ಸಾರಾಂಶ
ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ‘ಡಾ.ಜೀ.ಶಂ.ಪ. ಪ್ರಶಸ್ತಿ’ಗೆ ಮೈಸೂರಿನ ಡಾ.ಮೈಲಹಳ್ಳಿ ರೇವಣ್ಣ ಹಾಗೂ ‘ಡಾ.ಬಿ.ಎಸ್.ಗದ್ದಗಿಮಠ ಪ್ರಶಸ್ತಿ’ಗೆ ವಿಜಯನಗರದ ಡಾ.ವೆಂಕಟೇಶ ಇಂದ್ವಾಡಿ ಆಯ್ಕೆಯಾಗಿದ್ದಾರೆ.
ಬೆಂಗಳೂರು : ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ‘ಡಾ.ಜೀ.ಶಂ.ಪ. ಪ್ರಶಸ್ತಿ’ಗೆ ಮೈಸೂರಿನ ಡಾ.ಮೈಲಹಳ್ಳಿ ರೇವಣ್ಣ ಹಾಗೂ ‘ಡಾ.ಬಿ.ಎಸ್.ಗದ್ದಗಿಮಠ ಪ್ರಶಸ್ತಿ’ಗೆ ವಿಜಯನಗರದ ಡಾ.ವೆಂಕಟೇಶ ಇಂದ್ವಾಡಿ ಆಯ್ಕೆಯಾಗಿದ್ದಾರೆ. ವಾರ್ಷಿಕ ಪ್ರಶಸ್ತಿಗೆ ಡಾ.ಜೋಗಿಲ ಸಿದ್ದರಾಜು, ಸಿ.ಎಚ್.ಸಿದ್ದಯ್ಯ ಸೇರಿ 30 ಹಿರಿಯ ಜಾನಪದ ಕಲಾವಿದರು ಭಾಜನರಾಗಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಇಬ್ಬರು ಜಾನಪದ ಹಿರಿಯ ತಜ್ಞರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ತಲಾ 50 ಸಾವಿರ ರು.ನಗದು ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿ ತಲಾ 25 ಸಾವಿರ ರು. ನಗದು, ಸ್ಮರಣಿಕೆ ಒಳಗೊಂಡಿದೆ ಎಂದು ತಿಳಿಸಿದರು.
ವಾರ್ಷಿಕ ಪ್ರಶಸ್ತಿಗೆ ಬೆಂಗಳೂರು ನಗರದ ಡಾ.ಜೋಗಿಲ ಸಿದ್ದರಾಜು (ಜಾನಪದ ಗಾಯಕ), ಬೆಂಗಳೂರು ಗ್ರಾಮಾಂತರದ ಸಿ.ಎಚ್.ಸಿದ್ದಯ್ಯ (ತತ್ವಪದ ಮತ್ತು ಗೀಗೀ ಪದ), ರಾಮನಗರದ ಎಂ.ಮಹೇಶ್ (ಡೊಳ್ಳು ಕುಣಿತ), ಕೋಲಾರದ ಸುನಂದಮ್ಮ (ಕೋಲಾಟ), ಚಿಕ್ಕಬಳ್ಳಾಪುರದ ವೆಂಕಟರಮಣಪ್ಪ (ಅರೆವಾದ್ಯ ತಮಟೆ), ತುಮಕೂರಿನ ಸಿದ್ದಪ್ಪ (ಕಿನ್ನರಿಜೋಗಿ), ದಾವಣಗೆರೆಯ ಮಾರ್ತಾಂಡಪ್ಪ (ಭಜನೆ), ಚಿತ್ರದುರ್ಗದ ಎ.ಶ್ರೀನಿವಾಸ (ಹಗಲು ವೇಷ), ಶಿವಮೊಗ್ಗದ ಗೌರಮ್ಮ (ಹಸೆ ಚಿತ್ತಾರ), ಮೈಸೂರಿನ ಸಿ.ಮಂಜುನಾಥ್ (ಚರ್ಮವಾದ್ಯ ನಗಾರಿ) ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಮಂಡ್ಯದ ಹರುಗಲವಾಡಿ ರಾಮಯ್ಯ (ಜಾನಪದ ಗಾಯನ), ಹಾಸನದ ಬಿ.ಟಿ.ಮಾನಸ (ಕೋಲಾಟ), ಚಿಕ್ಕಮಗಳೂರಿನ ಬಿ.ಪಿ.ಪರಮೇಶ್ವರಪ್ಪ (ಭಜನೆ), ಚಾಮರಾಜನಗರದ ಆರ್.ಸಿದ್ದರಾಜು (ತಂಬೂರಿ ಪದ), ದಕ್ಷಿಣ ಕನ್ನಡದ ಜಯಂತಿ (ಪಾಡ್ಡನ್), ಉಡುಪಿಯ ಎನ್.ಗಣೇಶ್ ಗಂಗೊಳ್ಳಿ (ಜಾನಪದ ಗಾಯನ), ಕೊಡಗಿನ ಎಸ್.ಆರ್.ಸರೋಜ (ಬುಡಕಟ್ಟು ಕೋಲಾಟ, ಜೇನು ಕೊಯ್ಯವ ಹಾಡು ಮತ್ತು ನೃತ್ಯ), ಬೆಳಗಾವಿಯ ಕಮಲಾ ಮರಗನ್ನವರ (ಚೌಡಕಿ ಪದ), ಧಾರವಾಡದ ಪ್ರಭು ಬಸಪ್ಪ ಕುಂದರಗಿ (ಜಾನಪದ ಸಂಗೀತ), ವಿಜಯಪುರದ ಸೋಮಣ್ಣ ದುಂಡಪ್ಪ ಧನಗೊಂಡ (ಡೊಳ್ಳು ಕುಣಿತ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಬಾಗಲಕೋಟೆಯ ಗಂಗಪ್ಪ ಮ.ಕರಡಿ (ಕರಡಿ ಮಜಲು), ಉತ್ತರ ಕನ್ನಡದ ಗಣಪು ಬಡವಾಗೌಡ (ಹಾಲಕ್ಕಿ ಸುಗ್ಗಿ ಕುಣಿತ), ಹಾವೇರಿಯ ಗಿರಿಜವ್ವ ಹನುಮವ್ವ ಬಣಕಾರ (ಸಂಪ್ರದಾಯದ ಪದ, ಸೋಬಾನೆ ಪದ), ಗದಗದ ಡಾ.ಗೋವಿಂದಪ್ಪ ರಾಮಚಂದ್ರಪ್ಪ (ಹಗಲು ವೇಷ), ಕಲಬುರಗಿಯ ಬೋರಮ್ಮ (ತತ್ವಪದ), ಬೀದರ್‌ನ ಮಾರುತಿ ಕೋಳಿ (ಜನಪದ ಗಾಯನ), ರಾಯಚೂರಿನ ಯಲ್ಲಮ್ಮ (ತತ್ವಪದ), ಕೊಪ್ಪಳದ ಎಚ್.ಚಂದ್ರಶೇಖರ ಹಡಪದ (ಭಜನೆ), ಬಳ್ಳಾರಿಯ ಕೆ.ಶಂಕರಪ್ಪ (ಹಗಲು ವೇಷ), ಯಾದಗಿರಿಯ ಗೋಪಣ್ಣ (ತತ್ವಪದ ಅಥವಾ ಭಜನೆ ) ಆಯ್ಕೆಗೊಂಡಿದ್ದಾರೆ ಎಂದು ತಿಳಿಸಿದರು.
ಮಾ.15ರಂದು ಪ್ರಶಸ್ತಿ ಪ್ರದಾನ: ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಮಾತನಾಡಿ, ಮಾ.15ರಂದು ಬೀದರ್ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ 2023 ಮತ್ತು 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಅಕಾಡೆಮಿ ಸದಸ್ಯರಾದ ಡಾ.ಉಮೇಶ್, ಶಂಕ್ರಣ್ಣ ರಾಮಪ್ಪ ಸಂಕಣ್ಣನವರ, ರಂಗಪ್ಪ, ಕೆಂಕೆರೆ ಮಲ್ಲಿಕಾರ್ಜುನ, ಸಿ.ಎನ್.ಮಂಜೇಶ್ ಚೆನ್ನಾಪುರ, ಡಾ.ಹುಲಿಕುಂಟೆ ಮುರ್ತಿ, ದೇವಾನಂದ ವರಪ್ರಸಾದ್ ಸೇರಿ ಇತರರು ಇದ್ದರು.