ಸಾರಾಂಶ
ಹುಬ್ಬಳ್ಳಿ: ಮನುಷ್ಯ ತನ್ನ ಮುಗ್ಧತೆಯನ್ನು ಇಡೀ ಜೀವನದುದ್ದಕ್ಕೂ ಉಳಿಸಿಕೊಳ್ಳುವುದೇ ದೊಡ್ಡ ಸಾಧನೆ. ಪ್ರಜ್ಞಾಪೂರ್ಣ ಮುಗ್ಧತೆಯನ್ನು ಇಡೀ ಸಮಾಜ ಗೌರವಿಸುತ್ತದೆ ಎಂದು ಸಾಹಿತಿ ಡಾ. ರಂಜಾನ್ ದರ್ಗಾ ಹೇಳಿದರು.
ಇಲ್ಲಿನ ನೈಋತ್ಯ ರೈಲ್ವೆ ವಲಯ ಅಧಿಕಾರಿಗಳ ಕ್ಲಬ್ ಸಭಾಂಗಣದಲ್ಲಿ ಈಚೆಗೆ ಕೇಶ್ವಾಪುರದ ರೈಲ್ವೆ ಅಧಿಕಾರಿಗಳ ಕ್ಲಬ್‌ನಲ್ಲಿ ಅಕ್ಷರ ಸಾಹಿತ್ಯ ವೇದಿಕೆ, ನೈಋತ್ಯ ರೈಲ್ವೆ ಕನ್ನಡ ಸಂಘ ಹಾಗೂ ಪಟ್ಟಣ ಪ್ರಕಾಶನದಿಂದ ಆಯೋಜಿಸಿದ್ದ ರೈಲ್ವೆ ಇಲಾಖೆಯ ಸಹಾಯಕ ಲೆಕ್ಕಾಧಿಕಾರಿ ಮತ್ತು ಕವಿ ಮಹಾಂತಪ್ಪ ನಂದೂರು ಅವರ ಸೇವಾ ನಿವೃತ್ತಿ ಹಾಗೂ ’ನಂದದುರಿವ ಜ್ಯೋತಿ’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಾನ್ ವ್ಯಕ್ತಿಗಳು ತಮ್ಮ ಮುಗ್ಧತೆಯನ್ನು ಕೊನೆಯವರಿಗೆ ಕಾಪಾಡಿಕೊಂಡಿದ್ದಾರೆ ಎಂಬುವುದನ್ನು ಗಮನಿಸಬೇಕು. ಮುಗ್ಧತೆಯಿಂದ ಏನನ್ನಾದರೂ ಸಾಧಿಸಬಹುದು ಎನ್ನುವ ಸಂದೇಶವನ್ನು ಕೂಡ ಕೊಟ್ಟಿದ್ದಾರೆ. ಅಂತಹ ಮುಗ್ಧತೆಯನ್ನು ಮಹಾಂತಪ್ಪ ನಂದೂರು ಅವರಲ್ಲಿ ಗಮನಿಸಿದ್ದೇನೆ. ಅವರ ಕನ್ನಡ ಅದ್ಭುತವಾಗಿದೆ ಎಂಬುವುದನ್ನು ಅವರ ಸಾಹಿತ್ಯದಲ್ಲಿ ಗುರುತಿಸಿದ್ದೇನೆ. ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು ಯಶಸ್ವಿ ಜೀವನ ಕಂಡಿದ್ದಾರೆ ಎಂದರು.
ಕವಿ ಮಹಾಂತಪ್ಪ ನಂದೂರು ಮಾತನಾಡಿ, ಪ್ರಾಮಾಣಿಕ ಸೇವೆ ಮಾಡಿದ ಸಾರ್ಥಕ ಭಾವನೆ ನನ್ನಲ್ಲಿದೆ. ಸಾಂಸ್ಕೃತಿಕ ಬದುಕು ತನ್ನದಾಗಿಸಿಕೊಂಡ ವ್ಯಕ್ತಿಗೆ ಒಂದು ಗುರಿ, ಸಂವೇದನೆ, ಮೌಲ್ಯಗಳು ಮೈಗೂಡುತ್ತವೆ. ಸಾಂಸ್ಕೃತಿಕ ಹಿನ್ನೆಲೆ ಹೊಂದದಿದ್ದರೆ ನಾನು ಭ್ರಷ್ಟನಾಗುತ್ತಿದ್ದೆ ಎನ್ನುವ ಭಾವನೆ ಇಂದಿಗೂ ಇದೆ. ನನ್ನ ಒಳ್ಳೆಯ ಬದಕು ರೂಪಿಸಿದ್ದು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಬದುಕು ಎಂಬುವುದರಲ್ಲಿ ಎರಡು ಮಾಡಿಲ್ಲ ಎಂದರು.ಕೃತಿ ಬಿಡುಗಡೆಗೊಳಿಸಿದ ವಿಮರ್ಶಕ ಡಾ. ಎಚ್.ಎಸ್. ಸತ್ಯನಾರಾಯಣ, ಹಿರಿಯ ಸಾಹಿತಿ ಡಾ. ಕಲ್ಯಾಣರಾವ ಪಾಟೀಲ ಅವರು ಕೃತಿ ಕುರಿತು ಮಾತನಾಡಿದರು. ಸಹಾಯಕ ಕಾರ್ಮಿಕ ಅಧಿಕಾರಿ ಸಿ.ಎಂ. ಮುನಿಸ್ವಾಮಿ ಅವರು ಅಭಿನಂದನಾ ಪರ ನುಡಿಗಳನ್ನಾಡಿದರು. ಬರಹಾಗಾರ ಡಾ. ಟಿ.ಆರ್. ಗುರುಬಸಪ್ಪ ಹಾಗೂ ಪತ್ರಕರ್ತ ಮಾಣಿಕರಾವ ಪಸಾರ, ಅಕ್ಷರ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಬಿ. ಅಡ್ನೂರು ಮಾತನಾಡಿದರು. ಇದೇ ಸಂದರ್ಭದಲ್ಲಿ ನಂದೂರು ದಂಪತಿಗಳನ್ನು ಸನ್ಮಾನಿಸಲಾಯಿತು.
ರೈಲ್ವೆ ಕನ್ನಡ ಸಂಘದ ಅಧ್ಯಕ್ಷ ಬಿ.ಎಲ್. ಶಿವಕುಮಾರ, ಚನ್ನಪ್ಪ ಅಂಗಡಿ, ಟಿ.ಆರ್. ಗುರುಬಸಪ್ಪ, ಎಂ.ಬಿ. ಅಡ್ನೂರ, ಬಿ.ಎಲ್. ಶಿವಕುಮಾರ, ಪುಷ್ಪಾ ನಂದೂರ ವೇದಿಕೆ ಮೇಲಿದ್ದರು. ಕನ್ನಡಪ್ರಭದ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ, ಸತೀಸ ಕುಲಕರ್ಣಿ, ಬಸು ಬೇವಿನಗಿಡದ, ಭಾರತಿ ಹಿರೇಮಠ, ಪ್ರಕಾಶ ಕಡಮೆ, ಲಿಂಗರಾಜ ಅಂಗಡಿ ಸೇರಿದಂತೆ ಹಲವರಿದ್ದರು. ಸುನಂದಾ ಕಡಮೆ ಸ್ವಾಗತಿಸಿದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು.