ಸಾರಾಂಶ
- ಕನ್ನಡಪ್ರಭ ವರದಿ ಪ್ರಸ್ತಾಪಿಸಿ ನ್ಯಾ. ಬಿ.ವೀರಪ್ಪ ಶ್ಲಾಘನೆ । 15 ದಿನಗಳ ಗಡುವು - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಸ್ವಚ್ಛತೆ ಮರೆತ ಚನ್ನಗಿರಿ ಪುರಸಭೆ, ಚನ್ನಗಿರಿ ಪಟ್ಟಣದಲ್ಲಿ ಒತ್ತುವರಿ ತೆರವಾಗಿಲ್ಲ ಎಂಬ ಕನ್ನಡಪ್ರಭ ವರದಿಗಳು ಸೇರಿದಂತೆ ಮಾಧ್ಯಮಗಳ ವರದಿಗಳನ್ನು ಆಧರಿಸಿ ಲೋಕಾಯುಕ್ತದಲ್ಲಿ ದಾಖಲಿಸಿಕೊಂಡ ಸ್ವಯಂಪ್ರೇರಿತ ದೂರುಗಳ ಬಗ್ಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ವಿಚಾರಣೆಗೊಂಡರು.ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಬಾಕಿ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಬಿ.ವೀರಪ್ಪ, ಫೆ.25ರಂದು ಕನ್ನಡಪ್ರಭ ಸ್ವಚ್ಛತೆ ಮರೆತ ಪುರಸಭೆ ಎಂಬ ವರದಿ ಪ್ರಕಟಿಸಿದ್ದು, ಅದನ್ನು ಆಧರಿಸಿ ದಾಖಲಿಸಿದ್ದ ಪ್ರಕರಣ ವಿಚಾರಣೆ ಮಾಡಿದರು.
ಮುಖ್ಯಾಧಿಕಾರಿಗೆ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡ ಬಗ್ಗೆ ವಿವರವಾದ ವರದಿಯನ್ನು ಲೋಕಾಯುಕ್ತಕ್ಕೆ ನೀಡಬೇಕು. ಅಲ್ಲದೇ, ಪಟ್ಟಣದಲ್ಲಿ ಒತ್ತುವರಿ ತೆರವು ಕಾರ್ಯ ಕೈಗೊಂಡಿಲ್ಲವೆಂಬ ಕನ್ನಡಪ್ರಭ ವರದಿ ಹಿನ್ನೆಲೆ ಒತ್ತುವರಿ ತೆರವು ಕಾರ್ಯ ಕೈಗೊಂಡು, 15 ದಿನದಲ್ಲೇ ಲೋಕಾಯುಕ್ತ ಸಂಸ್ಥೆಗೆ ವರದಿ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.ಲೋಕಾಯುಕ್ತದಲ್ಲಿ ಬಾಕಿ ಇದ್ದ 114 ಪ್ರಕರಣಗಳ ವಿಚಾರಣೆ ನಡೆಸಿ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅಧಿಕಾರಿಗಳು ಮುಂದಾಗಬೇಕು. ಮಾಯಕೊಡ ಗ್ರಾಮದ ಪರಿಶಿಷ್ಟ ಜಾತಿ- ಪಂಗಡಗಳ ವಸತಿ ಶಾಲೆಯಲ್ಲಿ 38 ವಿದ್ಯಾರ್ಥಿಗಳು ಆಹಾರ ಸೇವಿಸಿ, ಅಸ್ವಸ್ಥಗೊಂಡಿದ್ದ ಹಿನ್ನೆಲೆ ಶಾಲೆ ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಉಪ ಲೋಕಾಯುಕ್ತರ ಸಮಕ್ಷಮ ಮುಖ್ಯೋಪಾಧ್ಯಾಯರು, ನಿಲಯ ಪಾಲಕರು ಸರಿಯಾದ ರೀತಿಯಲ್ಲಿ ಆಹಾರ ಬೇಯಿಸದೇ, ನೀಡಿದ್ದರಿಂದ ಮಕ್ಕಳು ಅಸ್ವಸ್ಥರಾಗಿದ್ದರು. ನಿಲಯ ಪಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಉಪ ಲೋಕಾಯುಕ್ತರ ಸಮಕ್ಷಮ ವಾಗ್ದಾನ ನೀಡಿದರು.
ಇದೇ ವೇಳೆ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಸಮಾಜಮುಖಿ ಹೀಗೆ ಸಾಮಾಜಿಕ ಕಳಕಳಿಯಿಂದ ವರದಿ ಮಾಡಿದ ಎಲ್ಲ ಪತ್ರಿಕೆಗಳು, ಪತ್ರಕರ್ತರ ಕಾರ್ಯಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಶ್ಲಾಘಿಸಿದರು. ಅನಂತರ ಸಾರ್ವಜನಿಕರು ವೈಯಕ್ತಿಕವಾಗಿ ಸಲ್ಲಿಸಿದ ದೂರುಗಳ ವಿಚಾರಣೆ ನಡೆಸಿದರು. 114 ಪ್ರಕರಣಗಳ ಪೈಕಿ 22 ಪ್ರಕರಣಗಳು ಸ್ಥಳದಲ್ಲೇ ಇತ್ಯರ್ಥಗೊಂಡವು.ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ. ರಾಜಶೇಖರ, ಎನ್.ವಿ. ಅರವಿಂದ, ವಿ.ಎನ್. ಮಿಲನ, ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಪೂರೆ, ಜಿಲ್ಲಾಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
- - --25ಕೆಡಿವಿಜಿ11:
ದಾವಣಗೆರೆ ಡಿಸಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ವಿವಿಧ ದೂರುಗಳ ವಿಚಾರಣೆ ಕಾರ್ಯಕ್ರಮ ಉದ್ಘಾಟಿಸಿದರು.