ಸಾರಾಂಶ
- ವಿಶ್ವ ಹೃದಯ ದಿನದ ಅಂಗವಾಗಿ ವಾಕಥಾನ್- ಹೃದಯ ತಪಾಸಣಾ ಶಿಬಿರ,
ಕನ್ನಡಪ್ರಭ ವಾರ್ತೆ, ಕಡೂರುವೇಗದ ಜೀವನ ವಿಧಾನದಲ್ಲಿ ಪ್ರತಿಯೊಬ್ಬರೂ ಚಟುವಟಿಕೆಯ ಜೀವನಶೈಲಿ ಅನುಸರಿಸಬೇಕು. ಯೋಗ, ವ್ಯಾಯಾಮ, ಏರೋಬಿಕ್ಸ್, ನಡಿಗೆ ಮೊದಲಾದ ಕ್ರಿಯೆಗಳ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ತಪಾಸಣೆಗೆ ಒಳಪಡುವುದೂ ಮುಖ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಸೋಮವಾರ ವಿಶ್ವ ಹೃದಯ ದಿನದ ಅಂಗವಾಗಿ ಚೇತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಯೋಜಿಸಿದ್ದ ವಾಕಥಾನ್ ಮತ್ತು ಹೃದಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಜೀವನ ಶೈಲಿಯಲ್ಲಿನ ಬದಲಾವಣೆಗಳಿಂದ ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ. ಕೋವಿಡ್ ನಂತರ ಹಠಾತ್ ಸಾವುಗಳು ಜನರನ್ನು ಕಾಡಿವೆ. ಯುವ ಜನರು ಕ್ರೀಡೆಗಳಲ್ಲಿ ಪಾಲ್ಗೊಂಡು, ವ್ಯಾಯಾಮ ಅನುಸರಿಸಿ ನಿಮ್ಮ ಆರೋಗ್ಯಯುತ ಬದುಕಿಗೆ ಭದ್ರ ಬುನಾದಿ ನಿರ್ಮಿಸಿಕೊಳ್ಳಿ ಎಂದು ಸಲಹೆ ನೀಡಿದರು.
ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ. ಕಡೂರು ಪಟ್ಟಣದಲ್ಲಿ ಚೇತನ ಆಸ್ಪತ್ರೆಯು ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಗಾಗ್ಗೆ ಆಯೋಜಿಸಿ ಸಾಮಾಜಿಕವಾಗಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಆಧುನಿಕ ಯುಗದಲ್ಲಿ ಒತ್ತಡ ಮತ್ತು ಜವಾಬ್ದಾರಿ ನಿರ್ವಹಿಸುವಲ್ಲಿ ಮುಂದಾಗಿ ಆರೋಗ್ಯ ನಿರ್ಲಕ್ಷಿಸುವ ಜನರು ಆರೋಗ್ಯ ನಿರ್ವಹಣೆಗೆ ಒತ್ತು ಕೊಡದ ಪರಿಣಾಮ ರೋಗಕ್ಕೆ ತುತ್ತಾಗುತ್ತಾರೆ. ಈಗಿನ ಯುವಜನರ ಆದ್ಯತೆ ಫಲವಾಗಿ ಹಳ್ಳಿ ಹಳ್ಳಿಗಳಲ್ಲಿ ಬೇಕರಿ, ಬೀದಿ ಬದಿ ತಿನಿಸುಗಳು ಲಭ್ಯವಿದೆ. ನಿಮ್ಮ ಆರೋಗ್ಯಕ್ಕೆ ಉತ್ತಮ ಆಹಾರವೇ ಪೂರಕ ಎನ್ನುವ ಅರಿವು ನಿಮಗಿರಲಿ. ಸಮತೋಲಿತ ಆಹಾರ, ಚಟುವಟಿಕೆ ನಿಮ್ಮ ಬದುಕಿನ ಅಂಗ ವಾಗಲಿ. ಚೇತನ ಆಸ್ಪತ್ರೆಯವರು ಕಡೂರಿನಲ್ಲಿ ಸ್ಮರಣೀಯ ಸೇವೆ ನೀಡುತ್ತಿದ್ದು, ನನ್ನ ಸಲಹೆ ಎಂದರೆ ಹೃದಯಾಘಾತದ ಸಂದರ್ಭದಲ್ಲಿ ಜನರ ಮೊದಲ ಸಂಪರ್ಕವಾದ ಆಟೊ ಅಥವಾ ಟ್ಯಾಕ್ಸಿ ಚಾಲಕರಿಗೆ ತುರ್ತು ಸಂದರ್ಭದಲ್ಲಿ ರೋಗಿಗೆ ಒದಗಿಸಬಹುದಾದ ಮೊದಲ ಚಿಕಿತ್ಸೆ ತರಬೇತಿ ನೀಡಿ ಅವರನ್ನು ಹೃದಯ ರಕ್ಷಿಸುವ ಮುಂದಾಳುಗಳಾಗಿಸಿ ಎಂದು ಕೋರಿದರು.ತಜ್ಞ ವೈದ್ಯ ಡಾ.ಸಿ.ಮನೋಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದ್ರೋಗ ವ್ಯಾಪಕವಾಗುತ್ತಿದೆ. ಜನರು ತಮ್ಮ ಹೃದಯದ ಕಾಳಜಿ ಮಾಡಲು ಉತ್ತಮ ಆಹಾರ, ತರಕಾರಿ , ಹಣ್ಣುಗಳನ್ನು ಬಳಸಬೇಕು. ನಮಗಾಗಿ ಮಿಡಿಯುವ ಹೃದಯ ಕ್ಕಾಗಿ ವ್ಯಾಯಾಮ, ನಡಿಗೆ, ಈಜು, ಸೈಕ್ಲಿಂಗ್‌ನಂತಹ ಚಟುವಟಿಕೆಗಳಲ್ಲಿ ನಿತ್ಯ 30 ರಿಂದ 45 ನಿಮಿಷಗಳ ಕಾಲ ತೊಡಗಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಕಡೂರು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಕೆ. ರಾಜಣ್ಣ, ಡಾ.ಸುರೇಂದ್ರನಾಥ್, ಉಪನ್ಯಾಸಕ ಎನ್.ಸೋಮಶೇಖರ್, ರೋಟರಿ ಸಂಸ್ಥೆಯ ಮಂಜುನಾಥ್, ಪುಂಡಲೀಕರಾವ್, ಗೋಪಾಲಕೃಷ್ಣ, ರವೀಂದ್ರ, ಮುಕುಂದರಾವ್, ಮತ್ತು ಇನ್ನರ್ ವ್ಹೀಲ್ ಪದಾಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.29 ಕೆಸಿಕೆಎಂ 2ಕಡೂರು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಆಯೋಜಿಸಿದ್ದ ವಾಕಥಾನ್ ಮತ್ತು ಹೃದಯ ತಪಾಸಣಾ ಶಿಬಿರಕ್ಕೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು. ಭಂಡಾರಿ ಶ್ರೀನಿವಾಸ್, ಡಾ.ಚಂದ್ರಶೇಖರ್, ಡಾ.ಚೇತನ್, ಪ್ರಾಂಶುಪಾಲ ಕೆ.ರಾಜಣ್ಣ ಇದ್ದರು.