ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ ನಡುವಿನ ಅಂತರ ಕಡಿಮೆಗೊಳಿಸುವ ಮಹತ್ತರ ಯೋಜನೆಯಾಗಿರುವ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ರಬಕವಿ-ಮಹಿಷವಾಡಗಿ ಜಾಕವೆಲ್ ಸೇತುವೆ ಕಾಮಗಾರಿ ೫ ವರ್ಷಗಳಿಂದ ಸ್ಥಗಿತಗೊಂಡಿತ್ತು.
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ ನಡುವಿನ ಅಂತರ ಕಡಿಮೆಗೊಳಿಸುವ ಮಹತ್ತರ ಯೋಜನೆಯಾಗಿರುವ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ರಬಕವಿ-ಮಹಿಷವಾಡಗಿ ಜಾಕವೆಲ್ ಸೇತುವೆ ಕಾಮಗಾರಿ ೫ ವರ್ಷಗಳಿಂದ ಸ್ಥಗಿತಗೊಂಡಿತ್ತು. ರಬಕವಿಯಲ್ಲಿ ಡಾ.ರವಿ ಜಮಖಂಡಿ ನೇತೃತ್ವದಲ್ಲಿ ಡಿಸೆಂಬರ್ ೧೬ ರಿಂದ ಐದು ದಿನಗಳ ಕಾಲ ನಡೆದ ಉಪವಾಸ ಸತ್ಯಾಗ್ರಹದ ವೇಳೆ ೩ ದಿನಗಳಲ್ಲಿ ಕಾಮಗಾರಿ ಆರಂಭಿಸಿ ತ್ವರಿತವಾಗಿ ಪೂರ್ಣಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ನೀಡಿದ ಭರವಸೆಯಿಂದ ನಿರಶನ ಅಂತ್ಯಗೊಳಿಸಲಾಗಿತ್ತು.
ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮಕ್ಕೆ ಹೊಂದಿಕೊಂಡ ಜಮೀನುಗಳ ಪೈಪಲೈನ್‌ಗಳ ವರ್ಗಾಯಿಸುವ ಕಾಮಗಾರಿ ಆರಂಭಗೊಂಡಿದ್ದರೂ ಅದೂ ಸಹ ಆಮೆಗತಿಯಲ್ಲಿ ಸಾಗಿದೆ.ಅಥಣಿ ತಾಲೂಕಿನ ಮಹಿಷವಾಡಗಿ ರೈತರಿಗೆ ದೊರಕಬೇಕಾದ ಪರಿಹಾರ ಕಾರ್ಯ ವಿಳಂಬದಿಂದಾಗಿ ಇದೀಗ ಆ ಭಾಗದಲ್ಲಿನ ರೈತರ ಜಮೀನಿನ ಪೈಪ್‌ಲೈನ್ ಅಳವಡಿಕೆ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ರಬಕವಿ-ಬನಹಟ್ಟಿ ತಾಲೂಕಿನ ರೈತರ ಭೂಮಿಗೆ ಇನ್ನೂ ಪರಿಹಾರ ದೊರಕದಿರುವುದರಿಂದ ಇಲ್ಲಿನ ಕಾಮಗಾರಿ ಆರಂಭವಾಗದೇ ಗ್ರಹಣ ಮುಂದುವರಿದಿದೆ.
ಕಾಮಗಾರಿಗೆ ಶುಭ ಮುಹೂರ್ತ: ಬೇಸಿಗೆಯಲ್ಲಿ ನಡೆಯಬೇಕಾಗಿದ್ದ ನದಿಯೊಳಗಿನ ಕಾಮಗಾರಿ ಇದೀಗ ಹಿಪ್ಪರಗಿ ಬ್ಯಾರೇಜ್ ಮ ಅರ್ಧದಷ್ಟು ನೀರು ಸೋರಿಕೆಯಿಂದ ಕೃಷ್ಣಾ ನದಿ ಮಧ್ಯದ ಪಿಲ್ಲರ್‌ಗಳು ತೆರೆದುಕೊಂಡಿದ್ದು, ಕಾಮಗಾರಿ ನಡೆಸಲು ಉತ್ತಮ ಅವಕಾಶ ಸಿಕ್ಕಿದೆ. ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರು ತಕ್ಷಣ ಕಾಮಗಾರಿ ಪ್ರಾರಂಭಿಸಿದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಆಶ್ವಾಸನೆ ನೀಡಿದಂತೆ ಪ್ರಸಕ್ತ ವರ್ಷದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ನಿರ್ಲಕ್ಷ್ಯದ ಹಾದಿ ಹಿಡಿದಲ್ಲಿ ಜನತೆಯ ದಶಕಗಳ ಬೇಡಿಕೆ ಕನಸಾಗಿಯೇ ಉಳಿಯಲಿದೆ.ಸದ್ಯ ನದಿಯ ನೀರಲ್ಲಿ ಹಿಂದೆಂದೂ ಕಾಣದಷ್ಟು ನೀರು ಖಾಲಿಯಾಗಿದ್ದು, ಪಿಲ್ಲರ್‌ಗಳ ಕಾಮಗಾರಿಗೆ ಪ್ರಶಸ್ತ ಕಾಲವಾಗಿದೆ. ನೀರು ಬರುವದರೊಳಗಾಗಿ ಕಾಮಗಾರಿ ಪೂರ್ಣಗೊಳ್ಳುವಂತೆ ಸಚಿವರು, ಗುತ್ತಿಗೆದಾರರೊಂದಿಗೆ ಸಮಾಲೋಚಿಸಿ ಕಾರ್ಯ ಚುರುಕುಗೊಳಿಸುವಂತೆ ಒತ್ತಾಯಿಸಲಾಗುವುದೆಂದು ಡಾ.ರವಿ ಜಮಖಂಡಿ ತಿಳಿಸಿದರು.
ಮಹಿಷವಾಡಗಿ ಸೇತುವೆ ತ್ವರಿತ ಕಾರ್ಯಕ್ಕೆ ಸರ್ಕಾರ ಜೆತೆಗೆ ಸಮಾಲೋಚಿಸಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಶೀಘ್ರ ಪೂರ್ಣಗೊಳಿಸುವಲ್ಲಿ ಪ್ರಯತ್ನಿಸುವೆ.-ಸಿದ್ದು ಸವದಿ, ಶಾಸಕರು ತೇರದಾಳ
ಪೂರಕವಾಗಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಸಚಿವ ಆರ್.ಬಿ. ತಿಮ್ಮಾಪುರ ಅವರು ಮುತುವರ್ಜಿ ವಹಿಸಿದ್ದು, ಡಿಸೆಂಬರ್ ಅತ್ಯದೊಳಗೆ ಕಾರ್ಯ ಪೂರ್ಣಗೊಳ್ಳುವದು ನಿಶ್ಚಿತ.-ಸಿದ್ದು ಕೊಣ್ಣೂರ, ಕಾಂಗ್ರೆಸ್ ಮುಖಂಡ, ತೇರದಾಳ ಕ್ಷೇತ್ರ
ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸುವ ಭರವಸೆ ನೀಡಿದ್ದ ಸಚಿವ ತಿಮ್ಮಾಪುರ ತಮ್ಮ ಭರವಸೆಯಂತೆ ನಡೆದುಕೊಂಡಲ್ಲಿ ಪ್ರಸಕ್ತ ವರ್ಷವೇ ಕಾಮಗಾರಿ ಲೋಕಾರ್ಪಣೆಗೊಳ್ಳಲಿದೆ. ಯೋಜನೆ ಪೂರ್ಣಗೊಂಡರೆ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯ ಸ್ಥಳಗಳ ಸಂಪರ್ಕ ಸಮೀಪವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿ ಪೂರ್ಣಗೊಳಿಸಬೇಕು.- ಚಿದಾನಂದ ಸೊಲ್ಲಾಪುರ ಕನ್ನಡಪರ ಹೋರಾಟಗಾರ ರಬಕವಿ