ಸಣ್ಣ ಪುಟ್ಟ ಘಟನೆಗಳಿಗೂ ಅವಕಾಶ ಮಾಡಿಕೊಡದಂತೆ ಸಾಮರಸ್ಯ ಕಾಪಾಡಿ

| Published : Aug 20 2025, 01:30 AM IST

ಸಣ್ಣ ಪುಟ್ಟ ಘಟನೆಗಳಿಗೂ ಅವಕಾಶ ಮಾಡಿಕೊಡದಂತೆ ಸಾಮರಸ್ಯ ಕಾಪಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ಪಟ್ಟಣ ವ್ಯಾಪ್ತಿಯಲ್ಲಿ ಈ ಹಿಂದೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜನೆಗೂ ಮುನ್ನ ನಡೆಸಿದ ಮೆರವಣಿಗೆ ಸಂದರ್ಭದಲ್ಲಿ ಯಾವೆಲ್ಲಾ ಘಟನೆಗಳು ಸಂಭವಿಸಿವೆ ಎಂಬುದು ಗೊತ್ತಿದೆ. ಹಾಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ವೇಳೆ ಎರಡೂ ಸಮುದಾಯದವರು ಸಾಮರಸ್ಯ ಕಾಪಾಡಿಕೊಳ್ಳಬೇಕು. ನಿಯಮ ಉಲ್ಲಂಘಿಸಿದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಪಟ್ಟಣದ ಹೊರವಲಯ ಎಂಆರ್‌ಪಿ ಸಮುದಾಯ ಭವನದಲ್ಲಿ ಗೌರಿಗಣೇಶ ಮತ್ತು ಈದ್‌ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಾಮರಸ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಸಣ್ಣ ಪುಟ್ಟ ಘಟನೆಗಳಿಗೂ ಅವಕಾಶ ಕೊಡದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ಈ ಹಿಂದೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜನೆಗೂ ಮುನ್ನ ನಡೆಸಿದ ಮೆರವಣಿಗೆ ಸಂದರ್ಭದಲ್ಲಿ ಯಾವೆಲ್ಲಾ ಘಟನೆಗಳು ಸಂಭವಿಸಿವೆ ಎಂಬುದು ಗೊತ್ತಿದೆ. ಹಾಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕು ಎಂದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ದಿನಾಂಕ, ಮೆರವಣಿಗೆಯ ಮಾರ್ಗಗಳನ್ನು ಪೊಲೀಸ್ ಇಲಾಖೆ ಅನುಮತಿ ಪಡೆದು ಅದರಂತೆಯೇ ನಡೆಸಬೇಕು. ಇದರಲ್ಲಿ ಬದಲಾವಣೆಯಾದರೆ ಕಾನೂನು ಕ್ರಮ ಜರುಗಿಸಲಾಗುವುದು. ಅನುಮತಿ ಪಡೆದ ನಿಗಧಿತ ದಿನಾಂಕ ಹಾಗೂ ಮಾರ್ಗದಲ್ಲಿಯೇ ವಿಸರ್ಜನಾ ಪೂರ್ವ ಮೆರವಣಿಗೆ ಸಾಗಿದರೆ ಅದಕ್ಕೆ ತಕ್ಕಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದರು.

ಡಿಜೆ ಬಳಕೆಗೆ ಕೆಲವು ನಿಯಮಗಳಿವೆ. ಜನವಸತಿ ಪ್ರದೇಶವಾಗಿರುವುದರಿಂದ ನಿಗಧಿತ ಪ್ರಮಾಣದಲ್ಲಿ ಧ್ವನಿರ್ವಧಕ ಬಳಸಬೇಕು. ಅದನ್ನು ಮೀರಿದರೆ ಕಾನೂನು ಕ್ರಮ. ಎರಡು ಅಥವಾ ಮೂರು ಸ್ಪೀಕರ್‌ಬಾಕ್ಸ್ ಇರಿಸಿ ಹೆಚ್ಚೆಂದರೆ 4 ಸ್ಪೀಕರ್‌ ಬಾಕ್ಸ್‌ಗಳಲ್ಲಿ ಡಿಜೆ ಹಾಕಿಕೊಳ್ಳಬಹುದು ಎಂದರು.

ಈದ್ ಮಿಲಾದ್ ಹಬ್ಬದಂದು ಕೂಡ ಅನ್ನದಾನ ಹಾಗೂ ಪ್ರಾರ್ಥನೆ ಮಾತ್ರ ಇರಲಿದ್ದು, ಯಾವುದೇ ಮೆರವಣಿಗೆಗೆ ಅವಕಾಶವಿವಿಲ್ಲ. ಪೊಲೀಸ್ ಇಲಾಖೆ ಜೊತೆ ಎರಡು ಸಮುದಾಯದವರು ಸಹಕರಿಸಿ ಹಬ್ಬಗಳನ್ನು ಯಶಸ್ವಿಗೊಳಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕೆಂದು ಮನವಿ ಮಾಡಿದರು.

ಸಾಮೂಹಿಕವಾಗಿ ಗಣೇಶ ವಿಸರ್ಜನೆ:

ಪಟ್ಟಣದಲ್ಲಿ ಕಳೆದ ವರ್ಷ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಿಂದ ಈ ಬಾರಿ ಪಟ್ಟಣದ ಸುಮಾರು 10 ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು 9ನೇ ದಿನಕ್ಕೆ ಸಾಮೂಹಿಕ ಮೆರವಣಿಗೆ ನಡೆಸಿ ವಿಸರ್ಜಿಸಲು ನಿರ್ಧರಿಸಿರುವುದಾಗಿ ಹಿಂದೂ ಪರ ಸಂಘಟನೆಗಳ ಮುಖಂಡರು ಮಾಹಿತಿ ನೀಡಿದರು. ಮೆರವಣಿಗೆ ಸಾಗುವ ಮಾರ್ಗವನ್ನು ಬದಲಿಸದೆ ನಿಗಧಿತ ಸಮಯದೊಳಗೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಪಟ್ಟಣದ ಐತಿಹಾಸಿಕ ಶ್ರೀಕೋಟೆವಿದ್ಯಾಗಣಪತಿ ಮೂರ್ತಿಯನ್ನು ಮಾತ್ರ ಈ ಹಿಂದಿನ ಪ್ರತೀತಿಯಂತೆ ಪ್ರತಿಷ್ಠಾಪಿಸಿದ 48 ನೇ ದಿನಕ್ಕೆ ಪಟ್ಟಣದ ಮೈಸೂರು ರಸ್ತೆಯ ಮಸೀದಿ ಮುಂಭಾಗ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ಹಂಪೆ ಅರಸನಕೊಳದಲ್ಲಿ ವಿಸರ್ಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಹೊರಗಿನವರಿಗೆ ಅವಕಾಶ ನೀಡಬೇಡಿ:

ಗಣೇಶ ವಿಸರ್ಜನೆ ಮೆರವಣಿಗೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊರಗಿನ ವಿವಿಧ ಸಂಘಟನೆಗಳ ಮುಖಂಡರಿಗೆ ಅವಕಾಶ ನೀಡದೆ ಸ್ಥಳೀಯವಾಗಿ ನೀವುಗಳೇ ಪಾಲ್ಗೊಂಡು ಯಶಸ್ವಿಗೊಳಿಸಿ. ಅದರಂತೆ ಮುಸ್ಲಿಂ ಮುಖಂಡರು ಕೂಡ ಹೊರಗಿನವರನ್ನು ಕರೆಸದೆ ಸ್ಥಳೀಯವಾಗಿರುವವರೇ ಮುಂದೆ ನಿಂತು ಹಬ್ಬ ಆಚರಣೆಗಳನ್ನು ಮಾಡಿ ಹೊರಗಿನವರನ್ನು ಆಹ್ವಾನಿಸುವುದಿದ್ದರೆ ಇಲಾಖೆ ಗಮನಕ್ಕೆ ತರುವುದು ಕಡ್ಡಾಯ ಎಂದು ಎಸ್ಪಿ ಸೂಚಿಸಿದರು.

ಸಭೆಯಲ್ಲಿ ಹಿಂದೂ ಮತ್ತು ಮುಸ್ಲೀಂ ಸಮುದಾಯದ ಮುಖಂಡರಿಂದ ಮಾಹಿತಿ ಹಾಗೂ ಅಭಿಪ್ರಾಯ ಸಂಗ್ರಹಿಸಲಾಯಿತು. ಎಎಸ್ಪಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಡಿವೈಎಸ್ಪಿ ಬಿ.ಚಲುವರಾಜು ಮಾತನಾಡಿದರು. ತಹಸೀಲ್ದಾರ್ ಜಿ.ಆದರ್ಶ, ಸಿಪಿಐ ನಿರಂಜನ್, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಪಿಎಸ್‌ಐಗಳಾದ ರಾಜೇಂದ್ರ, ರವಿಕುಮಾರ್, ಮಾರುತಿ ಸೇರಿದಂತೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ಎರಡೂ ಸಮುದಾಯದ ಮುಖಂಡರು ಇದ್ದರು.