ಜಾನುವಾರಗಳ ಸಂರಕ್ಷಣೆ ಜೊತೆ ಸ್ವಚ್ಛತೆ ಕಾಪಾಡಿ: ಶ್ರೀರೂಪ

| Published : Apr 13 2024, 01:05 AM IST

ಜಾನುವಾರಗಳ ಸಂರಕ್ಷಣೆ ಜೊತೆ ಸ್ವಚ್ಛತೆ ಕಾಪಾಡಿ: ಶ್ರೀರೂಪ
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾನುವಾರುಗಳ ರಕ್ಷಣೆಗಾಗಿ ಗೋಶಾಲೆಗಳನ್ನು ಆರಂಭಿಸಿ ಅವುಗಳಿಗೆ ಆಹಾರ, ನೀರಿನ ಜೊತೆಗೆ ಆರೋಗ್ಯದ ಬಗ್ಗೆಯೂ ಗಮನ ನೀಡಲಾಗುತ್ತಿದೆ.

ಚಳ್ಳಕೆರೆ: ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾನುವಾರುಗಳ ರಕ್ಷಣೆಗಾಗಿ ಗೋಶಾಲೆಗಳನ್ನು ಆರಂಭಿಸಿ ಅವುಗಳಿಗೆ ಆಹಾರ, ನೀರಿನ ಜೊತೆಗೆ ಆರೋಗ್ಯದ ಬಗ್ಗೆಯೂ ಗಮನ ನೀಡಲಾಗುತ್ತಿದೆ. ನಿಗದಿತ ಪ್ರಮಾಣದಲ್ಲಿ ಮೇವು ವಿತರಣೆ ಮಾಡಿ, ಜಾನುವಾರುಗಳಿಗೆ ಮೇವು ನೀಡುವ ಸಂದರ್ಭದಲ್ಲಿ ತಿನ್ನಲು ಅನುಕೂಲವಾಗುವಂತೆ ಮೇವು ಕತ್ತರಿಸಿ ಕೊಡಿ ಎಂದು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಆಯುಕ್ತೆ ಎ.ಶ್ರೀರೂಪ ನಿರ್ದೇಶನ ನೀಡಿದರು.

ತಾಲೂಕಿನ ಅಜ್ಜಯ್ಯನಗುಡಿ ರಸ್ತೆ, ಚೌಳೂರು, ದೊಡ್ಡಉಳ್ಳಾರ್ತಿ ಹಾಗೂ ಹಿರೇಕೆರೆಕಾವಲಿನಲ್ಲಿರುವ ಗೋಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಜಾನುವಾರುಗಳಿಗೆ ವಿತರಣೆಯಾಗುತ್ತಿರುವ ಮೇವು, ನೀರು, ಇನ್ನಿತರೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ರತಿಯೊಂದು ಗೋಶಾಲೆಯಲ್ಲೂ ಸ್ವಚ್ಛತೆ ಕಾಪಾಡಿ, ಯಾವುದೇ ಕಾರಣಕ್ಕೂ ಗೋಶಾಲೆ ಒಳ ಮತ್ತು ಹೊರ ಆವರಣದಲ್ಲಿ ತ್ಯಾಜ್ಯ ವಸ್ತುಗಳ ಸಂಗ್ರಹ ಮಾಡಬೇಡಿ, ಗೋಶಾಲೆ ಎಂದರೆ ಸುಂದರ ಪರಿಸರ ಎಂಬ ಭಾವನೆ ಮೂಡಬೇಕು ಎಂದರು.

ಪಶುವೈದ್ಯ ಇಲಾಖೆ ಉಪನಿರ್ದೇಶಕ ಕುಮಾರ್, ಗೋಶಾಲೆ ನಿರ್ವಹಣೆಯಲ್ಲಿ ಈಗಾಗಲೇ ಹಲವು ಬಾರಿ ಅಧಿಕಾರಿಗಳ ತಂಡ ಭೇಟಿ ನೀಡಿ ಸೂಚನೆ ನೀಡಿದ್ದೇವೆ ಎಂದರು.

ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣ ಮಾಹಿತಿ ನೀಡಿ, ಹಿರೇಕೆರೆ ಕಾವಲ್‌ನಲ್ಲಿ ೮೫೦, ಚೌಳೂರು-೪೯೦, ದೊಡ್ಡ ಉಳ್ಳಾರ್ತಿ ೪೮೦, ಅಜ್ಜಯ್ಯನಗುಡಿ ೩೭೫ ಜಾನುವಾರುಗಳಿದ್ದು, ಅವುಗಳಿಗೆ ಪ್ರತಿನಿತ್ಯ ನೀರು, ಮೇವು ಒದಗಿಸುವುದಲ್ಲದೇ ಆರೋಗ್ಯ ತಪಾಸಣೆಯನ್ನೂ ಸಹ ಮಾಡಲಾಗುತ್ತಿದೆ. ಪ್ರಸ್ತುತ ಜಾನುವಾರುಗಳಿಗೆ ನಿಯಮಗಳಡಿ ಮೇವು ನೀಡಲಾಗುತ್ತಿದೆ ಮೇವಿನ ಕೊರತೆ ಇಲ್ಲ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಪಶುವೈದ್ಯಾಧಿಕಾರಿ ಡಾ.ಇಂದ್ರಬಾಯಿ, ಉಪಕೃಷಿ ನಿರ್ದೇಶಕ ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ಇದ್ದರು.