ್‌ ಲೋಡ್‌ ಮಾಡಿಕೊಂಡು ಜಾಲಕ್ಕೆ ಸಿಕ್ಕಿಬೀಳಬಾರದು. ಪ್ರೀತಿಸಿ, ತಂದೆ- ತಾಯಿಯನ್ನು ಒಪ್ಪಿಸಿ ಮದುವೆಯಾಗಿ. ಆದರೆ ಪ್ರೀತಿಸಿ, ಓಡಿ ಹೋಗಬಾರದು ಎಂದರು.

ಹೆಣ್ಣು ಮಕ್ಕಳಿಗೆ ತವರು ಬಿಟ್ಟರೆ ಪೊಲೀಸ್‌ ಠಾಣೆ ಎರಡನೇ ತವರು ಮನೆ ಇದ್ದಂತೆ. ಏಕೆಂದರೆ ಯಾವುದಾದರೂ ದೌರ್ಜನ್ಯ ನಡೆದಾಗ ಧೈರ್ಯದಿಂದ ಹೋಗಿ ದೂರ ನೀಡಬೇಕು. ಅಲ್ಲಿಗೆ ಹೋಗಲು ಭಯಪಡಬಾರದು. ಪೊಲೀಸರು ಇರುವುದು ನಮಗೆ ರಕ್ಷಣೆ ನೀಡಲು. ಭಾರತೀಯ ನ್ಯಾಯ ಸಂಹಿತೆ ಪ್ರಕಾರ ಮಹಿಳೆಯರಿಗೆ ಯಾವ ರೀತಿಯ ಕಾನೂನುಗಳಿವೆ ತಿಳಿದುಕೊಳ್ಳಬೇಕು ಎಂದರು.

ಲಂಚಾವಾತಾರದ ವಿರುದ್ಧ ಹೋರಾಟ ಮಾಡಬೇಕು. ಗುಲಾಮಗಿರಿಯ ಮನಸ್ಥಿತಿಯಿಂದ ಆಚೆ ಬರಬೇಕು. ಆಗ ಮಾತ್ರ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಹೇಳಿದಂತೆ ಬದಲಾವಣೆ ಸಾಧ್ಯ ಎಂದರು.

ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್‌. ದತ್ತೇಶ್‌ ಕುಮಾರ್‌ ಆಶಯ ಭಾಷಣ ಮಾಡಿ, ಮಹಿಳೆಯರಿಗೆ ಶಿಕ್ಷಣ ನೀಡಿದರೆ ದೇಶಕ್ಕೆ ಶಕ್ತಿ ಇದ್ದಂತೆ ಆದ್ದರಿಂದ ಅಬ್ದುಲ್‌ ಕಲಾಂ ಅವರು ಹೇಳಿದಂತೆ ಕನಸು ಕಾಣಿರಿ, ಅದನ್ನು ನನಸು ಮಾಡಲು ಗುರಿ ಮತ್ತು ಛಲದಿಂದ ಓದಿರಿ ಎಂದರು.

ಮಹಿಳಾ ಶಿಕ್ಷಣದ ಮಹತ್ವ ಅರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಣಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕಟ್ಟಡ ಹಾಗೂ ಹಾಸ್ಟೆಲ್‌ಗೆ 300 ಕೋಟಿ ರು. ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು.

ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರು ದಕ್ಷತೆ, ಪ್ರಾಮಾಣಿಕತೆ ಜೊತೆಗೆ ಮಾತೃ ಹೃದಯಿಯಾಗಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಮಾತನಾಡಿ, ಶಿಕ್ಷಣದ ಜೊತೆಗೆ ಸಂವಹನ ಕೂಡ ಮುಖ್ಯ,ಕೇವಲ ಐಎಎಸ್‌ ಮಾತ್ರವಲ್ಲ, ರಾಜಕೀಯ, ಕ್ರೀಡೆ, ಕಲೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸೇವೆ ಮಾಡಲು ಅವಕಾಶ ಇದೆ. ಅವಕಾಶ ಸಿಕ್ಕಾಗ ಬೇರೆಯವರಿಗೆ ಸಹಾಯ ಮಾಡಬೇಕು ಎಂದರು.

ಯುವ ಶಕ್ತಿಯು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಮಹಿಳೆಯರು ಧೈರ್ಯವಾಗಿ ಮುನ್ನುಗ್ಗಬೇಕು ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಆರ್‌. ಮಹಾದೇವ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ. ರವಿ, ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಸಿ. ರೇಣುಕಾದೇವಿ, ಬೆಂಗಳೂರಿನ ಆಯುರ್ವೇದ ವೈದ್ಯ ಡಾ.ಅಬ್ದುಲ್‌ ಖಾದರ್‌, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌ ಸಿ. ಕಬ್ಬಾಳ್‌, ಸಂಚಾಲಕಿ ಬಿ.ಪಿ. ಅಶ್ವಿನಿ, ನಿರ್ದೇಶಕ ಎಂ. ಚಂದ್ರಶೇಖರ್‌ ಮುಖ್ಯ ಅತಿಥಿಗಳಾಗಿದ್ದರು. ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎಸ್. ರಾಜಶೇಖರಮೂರ್ತಿ, ಐಕ್ಯೂಎಸಿ ಸಂಚಾಲಕ ಡಾ.ಎನ್. ಪ್ರಕಾಶ್‌ ಇದ್ದರು.

ಜನಪರ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಂ.ಮಹೇಶ ಚಿಕ್ಕಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಹರದನಹಳ್ಳಿ ನಂಜುಂಡಸ್ವಾಮಿ ಸ್ವಾಗತಿಸಿದರು. ಪರಿಷತ್‌ ರಾಜ್ಯ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕೈಲಾಸಮೂರ್ತಿ ಮತ್ತು ತಂಡದವರು ಜಾನಪದ ಗೀತಗಾಯನ, ಮೈಸೂರು ಆನಂದ್‌ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.ಪ್ರಶಸ್ತಿ ಪುರಸ್ಕೃತರು

ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಬಳ್ಳಾರಿ ಕಾರಾಗೃಹ ಅಧೀಕ್ಷಕಿ ಆರ್‌. ಲತಾ, ಕೆಎಎಸ್‌ ಅಧಿಕಾರಿ ಕೆ.ಎನ್. ಚೈತ್ರಾ, ವಕೀಲೆ ಅಂದಲಿ, ಶಿಕ್ಷಣ ವಿಭಾಗದ ಎಸ್‌. ಸ್ಮಿತಾ ಹಾಗೂ ಖೋ ಖೋ ವಿಶ್ವಕಪ್‌ ವಿಜೇತ ತಂಡದ ಆಟಗಾರ್ತಿ ಬಿ. ಚೈತ್ರಾ ಅವರಿಗೆ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರನ್ನು ಹಿರಿಯ ವಿದ್ಯಾರ್ಥಿಗಳ ಸಂಘದ ಸುಂದರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್‌. ಭಾಸ್ಕರ್‌ ಪರಿಚಯಿಸಿದರು.

ಇನ್ನಿಬ್ಬರು ಪ್ರಶಸ್ತಿ ಪುರಸ್ಕೃತರಾದ ಐಪಿಎಸ್‌ ಅಧಿಕಾರಿ ಅನಿತಾ ಬಿ. ಹದ್ದಣ್ಣವರ್‌, ಸಮಾಜ ಸೇವಕಿ ಲಕ್ಷ್ಮೀದೇವಿ ಗೈರಾಗಿದ್ದರು. ಮಹಾರಾಣಿ ಕಲಾ ಕಾಲೇಜಿನ ಕ್ರೀಡಾ ಸಾಧಕಿಯರಾದ ಹರ್ಷಿತಾ, ಎಚ್‌.ಎನ್‌. ಪುಷ್ಪಲತಾ, ಬಿಂದುಶ್ರೀ ಹಾಗೂ ಪುಷ್ಪಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.