ಸಾರಾಂಶ
ಕುಷ್ಟಗಿ: ವಿದ್ಯಾರ್ಥಿನಿಯರಲ್ಲಿ ಋತುಚಕ್ರದ ಬಗ್ಗೆ ಕೀಳರಿಮೆ ಇರಬಾರದು. ಋತುಚಕ್ರದ ಸಂದರ್ಭದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ ಎಂದು ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಹೇಳಿದರು.ತಾಲೂಕಿನ ದೋಟಿಹಾಳ ಗ್ರಾಮದ ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ದಯಾನಂದಪುರಿ ಸಂಘ ಹಾಗೂ ಗಾಯತ್ರಿ ಮಹಿಳಾ ಸಂಘದ ಆಶ್ರಯದಲ್ಲಿ ನಡೆದ ಮಾಸಿಕ ಋತುಚಕ್ರದ ನೈರ್ಮಲ್ಯ ಆರೋಗ್ಯ ಕಾಳಜಿ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿನಿಯರು ಮುಟ್ಟಿನ ಸಮಯದಲ್ಲಿ ಪ್ಯಾಡ್ ಬಳಕೆ ನಿಲ್ಲಿಸಬೇಕು. ಇದರ ಬದಲಾಗಿ ನೂತನವಾಗಿ ಬಂದಿರುವ ಮುಟ್ಟಿನ ಕಪ್ಪುಗಳನ್ನು ಬಳಕೆ ಮಾಡುವುದರಿಂದ ಪರಿಸರ ಕಾಪಾಡಿದಂತೆ ಆಗುತ್ತದೆ. ಈ ಮುಟ್ಟಿನಕಪ್ಪು ಸುಮಾರು 10 ವರ್ಷಗಳ ತನಕ ಬಳಕೆ ಮಾಡಬಹುದಾಗಿದೆ. ಇದು ಒಬ್ಬರು ಮಾತ್ರ ಬಳಸಬೇಕು ಎಂದರು.ಆರೋಗ್ಯ ಸುರಕ್ಷಾಧಿಕಾರಿ ಸಲೀಮಾಬೇಗಂ ಅರಗಿದ್ದಿ ಮಾತನಾಡಿ, ಋತುಚಕ್ರದ ಅವಧಿಯಲ್ಲಿ ಮಹಿಳೆಯರು ಶುಚಿತ್ವ ಕಾಪಾಡಿಕೊಳ್ಳಬೇಕು. ಋತುಚಕ್ರದ ಅವಧಿಯಲ್ಲಿ ಭಾರವಾದ ಕೆಲಸ ಮಾಡಬಾರದು. ಮುಟ್ಟು ಶಾಪವಲ್ಲ, ಅದೊಂದು ಮಹಿಳೆಯರ ದೈಹಿಕ ಪ್ರಕ್ರಿಯೆ. ಯಾರು ಭಯಪಡುವಂತಹ ಅಗತ್ಯವಿಲ್ಲ ಎಂದರು.ನೋಡಲ್ ಅಧಿಕಾರಿ ತಿಮ್ಮಣ್ಣ ಹಿರೇಹೊಳಿ ಮಾತನಾಡಿ, ವಿದ್ಯಾರ್ಥಿನಿಯರು ಓದುವುದರ ಜೊತೆಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕರಾಟೆ ಕಲಿಯಬೇಕು. ಒಳ್ಳೆಯ ವಿದ್ಯಾಭ್ಯಾಸ ಕಲಿತುಕೊಂಡು ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಮುಂದಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಈರಮ್ಮ ಟೆಂಗುಂಟಿ, ಪೂರ್ಣಿಮಾ ದೇವಾಂಗಮಠ, ಗೀತಾ ಮಡಿವಾಳರ, ಶೈನಾಬಿ ಬಡಿಗೇರ, ಸುಮಿತ್ರಾ ಬಿರಾದಾರ, ಶ್ರೀನಿವಾಸ ಕಂಟ್ಲಿ, ಮಹಾದೇವಿ ಗೋತಗಿ ಸೇರಿದಂತೆ ಇತರರು ಇದ್ದರು.