ಸಾರಾಂಶ
ಉಚ್ಚಿಲ: ಇಲ್ಲಿನ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ವೈಭವದ ಉಡುಪಿ - ಉಚ್ಚಿಲ ದಸರಾದಲ್ಲಿ ವೈಶಿಷ್ಟ್ಯಪೂರ್ಣವಾದ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ, ಅವುಗಳಲ್ಲೊಂದು ಪ್ರತಿದಿನ ಸಂಜೆ ನಡೆಯುವ ಸಾಮೂಹಿಕ ಕುಂಕುಮಾರ್ಚನೆ ಸೇವೆ.ದೇವಸ್ಥಾನದ ಪ್ರಧಾನ ಅರ್ಚಕ ವೇದ ಮೂರ್ತಿ ಕೆ.ವಿ.ರಾಘವೇಂದ್ರ ಉಪಾಧ್ಯಾಯ ಮತ್ತು ಉದಯ ತಂತ್ರಿ ಕಳತ್ತೂರು ಇವರ ನೇತೃತ್ವದಲ್ಲಿ ಈ ಸಾಮೂಹಿಕ ಕುಂಕುಮಾರ್ಚನೆಯು ನಡೆಯುತ್ತಿದೆ, ನಿತ್ಯ ಇದರಲ್ಲಿ ಸಾವಿರಾರು ಮಹಿಳೆಯರು ಭಕ್ತಿಶ್ರದ್ಧೆಯಿಂದ ಭಾಗವಹಿಸುತಿದ್ದಾರೆ.
ನವದುರ್ಗೆ ಮತ್ತು ಶಾರದೆಯನ್ನು ಪ್ರತಿಷ್ಠಾಪಿಸಲಾಗಿರುವ ಭವ್ಯ ವೇದಿಕೆಯ ಮುಂಭಾಗದಲ್ಲಿ ಏಕಕಾಲದಲ್ಲಿ ಇಷ್ಟು ಸಂಖ್ಯೆಯಲ್ಲಿ ಮಹಿಳೆಯರು ಸಾಲಾಗಿ ಕುಳಿತು ಕುಂಕುಮದಿಂದ ದೇವಿಯನ್ನು ಅರ್ಚಿಸುವ ಈ ಕಾರ್ಯಕ್ರಮ ಬಹುಶಃ ಬೇರೆಲ್ಲಿಯೂ ಕಾಣಸಿಗಲಿಕ್ಕಿಲ್ಲ!ಬುಧವಾರ ನಡೆದ ಈ ಪೂಜೆಯ ಸಂದರ್ಭದಲ್ಲಿ ದ.ಕ.ಮೊಗವೀರ ಮಹಾಜನ ಸಂಘದ ಸಲಹೆಗಾರ ನಾಡೋಜ ಡಾ. ಜಿ. ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷರಾದ ಮೋಹನ್ ಬೇಂಗ್ರೆ, ದಿನೇಶ್ ಎರ್ಮಾಳು, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಗುಂಡು ಬಿ.ಅಮೀನ್, ಉದ್ಯಮಿ ಸಾಧು ಸಾಲ್ಯಾನ್, ಉಷಾ ರಾಣಿ ಬೋಳೂರು, ಸುಗುಣ ಕರ್ಕೇರ ಮತ್ತು ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.