ಸಾರಾಂಶ
ಮೈಸೂರು : ಮಹಿಷ ಮಂಡಲೋತ್ಸವ ಆಚರಣಾ ಸಮಿತಿ ವತಿಯಿಂದ ಮಹಿಷ ದಸರಾ- 2025ರ ಅಂಗವಾಗಿ ಪುರಭವನದ ಆವರಣದಲ್ಲಿ ಬುಧವಾರ ಮಹಿಷ ಮಂಡಲೋತ್ಸವ ಪೊಲೀಸರ ಬಿಗಿ ಭದ್ರತೆಯಲ್ಲಿ ನಡೆಯಿತು.
ನಗರದ ಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ಮಹಿಷ ದಸರಾ ಆರಂಭಗೊಳ್ಳಬೇಕಿತ್ತು. ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಪುಷ್ಪಾರ್ಚನೆ ಮೊಟಕುಗೊಳಿಸಲಾಯಿತು. ಬಳಿಕ ನಿಗದಿಯಂತೆ ಪುರಭವನದ ಆವರಣದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಮಹಿಷ ಮಂಡಲೋತ್ಸವ ಆಚರಿಸಲಾಯಿತು. ಬುದ್ಧ, ಅಂಬೇಡ್ಕರ್ ಹಾಗೂ ಮಹಿಷಾಸುರನ ಪಂಚಲೋಹದ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷ ದಸರಾವನ್ನು ಉದ್ಘಾಟಿಸಲಾಯಿತು.
ದ್ರಾವಿಡ ವಿಡುದಲೈ ಕಳಗಂನ ಕೊಳತ್ತೂರು ಟಿ.ಎಸ್.ಮಣಿ ಕಾರ್ಯಕ್ರಮ ಉದ್ಘಾಟಿಸಿದರು. ಮೂಲ ನಿವಾಸಿಗಳ ಅರಸನಾದ ಮಹಿಷಾಸುರ ರಾಕ್ಷಸ ಅಲ್ಲ, ರಕ್ಷಕ. ಡಾ। ಅಂಬೇಡ್ಕರ್, ಮಹಿಷ ಮತ್ತು ಬುದ್ಧ ಸೇರಿದಂತೆ ಪೂರ್ವಜರ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಮೂಲ ನಿವಾಸಿಗಳು ಒಂದಾಗಬೇಕು ಎಂದು ಕರೆ ನೀಡಿದರು.
ಮಹಿಷ ಮಂಡಲೋತ್ಸವ ಆಚರಣಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಚಾಮುಂಡಿಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ನೀಡದೆ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿರುವುದು ದಸರಾಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಮಂಡಲೋತ್ಸವದಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಮೈಸೂರು ಹೆಸರನ್ನು ಮಹಿಷೂರು ಎಂದು ಬರೆಸಬೇಕು, ಸಾಮ್ರಾಟ್ ಅಶೋಕ ಪುತ್ಥಳಿಯನ್ನು ಮೈಸೂರಿನ ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕು, ದಸರಾ ಸಂದರ್ಭದಲ್ಲಿ ಸರ್ಕಾರ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.
ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷರಾದ ನಿವೃತ್ತ ಡಿಸಿಪಿ ಎಸ್.ಸಿದ್ದರಾಜು, ಗಾಂಧಿನಗರದ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಲೇಖಕ ಎಸ್.ಸಿದ್ದರಾಜು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))