ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆ ನಡೆಯಿತು. ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮದ ಬಗ್ಗೆ ಸಂಪೂರ್ಣ ನಿಗಾ ವಹಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಹೇಳಿದರು.
ಕುಕನೂರು: ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮದ ಬಗ್ಗೆ ಸಂಪೂರ್ಣ ನಿಗಾ ವಹಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಗ್ರಾಮದ ಕುರಿತು ನೀರಿನ ಸಮಸ್ಯೆ ಬಗ್ಗೆ ಪಟ್ಟಿ ಮಾಡಬೇಕು. ಪ್ರತಿ ಗ್ರಾಮಗಳ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಿ. ಕುಡಿಯುವ ನೀರಿನ ಪರೀಕ್ಷೆ ಸಹ ಮಾಡಿಸಬೇಕು. ಗ್ರಾಮಗಳಿಗೆ ತೆರಳದೇ ನೀರಿನ ಪರೀಕ್ಷೆ ಬಗ್ಗೆ ಹಳೆಯ ಫೋಟೋ ಹಚ್ಚಬೇಡಿ. ಅದು ಒಳ್ಳೆಯದು ಅಲ್ಲ ಎಂದು ಪಿಡಿಒ ಅವರಿಗೆ ಸೂಚಿಸಿದರು.ಭೂ ಗ್ಯಾರಂಟಿಯಲ್ಲಿ 42,791 ಆಸ್ತಿ ಪೈಕಿ ಈಗಾಗಲೇ 27,000 ಇ-ಸ್ವತ್ತು ನೀಡಿದೆ. ಮುಖ್ಯ ಆಗಿ ಗ್ರಾಮ ಠಾಣಾ ವ್ಯಾಪ್ತಿಯ ಆಸ್ತಿ ಬಳಕೆದಾರರಿಗೆ ಡಿಜಿಟಲ್ ದಾಖಲಾತಿ ನೀಡುವ ಕಾರ್ಯ ಆಗುತ್ತಿದೆ. ಟ್ಯಾಕ್ಸ್ ಹಾಗೂ ಕರೆಂಟ್ ಬಿಲ್ ತುಂಬುತ್ತಿರುವ 14000 ಆಸ್ತಿಗಳಿಗೆ ಈ-ಸ್ವತ್ತು ನೀಡಲಾಗುತ್ತಿದೆ. ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಶೇ. 100 ಕಾರ್ಯ ಮಾಡಬೇಕು ಎಂದರು.
ಪ್ರಜಾಸೇವೆಯಲ್ಲಿ ಗಮನಕ್ಕೆ ಬಂದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕು. ಮನೆ ಕೇಳಿದವರಿಗೂ ಯೋಜನೆ ಬಂದಾಗ ಆದ್ಯತೆ ನೀಡಬೇಕು ಎಂದರು.ಪಶುಸಂಗೋಪನಾ ಇಲಾಖೆಯಡಿ ಇಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಹುಚ್ಚುನಾಯಿ ಕಡಿತದಿಂದ ಐದು ಹಸುಗಳು ಅಸು ನೀಗಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಜಾನುವಾರುಗಳಿಗೆ ಮೂರು ಹಂತದ ಲಸಿಕೆ ನೀಡುವ ಮೂಲಕ ರೇಬಿಸ್ ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಶು ವೈದ್ಯಾಧಿಕಾರಿ ಸುರೇಶ್ ಸರಗಣಾಚಾರ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯಡಿ ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಹಾಗೂ ಕುಕನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಕ್ಕ ಕೆಫೆ ಪ್ರಾರಂಭಿಸುವ ಕುರಿತು ಚರ್ಚಿಸಲಾಯಿತು.ಕೃಷಿ ಇಲಾಖೆಯಡಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಎಲ್ಲ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ತಾಪಂ ಇಒ ಬೆಟ್ಟದಪ್ಪ ಮಾಳೆಕೊಪ್ಪ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವರಾಜ ತೇರಿನ, ಕೆಇಬಿ ಅಧಿಕಾರಿ ನಾಗರಾಜ, ಕೆಎಸ್ಆರ್ಟಿ ಅಧಿಕಾರಿ ಕನಕಾಚಲಪತಿ, ಉಪ ವಲಯ ಅರಣ್ಯಾಧಿಕಾರಿ, ಪಿಡಿಒಗಳಾದ ನೀಲಂ ಚಳಗೇರಿ, ಪರಶುರಾಮ, ಸಿದ್ಧನಗೌಡ, ವೀರನಗೌಡ, ಶರಣಪ್ಪ, ತಾಪಂ ಅಧಿಕಾರಿಗಳಾದ ಬಸಲಿಂಗಪ್ಪ ಹಂಚಿನಾಳ, ಆನಂದ ಗರೂರು, ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ಪ್ರವೀಣ ಇತರರಿದ್ದರು.