ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಎಲ್ಲಾ ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಕಾಯಂ ಗೊಳಿಸಬೇಕು, ಗುತ್ತಿಗೆಕಾರ್ಮಿಕರಿಗೆ ಸುಪ್ರೀಂಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತುಮಕೂರಿನಲ್ಲಿ ಸಿಐಟಿಯು ನೇತೃತ್ವದಲ್ಲಿ ಮುನಿಸಿಪಲ್ ಮತ್ತು ಆಸ್ಪತ್ರೆ ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.ತುಮಕೂರು ನಗರದ ಟೌನ್ ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಛೇರಿ ನೂರಾರು ಕಾರ್ಮಿಕರು ಬೃಹತ್ ಮೇರವಣಿಗೆ ನಡೆಸಿದರು.ಗುತ್ತಿಗೆ ಕಾರ್ಮಿಕರ ಸೇವೆ ಸಹಕಾರಿ ಸಂಘದಡಿಯಲ್ಲಿ ತರುವ ಯೋಜನೆ ನಿಲ್ಲಿಸಬೇಕು. ಎಲ್ಲಾ ಗುತ್ತಿಗೆ ಕಾರ್ಮಿಕರ ನೇರ ಪಾವತಿಯಡಿಯಲ್ಲಿ ನೇಮಿಸಬೇಕು.ರಾಜ್ಯ ಸರ್ಕಾರ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡುವ ಕಾರ್ಮಿಕ ಇಲಾಖೆ ಸಿದ್ದಪಡಿಸಿರುವ ಗುತ್ತಿಗೆ ಕಾರ್ಮಿಕರ ಖಾಯಂಮಾತಿಗೆ ಸಂಬಂಧಿಸಿದ ಕಾಯಿದೆಯನ್ನು ಚಳಿಗಾಲದ ವಿಧಾನ ಸಭಾ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು ಕೆಲಸಗಳನ್ನು ಗುತ್ತಿಗೆ, ಹೊರ ಗುತ್ತಿಗೆ ಅಡಿಯಲ್ಲಿ ದುಡಿಸುವ ಮತ್ತು ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ ನೀಡದೆ ದುಡಿಸುತ್ತಿರುವ ಸರ್ಕಾರದ ಧೊರಣೆಯು ಕಾನೂನು ವಿರೋಧಿ ನಡೆ ಎಂದು ಟೀಕಿಸಿದರು.ಈ ಕಾರ್ಮಿರನ್ನು ಸಹಕಾರ ಸಂಘದಡಿಯಲ್ಲಿ ತರುವ ಮೂಲಕ ಶಾಶ್ವತವಾಗಿ ಖಾಯಂ ಆಗದೆ ಇರುವಂತೆ ಮಾಡುವುದು ಸರಿಯಲ್ಲ. ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ಪದ್ದತಿಯಡಿ ದುಡಿಯುತ್ತಿರುವ ಎಲ್ಲರ ಸೇವೆಗಳನ್ನು ಖಾಯಂ ಮಾಡುವಂತೆ ಅಗ್ರಹಿಸಿದರು.ಮುನಿನಸಿಪಾಲಿಟಿಗಳಲ್ಲಿ ನೇರ ಪಾವತಿಯಡಿಯಲ್ಲಿ ಪೌರಕಾರ್ಮಿಕರನ್ನು ತಂದು ಖಾಯಂ ಮಾಡಿದಂತೆ ,ಇತರೆ ಕಸದ ವಾಹನ ಚಾಲಕರು, ಸಹಾಯಕರು, ನೀರು ಸರಬರಾಜು ನೌಕರರು, ಜೆ.ಸಿ.ಬಿ. ವಾಹನ ಚಾಲಕರು. ಘನ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಮಿಕರು, ಯು.ಜಿ.ಡಿ ಕಾರ್ಮಿಕರು. ಪಾರ್ಕ್ ಕಾರ್ಮಿಕರು, ಶೌಚಾಲಯ ಕಾರ್ಮಿಕರು, ಕಂಪ್ಯೂಟರ್ ಆಪರೇಟರ್‌ಗಳು ಸೇವೆಗಳನ್ನು ನೇರ ಪಾವತಿಯಡಿ ತಂದು ಹಂತ ಹಂತವಾಗಿ ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.ನೀರು ಸರಬರಾಜು ನೌಕರರ ಸಂಘದ ಕೆ.ಕುಮಾರ್ ಮಾತನಾಡಿ ನಮಗೆ ಮಲತಾಯಿ ಧೋರಣೆ ಯಾಕೆ, ನಮ್ಮನ್ಮು ತಾರತಮ್ಯ ಮಾಡಬೇಡಿ ಎಂದು ಮನವಿ ಮಾಡಿದರು.ಕಸದ ಅಟೋಚಾಲಕರು, ಸಹಾಯಕರು, ಲೋಡರ್‌ಗಳು, ಮತ್ತು ಕ್ಲೀನರ್ ಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಅವರು ನಾವು ಕಸದಲ್ಲೇ ಬದುಕು ಸಾಗಿಸುತ್ತಿದ್ದೇವೆ. ನಮ್ಮನ್ನು ಕಸದಂತೆ ಕಾಣದೆ ಸರ್ಕಾರ ಸಮಾನ ವೇತನ ನೀಡಿ , ನೇರ ಪಾವತಿಗೆ ತನ್ನಿ ಎಂದು ಆಗ್ರಹಿಸಿದರು.
ವಾಹನ ಚಾಲಕರ ಸಂಘದ ಪ್ರಕಾಶ್, ಯುಜಿಡಿಕಾರ್ಮಿಕರ ಸಂಘದ ಸಂಜೀವಯ್ಯ, ಕಂಪ್ಯೂಟರ್ ಅಪ್‌ರೇಟರ್ ಗಳ ಸಂಘದ ಸವಿತಾ, ಅಸ್ವತ್ರೆ ಕಾರ್ಮಿಕರ ಸಂಘದ ನೇತ್ರಾವತಿ , ಮುನಿಪಲ್ ಕಾರ್ಮಿಕರ ಸಂಘದ ರಘು ಬಿಳಿಗೇರೆ, ಸಿರಾ ಪೌರ ಕಾರ್ಮಿಕರ ಸಂಘದ ರಾಮಚಂದ್ರ, ಸಿಐಟಿಯು ಎನ್.ಕೆ. ಸುಬ್ರಮಣ್ಯಂ ಪೀಟ್ ವೇಲ್ ಕಾರ್ಮಿಕರ ಸಂಘ ಪ್ರಧಾನ ಕಾರ್ಯಧರ್ಶಿ ಸುಜೀತ್ ನಾಯಕ್, ರಂಗಧಾಮಯ್ಯಅವರು ಮಾತನಾಡಿದರು .ತುಮಕೂರು ಮಹಾ ನಗರ ಪಾಲಿಕೆ ಕಸದ ಆಟೋ ಚಾಲಕರು ಮತ್ತು ಸಹಾಯಕರ ಸಂಘದ ಖಜಾಂಚಿ ಮಂಜುನಾಥ್, ಶ್ರೀನಿವಾಸಮೂರ್ತಿ, ಇರ್ಫಾನ್, ತುಮಕೂರು ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ಚಂದ್ರಪ್ಪ, ಕಾರ್ಯದರ್ಶಿ ಮಂಜುನಾಥ್, ಮಹಾ ನಗರ ಪಾಲಿಕೆ ವಾಹನ ಚಾಲಕರ ಸಂಘದ ಕಾರ್ಯದರ್ಶಿ ಅಪ್ಸರ್, ಖಜಾಂಚಿ, ಎನ್. ನಾಗರಾಜು, ಮತ್ತಿತರರು ಮುಂದಾಳತ್ವ ವಹಿಸಿದ್ದರು. ಸಂಜೆ ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಸಿ.ಯೋಗನಂದ ಅವರ ಜೊತೆಯಲ್ಲಿ ಪ್ರತಿಭಟನಾಕಾರರ ಮುಖಂಡರ ಸಭೆ ನಡೆಸಿ ಅಹವಾಲು ಗಳನ್ನು ಆಲಿಸಲಾಯಿತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಭೆ ನಡೆಸುವತೆ ಪ್ರತಿಭಟನಾಕಾರರು ಒತ್ತಾಯಿಸಿದರು.