ಸಾರಾಂಶ
ಗ್ರಾಮ ದೇವತೆ ಮಹಿಷಾಸುರ ಮರ್ದಿನಿ ಅಮ್ಮನವರ ಜಾತ್ರಾ ಮಹೋತ್ಸವ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಹನೂರು
ಗ್ರಾಮ ದೇವತೆ ಮಹಿಷಾಸುರ ಮರ್ದಿನಿ ಅಮ್ಮನವರ ಜಾತ್ರಾ ಮಹೋತ್ಸವ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರದಿಂದ ಜರುಗಿತು. ಹನೂರು ಪಟ್ಟಣದ ಗ್ರಾಮ ದೇವತೆ ಮಹಿಷಾಸುರ ಮರ್ದಿನಿ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ ಸೋಮವಾರ ರಾತ್ರಿ ಹೆಣ್ಣು ಮಕ್ಕಳಿಂದ ಜಾಗರ ಸಮರ್ಪಣೆಯನ್ನು ಹೊತ್ತು ತಂದು, ಧಾರ್ಮಿಕವಾಗಿ ವಾದ್ಯಮೇಳಗಳೊಂದಿಗೆ ದೇವಾಲಯಕ್ಕೆ ಸಮರ್ಪಣೆ ಮಾಡಲಾಯಿತು.ತಂಪು ಜ್ಯೋತಿ: ಮಂಗಳವಾರ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಂಭ್ರಮ ಸಡಗರದಲ್ಲಿ ಹೆಣ್ಣು ಮಕ್ಕಳು ತಂಪು ಜ್ಯೋತಿ (ತಂಬಿಟ್ಟು) ತಯಾರಿಸಿ ಹೂಗಳಿಂದ ಸಿಂಗರಿಸಿ ದೇವಿಗೆ ಸಮರ್ಪಿಸಿ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಭಕ್ತರು ನಿವೇದನೆ ಮಾಡಿಕೊಂಡರು.ಬಾಯಿ ಬೀಗ: ನಾಲ್ಕು ದಿನಗಳು ನಡೆಯುವ ಮಹಿಷಾಸುರ ಮರ್ದಿನಿ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ಭಕ್ತಾದಿಗಳಿಂದ ಬಾಯಿಗೆ ಬೀಗ ಹಾಕಿಕೊಂಡು ದೇವಾಲಯದಲ್ಲಿ ಪೂಜೆ ಸಲ್ಲಿಸುವ ವಾಡಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಾಯಿ ಬೀಗವನ್ನು ನೋಡಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಸಹ ಭಕ್ತಾದಿಗಳು ಭಾಗವಹಿಸಲಿದ್ದಾರೆ.
ಹಗಲಗುಣಿ ಪೂಜೆ: ಗುರುವಾರ ಪ್ರಾಂತ್ಯಕಾಲ ಹಗಲಗುಣಿ ಪೂಜೆ ಕಾರ್ಯಕ್ರಮವು ದೇವಾಲಯದಲ್ಲಿ ನಡೆಯಲಿದೆ. ಧಾರ್ಮಿಕವಾಗಿ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಅರ್ಚಕ ಗೋಪಾಲ್ ರಾವ್, ಅರುಣ್ ರಾವ್ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.ವಿದ್ಯುತ್ ದೀಪಾಲಂಕಾರ: ನಾಲ್ಕು ದಿನಗಳ ಜಾತ್ರಾ ಮಹೋತ್ಸವಕ್ಕೆ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶ, ಬಸ್ ನಿಲ್ದಾಣದಲ್ಲಿ ಸುಮಾರು 30ಅಡಿ ಎತ್ತರದ ವಿದ್ಯುತ್ ದೀಪ ಅಲಂಕಾರದ ಕಟೌಟ್ ನಿರ್ಮಾಣ ಮಾಡಿ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ದೀಪ ಅಲಂಕಾರವನ್ನು ಮಾಡುವ ಮೂಲಕ ಹಬ್ಬಕ್ಕೆ ಕಳೆ ಕಟ್ಟಿದೆ. ಜಗಮಗಿಸುತ್ತಿರುವ ವಿದ್ಯುತ್ ದೀಪಾಲಂಕಾರ ವಿಶೇಷ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.