ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ ಜಿಲ್ಲೆಯಲ್ಲಿ ಚುರುಕಾಗಿ ನಡೆಯುತ್ತಿರುವ ವಿವಿಧ ರೈಲ್ವೆ ಯೋಜನೆ ಕಾಮಗಾರಿಗಳಲ್ಲಿ ಗುಣ್ಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಬಿಲ್ಲೇಪಾಳ್ಯ ಗೇಟ್ ಲೆವೆಲ್ ಕ್ರಾಸಿಂಗ್ ನಂ. 50 ರಲ್ಲಿ 7.88 ಕೋಟಿ ರು. ವೆಚ್ಚದಲ್ಲಿ ಬಂಡಿಹಳ್ಳಿ ಗೇಟ್ ಬಳಿ ಎಲ್.ಸಿ. ನಂ.60ರ ಬದಲಿಗೆ ರಸ್ತೆ ಕೆಳ ಸೇತುವೆ ನಿರ್ಮಾಣಕ್ಕೆ ಬಂಡಿಹಳ್ಳಿಯಲ್ಲಿ ಬುಧವಾರ ಶಂಕುಸ್ಥಾಪನೆ ಹಾಗೂ 6.37 ಕೋಟಿ ರೂ ವೆಚ್ಚದಲ್ಲಿ ಡಿ-ರಾಂಪುರ ಗೇಟ್ ಬಳಿ ಎಲ್.ಸಿ. ನಂ. 62 ಬದಲಿಗೆ ರಸ್ತೆ ಕೆಳ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರ ಭದ್ರತೆ ಹಾಗೂ ಸುಗಮ ಸಂಚಾರಕ್ಕಾಗಿ ರೈಲ್ವೆ ಗೇಟ್‌ಗಳ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿಗಳಿಗೆ ಸುಮಾರು 650 ಕೋಟಿ ರೂ. ವೆಚ್ಚದಲ್ಲಿ 20 ರೈಲ್ವೆ ಗೇಟ್ ಮೇಲ್ಸೇತುವೆ, ಕೆಳ ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರೈಲ್ವೆ ಯೋಜನೆಗಳ ಕಾಮಗಾರಿಯಲ್ಲಿ ಗುಣಮಟ್ಟದ ಸಾಮಗ್ರಿಗಳನ್ನೇ ಉಪಯೋಗಿಸಬೇಕು. ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಾಕೀತು ಮಾಡಿದರು.ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆ, ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ ಹಾಗೂ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್ ಕುಮಾರ್ ಸಿನ್ಹಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.