ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಂಗಳವಾರ ಸಂಭವಿಸಿದೆ.ಬೆಂಗಳೂರು ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್ ನಡುವೆ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಿಂದಾಗಿ ಬಸ್ಸಿನ ಚಾಲಕ ಸಹಿತ ಐದಾರು ಮಂದಿ ಗಾಯಗೊಂಡಿದ್ದು , ಅವರೆಲ್ಲರೂ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಘಟನೆಯಿಂದಾಗಿ ಎರಡೂ ವಾಹನಗಳು ಹೆದ್ದಾರಿಗಡ್ಡವಾಗಿ ನಿಂತಿದ್ದರಿಂದ ಕೆಲ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಅಪಘಾತದ ತೀವ್ರತೆಯಿಂದಾಗಿ ಎರಡೂ ವಾಹನಗಳು ಜಖಂಗೊಂಡಿದ್ದು ಹೆದ್ದಾರಿಯಲ್ಲೇ ನಿಂತಿತ್ತು. ಕೆಎಸ್‌ಆರ್‌ಟಿಸಿ ಬಸ್ಸನ್ನು ಹೆದ್ದಾರಿಯಿಂದ ತೆರವುಗೊಳಿಸದೇ ಇರುವುದರಿಂದ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಅಪಘಾತಕ್ಕೀಡಾದರೆ ತ್ವರಿತ ಸ್ಪಂದನೆ ನೀಡುವ ಸ್ಥಳೀಯ ಕ್ರೇನ್ ಮಾಲಕರಿಗೆ , ಅಂಬುಲೆನ್ಸ್ ವಾಹನ ಚಾಲಕರಿಗೆ ಕೆ ಎಸ್ ಆರ್ ಟಿಸಿ ಯಿಂದ ಸೂಕ್ತ ನಿರ್ವಹಣಾವೆಚ್ಚವನ್ನು ಪಾವತಿಸುತ್ತಿಲ್ಲ ಎಂಬ ಕಾರಣ ನೀಡಿ , ರಾಜ್ಯ ರಾಸ್ತೆ ಸಾರಿಗೆ ಸಂಸ್ಥೆಯ ಅಪಘಾತದ ವೇಳೆ ತ್ವರಿತ ಸ್ಪಂದನೆ ನೀಡಲು ಯಾರೂ ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ.
ಸೋಮವಾರ ಅಡ್ಡೊಳೆಯಲ್ಲಿ ಇದೇ ರೀತಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಟ್ಯಾಂಕರೊಂದಕ್ಕೆ ಡಿಕ್ಕಿ ಹೊಡೆದಿದ್ದು, ಅಲ್ಲಿಯೂ ಕೂಡಾ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಹಕಾರ ದೊರಕಿಲ್ಲವೆಂದು ಆರೋಪಿಸಿ ಮಂಗಳವಾರ ಬರ್ಚಿನಹಳ್ಳದ ಅಪಘಾತದಲ್ಲಿ ಸ್ಪಂದಿಸಲು ಕ್ರೇನ್ ಹಾಗೂ ಖಾಸಗಿ ಅಂಬುಲೆನ್ಸ್ ಚಾಲಕರು ನಿರಾಕರಿಸಿದ್ದಾರೆಂದೂ, ಈ ಕಾರಣಕ್ಕೆ ಹೆದ್ದಾರಿಗಡ್ಡವಾಗಿದ್ದ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳೀಸಲು ವಿಳಂಬವಾಗಿ ಹೆದ್ದಾರಿಯಲ್ಲಿ ಕಿ ಮೀ ಗಟ್ಟಲೆ ದೂರ ವಾಹನಗಳು ಸಂಚರಿಸಲಾಗದೆ ನಿಂತಿರಬೇಕಾಯಿತ್ತೆಂದು ಇಲಾಖಾ ಮೂಲಗಳು ತಿಳಿಸಿವೆ.ಈ ಮಧ್ಯೆ ಸ್ಥಳೀಯ ಪೊಲೀಸರ ಸತತ ವಿನಂತಿಗೆ ಮಣಿದು ಗಾಯಾಳುಗಳನ್ನು ಸಾಗಿಸಲು ಖಾಸಗಿ ವಾಹನಗಳ ಚಾಲಕರು ಒಪ್ಪಿಕೊಂದರೆ , ಸುದೀರ್ಘ ಸಮಯ ಮನವೊಲಿಸಿದ ಬಳಿಕ ಕ್ರೇನ್ ವಾಹನ ಸ್ಥಳಕ್ಕಾಗಮಿಸಿ ವಾಹನಗಳನ್ನು ಹೆದ್ದಾರಿ ಮಧ್ಯ ಬಾಗದಿಂದ ಬದಿಗೆ ಸರಿಸಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.