ಸಾರಾಂಶ
ಯಾದಗಿರಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಮಲೇರಿಯಾ ಸೊಳ್ಳೆಗಳಿಂದ ಹರಡುವ ಸಾಂಕ್ರಮಿಕ ರೋಗವಾಗಿದ್ದು, ಮಲೇರಿಯಾ ನಿರ್ಮೂಲನೆಗೆ ಆರೋಗ್ಯ ಇಲಾಖೆಯಿಂದ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಲೂ ನೈರ್ಮಲ್ಯ ಕಾಪಾಡಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಹೇಳಿದರು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ನಡೆದ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವರ್ಷದ ಘೋಷವಾಕ್ಯ ಹೆಚ್ಚು ಸಮಾನತೆಯಿಂದ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಮಾಹಿತಿಯನ್ನು ತಿಳಿಸಿದರು.2020ರಲ್ಲಿ 3 ಮಲೇರಿಯಾ ಪ್ರಕರಣಗಳು. 2021ರಲ್ಲಿ 12 ಮಲೇರಿಯಾ ಪ್ರಕರಣಗಳು. 2022ರಲ್ಲಿ 04 ಮಲೇರಿಯಾ ಪ್ರಕರಣಗಳು. 2023ರಲ್ಲಿ 07 ಮಲೇರಿಯಾ ಪ್ರಕರಣಗಳು. 2024ರಲ್ಲಿ 01 ಮಲೇರಿಯಾ ಪ್ರಕರಣಗಳಾಗಿವೆ ಎಂದರು.
ಜಿಲ್ಲಾ ಡಿವಿಬಿಡಿಸಿಒ ಡಾ. ಎಂ.ಎ. ಸಾಜೀದ ಅವರು ಮಾತನಾಡಿ, ಯಾವುದೇ ಜ್ವರವಿರಲಿ ರಕ್ತ ಲೇಪನ ಪರೀಕ್ಷೆ ಮಾಡುವುದರಿಂದ ಮಲೇರಿಯಾ ಪತ್ತೆ ಹಚ್ಚುವಿಕೆಯ ಬಗ್ಗೆ ತಿಳಿಯಬಹುದು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ದೊರೆಯುತ್ತದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಪ್ರತಿ ವರ್ಷದಿಂದ ವರ್ಷಕ್ಕೆ ಸ್ಥಳೀಯ ಮಲೇರಿಯಾ ಪ್ರಕರಣಗಳು ಇಳಿಮುಖವಾಗುತ್ತಾ ಬಂದಿದ್ದು, ಕ್ಷೇತ್ರ ಮಟ್ಟದಲ್ಲಿ ನಮ್ಮ ಸಿಬ್ಬಂದಿಯವರು ಗುಣಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದು ಮತ್ತು ಮುಂಜಾಗ್ರತ ಕ್ರಮಗಳು ಹಾಗೂ ಮಲೇರಿಯಾ ಪತ್ತೆ ಹಚ್ಚುವ ವಿಧಾನವನ್ನು ವಿಸ್ತಾರವಾಗಿ ಸಭೆಯಲ್ಲಿ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ಜಿಲ್ಲಾ ಆರ್‌ಸಿಹೆಚ್ಅ ಧಿಕಾರಿ ಡಾ. ಮಲ್ಲಪ್ಪ.ಕೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಸಂಜಯಕುಮಾರ ರಾಯಚೂರಕರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಕಾರಿ ಡಾ. ಜ್ಯೋತಿ ಕಟ್ಟಿಮನಿ, ಯಾದಗಿರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಹನುಮಂತ ರಡ್ಡಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಶೆದ್ಯಾಧಿಕಾರಿ ಡಾ. ವಿನೂತಾ ಇತರರಿದ್ದರು.