ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಆಗ್ನೇಯ ಪದವೀಧರರ ಕ್ಷೇತ್ರದ ಸಂಯುಕ್ತ ಜನತಾದಳದ ಅಭ್ಯರ್ಥಿ ಡಾ.ಕೆ.ನಾಗರಾಜ್ ಪರವಾಗಿ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ನಗರದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚನೆ ಮೂಲಕ ಅದ್ಧೂರಿ ಪ್ರಚಾರ ನಡೆಸಿದರು. ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ, ಸಂಯುಕ್ತ ಜನತಾದಳವು ಪ್ರಜಾ ಸತ್ತಾತ್ಮಕ ಆಡಳಿತ ನೀಡಲು ಮುಂದಾಗಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಪಕ್ಷವನ್ನು ಸಂಘಟಿಸಲಿದೆ. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಾಗಿದ್ದು ಇದರ ಭಾಗವಾಗಿ ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು ಹೋಬಳಿ ಮಟ್ಟದಲ್ಲಿ ಜನ ಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳಿಗೆ ನೇಮಕಾತಿಗೆ ಒತ್ತಾಯಿಸುತ್ತೇನೆ, ಎನ್‌ಪಿಎಸ್‌ನಿಂದ ಓಪಿಎಸ್ ಪದ್ಧತಿ ಜಾರಿಗೆ ಶ್ರಮ, ಅತಿಥಿ ಉಪನ್ಯಾಸಕ ಮತ್ತು ಶಿಕ್ಷಕರಿಗೆ ಸೇವಾ ಭದ್ರತೆ ಜಾರಿ, ಎಲ್ಲರಿಗೂ ಜ್ಯೋತಿ ಸಂಜೀವಿನಿ ಯೋಜನೆ ಜಾರಿ, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಉಚಿತವಾಗಿ ಐಎಎಸ್ - ಕೆಎಎಸ್ ಕೋಚಿಂಗ್ ಕೇಂದ್ರಗಳ ಸ್ಥಾಪನೆ ಹಾಗೂ ಗ್ರಾಮೀಣ ಭಾಗದ ಪದವೀಧರರಿಗೆ ಸ್ವಯಂ ಉದ್ಯೋಗಕ್ಕೆ ಆದ್ಯತೆ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ ಎಂದು ನುಡಿದರು.ಜೆಡಿಯು ಅಭ್ಯರ್ಥಿ ಡಾ.ಕೆ.ನಾಗರಾಜ್ ಮಾತನಾಡಿ, ಪ್ರಾಮಾಣಿಕ ರಾಜಕಾರಣದ ಜತೆಗೆ ಉತ್ತಮ ಶಿಕ್ಷಣ, ಆರೋಗ್ಯ, ಆಡಳಿತ, ಕೃಷಿ ಮತ್ತು ಪರಿಸರ ಕಡೆಗೆ ಪಕ್ಷದ ನಡೆ ಆಗಿದ್ದು ರಾಜ್ಯದಲ್ಲಿ ಸವೋದಯ ಮಾಡುವ ಧ್ಯೇಯ ನಮ್ಮದಾಗಿದೆ ಎಂದು ತಿಳಿಸಿದರು.
ಸಿ.ಬೈರೇಗೌಡ ಎಂಜಿನಿಯರಿಂಗ್ ಕಾಲೇಜು, ಹೇಮಾದ್ರಿ ಕಾಲೇಜು, ಸರ್ಕಾರಿ ಕಾನೂನು ಕಾಲೇಜು, ಡಿಸಿ ಕಚೇರಿ, ಮೆಡಿಕಲ್ ಕಾಲೇಜು, ಸರ್ಕಾರಿ ಮಹಿಳಾ-ಬಾಲಕರ ಕಾಲೇಜು, ಕೋರ್ಟ್, ಗೋಕುಲ್ ಕಾಲೇಜು, ಬಸವಶ್ರೀ ಕಾಲೇಜಿನಲ್ಲಿ ಪ್ರಚಾರ ನಡೆಯಿತು.ಜೆಡಿಯು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‍ಗಂಗೂರ್, ರೈತ ಘಟಕದ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ, ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯಶೋಧಾ, ಕೆಆರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಹೇಶ್, ಎನ್‌ಸಿಪಿ ಪಕ್ಷದ ಜಿಲ್ಲಾಧ್ಯಕ್ಷ ಬೈರೆಡ್ಡಿ, ಕ್ರಾಂತಿಕಿಡಿ ಗೌಡ, ನಾರಾಯಣಸ್ವಾಮಿ, ಮಮತಾಗೌಡ, ಮಲ್ಲಮ್ಮ, ಮನೋಜ್ ಕುಮಾರ್, ಅಮರೇಶ್, ಮಂಜುನಾಥ್ ಇದ್ದರು.