ಹಿರಿಯ ಬರಹಗಾರರು ಕಿರಿಯ ಬರಹಗಾರನಲ್ಲಿರುವ ಸತ್ವವನ್ನು ಹಿಂದೆಲ್ಲಾ ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಕೃತಕ ಬುದ್ಧಿಮತ್ತೆ ಕಾಲದಲ್ಲಿ ಟನ್‌ಗಟ್ಟಲೆ ಬುದ್ಧಿವಂತಿಕೆಗಿಂತ ಗುಲಗುಂಜಿ ತೂಕದ ಪ್ರಾಮಾಣಿಕತೆ ಬೇಕು.
ಹೊನ್ನಾವರ: ಸೆಲ್ಫಿ ತೆಗೆಯುವುದರಲ್ಲಷ್ಟೆ ಹಿರಿಯ ಮತ್ತು ಕಿರಿಯ ಬರಹಗಾರರ ನಡುವೆ ಒಡನಾಟ ಮುಗಿಯಬಾರದು. ಕೆಲವು ಬರಹಗಾರರು ತಮ್ಮ ಬರಹದ ಪ್ರಚಾರಕ್ಕಾಗಿ ಯುವ ಪೀಳಿಗೆಯ ಬರಹಗಾರರನ್ನು ಸಾಕಿಕೊಂಡಿದ್ದಾರೆ ಎಂದು ಶಿವಮೊಗ್ಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಹಿರಿಯ ವಿದ್ವಾಂಸರಾದ ಡಾ. ಕುಮಾರಚಲ್ಯ ಹೇಳಿದರು.
ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಬರಹಗಾರರ ಸಮಾವೇಶ ಮತ್ತು ಸಾಹಿತ್ಯ ಪರಿಷತ್ ಆಜೀವ ಸದಸ್ಯರ ಸಭೆಯನ್ನ ಉದ್ಘಾಟಿಸಿ ಮಾತನಾಡಿದರು.ಹಿರಿಯ ಬರಹಗಾರರು ಕಿರಿಯ ಬರಹಗಾರನಲ್ಲಿರುವ ಸತ್ವವನ್ನು ಹಿಂದೆಲ್ಲಾ ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಕೃತಕ ಬುದ್ಧಿಮತ್ತೆ ಕಾಲದಲ್ಲಿ ಟನ್‌ಗಟ್ಟಲೆ ಬುದ್ಧಿವಂತಿಕೆಗಿಂತ ಗುಲಗುಂಜಿ ತೂಕದ ಪ್ರಾಮಾಣಿಕತೆ ಬೇಕು. ಕಾವ್ಯಕ್ಕೆ ಬೇಕಾಗಿರುವ ಸೂಕ್ಷ್ಮತೆ, ಸಂವೇದನೆ ಕೊರತೆ ಇಂದು ಕಾಣುತ್ತಿದೆ. ಕಾವ್ಯದ ಪರಂಪರೆಯ ಪ್ರಜ್ಞೆ ಮತ್ತು ವರ್ತಮಾನದ ಅರಿವು ಇರಬೇಕು ಎಂದರು. ಸಾಹಿತಿ ರೋಹಿದಾಸ ನಾಯ್ಕ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಂಭುಲಿಂಗೇಶ್ವರ ದೇವಸ್ಥಾನ ಗುಣವಂತೆಯ ಆಡಳಿತ ಮೊಕ್ತೇಸರ ಡಾ. ನರಸಿಂಹ ಪಂಡಿತ, ಸಾಹಿತಿ ಸುರೇಶ್ ನಾಯ್ಕ, ಸುಮುಖಾನಂದ ಜಲವಳ್ಳಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಉಪಸ್ಥಿತರಿದ್ದರು. ಇದೇ ವೇಳೆ ತಾಲೂಕಿನ ಹಿರಿಯ ಮತ್ತು ಕಿರಿಯ ಸಾಹಿತಿ, ಪತ್ರಕರ್ತರನ್ನು ಗೌರವಿಸಲಾಯಿತು. ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್. ಗೌಡ ಬರೆದ ಜಾನಪದ ನಳಂದ ಹನುಮಿ ಗೌಡ ಪುಸ್ತಕವನ್ನು ರೋಹಿದಾಸ್ ನಾಯ್ಕ ಹಾಗೂ ಡಾ. ಸತೀಶ್ ನಾಯ್ಕ ಬರೆದ ಜಾರ್ಜ್ ವಾಷಿಂಗ್ಟನ್ ಕಾರ್ವರ್ ಪುಸ್ತಕವನ್ನು ಡಾ. ನರಸಿಂಹ ಪಂಡಿತ್ ಲೋಕಾರ್ಪಣೆಗೊಳಿಸಿದರು.ಡಿ.ಜೆ. ನಾಯ್ಕ ಪ್ರಾರ್ಥಿಸಿದರು. ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಚ್.ಎಂ. ಮಾರುತಿ ಸ್ವಾಗತಿಸಿದರು. ಅಧ್ಯಕ್ಷ ಎಸ್.ಎಚ್. ಗೌಡ ಪ್ರಾಸ್ತಾವಿಕ ಮಾತನಾಡಿದರು. ಗಜಾನನ ನಾಯ್ಕ ವಂದಿಸಿದರು. ಮಹೇಶ ಭಂಡಾರಿ ನಿರ್ವಹಿಸಿದರು.