ಜನಸಾಮಾನ್ಯರ ಮನೆ- ಮನ ತಲುಪಿದ ಅಂಚೆ: ರಾಜೇಂದ್ರ ಕುಮಾರ್

| Published : Feb 09 2025, 01:33 AM IST

ಸಾರಾಂಶ

ವೃದ್ಧರು, ಅಶಕ್ತರು, ಮಕ್ಕಳು, ಮಹಿಳೆಯರಿಗೆ ಹಳ್ಳಿಯಿಂದ ದೆಹಲಿಯವರೆಗೆ ಇಲಾಖೆಯ ಎಲ್ಲ ಸವಲತ್ತುಗಳ ಬಗ್ಗೆ ಮಾರ್ಗದರ್ಶನದೊಂದಿಗೆ ಸೇವೆ ನೀಡುತ್ತಿರುವ ಅಂಚೆ ಇಲಾಖೆಯು ಜನರ ಮನೆ- ಮನಗಳನ್ನು ತಲುಪಿದೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಹೇಳಿದ್ದಾರೆ. ಕುಪ್ಪೆಪದವಿನಲ್ಲಿ ನೂತನ ಉಪ ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಪ್ಪೆ ಪದವಿನಲ್ಲಿ ನೂತನ ಉಪ ಅಂಚೆ ಕಚೇರಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಂಗಳೂರು

ವೃದ್ಧರು, ಅಶಕ್ತರು, ಮಕ್ಕಳು, ಮಹಿಳೆಯರಿಗೆ ಹಳ್ಳಿಯಿಂದ ದೆಹಲಿಯವರೆಗೆ ಇಲಾಖೆಯ ಎಲ್ಲ ಸವಲತ್ತುಗಳ ಬಗ್ಗೆ ಮಾರ್ಗದರ್ಶನದೊಂದಿಗೆ ಸೇವೆ ನೀಡುತ್ತಿರುವ ಅಂಚೆ ಇಲಾಖೆಯು ಜನರ ಮನೆ- ಮನಗಳನ್ನು ತಲುಪಿದೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಹೇಳಿದ್ದಾರೆ. ಕುಪ್ಪೆಪದವಿನಲ್ಲಿ ನೂತನ ಉಪ ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರ, ಪಾರ್ಸೆಲ್, ಮನಿಯಾರ್ಡರ್ ಜತೆಗೆ ಉಳಿತಾಯ ಖಾತೆಗಳು, ಜೀವ ವಿಮೆ, ನಾಗರಿಕ ಕೇಂದ್ರಿತ ಸೇವೆಗಳನ್ನು ಅಂಚೆ ಇಲಾಖೆ ನೀಡುತ್ತಿದ್ದು, ಉಳಿತಾಯ ಖಾತೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಅಡಿಯಲ್ಲಿ ದೇಶದಾದ್ಯಂತ ‘ಒಂದು ದೇಶ ಒಂದು ಐಎಸ್‌ಎಸ್‌ಸಿ ಕೋಡ್’ ಮೂಲಕ ಸರಳ ವ್ಯವಹಾರ ಸಾಧ್ಯಗೊಳಿಸಿದೆ ಎಂದರು.

ಕುಪ್ಪೆಪದವಿನ ಉಪ ಅಂಚೆ ಕಚೇರಿ ಒದಗಿಸುವ ಎಲ್ಲ ಸೌಲಭ್ಯಗಳನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜೇಂದ್ರ ಕುಮಾರ್‌ ಕರೆ ನೀಡಿದರು.

ಹಿರಿಯ ಅಂಚೆ ಅಧೀಕ್ಷಕ ಎಂ. ಸುಧಾಕರ ಮಲ್ಯ ಅವರು 1947ರಲ್ಲಿ ಶಾಖಾ ಅಂಚೆ ಕಚೇರಿಯಾಗಿ ಆರಂಭಗೊಂಡ ಕುಪ್ಪೆಪದವು ಅಂಚೆ ಕಚೇರಿ ಈಗ ಇಲಾಖಾ ಉಪ ಅಂಚೆ ಕಚೇರಿಯಾಗಿ ಉನ್ನತೀಕರಣಗೊಳ್ಳುವವರೆಗಿನ ಎಲ್ಲ ವಿಚಾರಗಳನ್ನು ಪ್ರಸ್ತುತಪಡಿಸಿದರು, ಇದರ ಬೆಳವಣಿಗೆಗೆ ಊರಿನವರ ಸಹಕಾರವನ್ನು ಸ್ಮರಿಸಿದರು.

ಕುಪ್ಪೆಪದವು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಮಲಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗ್ರಾಪಂ ಉಪಾಧ್ಯಕ್ಷ ಮಹಮ್ಮದ್ ಶರೀಫ್ ಅವರು ಇಲಾಖೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಕಿಂಗ್ಸ್‌ ಹಾರಿಜಾನ್‌ ಕಟ್ಟಡದ ಮಾಲೀಕ ಮುಸ್ತಾಫ, ಮಂಗಳೂರು ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆ ಪಾಲಕ ಶ್ರೀನಾಥ್ ಬಿ. ಇದ್ದರು.ಉಪ ಅಂಚೆ ಅಧೀಕ್ಷಕ ದಿನೇಶ್ ಪಿ. ಸ್ವಾಗತಿಸಿದರು. ಮಂಗಳೂರು ಪೂರ್ವ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಸಿ.ಪಿ. ಹರೀಶ್ ವಂದಿಸಿದರು. ವಿಭಾಗಿಯ ಕಚೇರಿ ಸಹಾಯಕ ವಿಲ್ಸನ್ ಡಿಸೋಜ ನಿರೂಪಿಸಿದರು.