- ಆಹಾರ್‌-2000ನ ಜಿ.ವಿ.ರಮೇಶ ಭಟ್- ಸುನಂದಾ, ಪುತ್ರ ಆದರ್ಶ್ ಹೊಸ ಪ್ರಯತ್ನ । ₹5 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಆಹಾರ್‌-2000 ಮೂಲಕ ದಾವಣಗೆರೆ ನಗರ, ಜಿಲ್ಲಾದ್ಯಂತ ಹೆಸರಾದ ಹಿರಿಯ ಹೋಟೆಲ್ ಉದ್ಯಮಿ ಜಿ.ವಿ.ರಮೇಶ ಭಟ್‌, ಸುನಂದಾ ದಂಪತಿ ಹಾಗೂ ಪುತ್ರ ಜಿ.ಆರ್.ಆದಿತ್ಯ ಇದೀಗ ಇಲ್ಲಿನ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬೇಕರಿ, ಸ್ವೀಟ್ಸ್‌, ಕಾಂಡಿಮೆಂಟ್ಸ್‌ ಮತ್ತು ಇತರೆ ತಿನಿಸುಗಳ ಆಹಾರ ಉತ್ಪಾದಕ ಘಟಕ ಮೈತ್ರಿ ಫುಡ್ ಪ್ರಾಡಕ್ಟ್ಸ್‌ ಪ್ರೈವೇಟ್ ಲಿಮಿಟೆಡ್‌ ಅನ್ನು ಮಾ.8ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಲಕ್ಷ್ಮೀ ಪೂಜೆಯೊಂದಿಗೆ ಶುಭಾರಂಭ ಮಾಡಲಿದ್ದಾರೆ.

ನಗರದ ಇಂಡಸ್ಟ್ರಿಯಲ್ ಏರಿಯಾದ ಮೈತ್ರಿ ಫುಡ್ ಪ್ರಾಡಕ್ಟ್ಸ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಈ ವಿಷಯ ತಿಳಿಸಿದ ಆಹಾರ್‌-2000 ಮಾಲೀಕ, ಮೈತ್ರಿ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ರಮೇಶ ಭಟ್ ಅವರು, 25 ವರ್ಷದಿಂದಲೂ ಆಹಾರ್‌-2000 ಅನ್ನು ದಾವಣಗೆರೆ ಗಾಂಧಿ ವೃತ್ತದಲ್ಲಿ ನಡೆಸುತ್ತಿದ್ದೇವೆ. ಸದ್ಯಕ್ಕೆ 3 ಘಟಕಗಳಿವೆ. ಇದೀಗ ಮೈತ್ರಿ ಫುಡ್ ಪ್ರಾಡಕ್ಟ್ಸ್‌ ಘಟಕ ಸ್ಥಾಪಿಸುವ ಮೂಲಕ ಗ್ರಾಹಕರಿಗೆ ನಮ್ಮ ಸೇವೆ ವಿಸ್ತರಿಸುತ್ತಿದ್ದೇವೆ. ಜೊತೆಗೆ ನಮ್ಮ ಸಂಸ್ಥೆ ವ್ಯಾಪ್ತಿಯನ್ನೂ ಹೆಚ್ಚಿಸುತ್ತಿದ್ದೇವೆ ಎಂದರು.

26ನೇ ವರ್ಷಕ್ಕೆ ಪಾದಾರ್ಪಣೆ:

ತಮ್ಮ ಆಹಾರ್-2000 ಉದ್ಯಮ ಸ್ಥಾಪಿಸಿ, ಬೆಳ್ಳಿಹಬ್ಬ ಆಚರಿಸಿದ್ದೇವೆ. ಇದೀಗ 26ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ಮೈತ್ರಿ ಆಹಾರೋತ್ಪನ್ನ ಘಟಕ ಸ್ಥಾಪಿಸುತ್ತಿದ್ದೇವೆ. ಒಂದೇ ಆಹಾರೋತ್ಪನ್ನ ಘಟಕದಲ್ಲೇ ಎಲ್ಲ ತಿನಿಸುಗಳನ್ನು ಉತ್ಪಾದಿಸುವ ಸದುದ್ದೇಶದಿಂದ ಹೈಜನಿಕ್ ಆಗಿ, ಸ್ವಚ್ಛ ಮತ್ತು ಗುಣಮಟ್ಟದ ನೈಜ ಬೆಲೆಯೊಂದಿಗೆ ವಹಿವಾಟು ನಡೆಸುವ ಸಂಕಲ್ಪ ನಮ್ಮದು. ಕೈಯಿಂದ ತಿನಿಸು ಮಾಡುವುದರ ಬದಲಿಗೆ ಹೈಜನಿಕ್ ಆಗಿ ತಯಾರಿಸಲು ಮಿಷನರಿ ತರಿಸಿದ್ದೇವೆ. ಕಡಿಮೆ ಅವಧಿಯಲ್ಲಿ ಗುಣಮಟ್ಟ, ಹೈಜನಿಕ್ ತಿನಿಸುಗಳನ್ನು ನೀಡುವ ಉದ್ದೇಶ ನಮ್ಮದು ಎಂದು ಹೇಳಿದರು.


ಸಂಡಿಗೆ, ಹಪ್ಪಳ ಘಟಕಕ್ಕೆ ಚಿಂತನೆ:

₹5 ಕೋಟಿ ವೆಚ್ಚದಲ್ಲಿ ಮೈತ್ರಿ ಆಹಾರೋತ್ಪನ್ನ ಘಟಕ ಸ್ಥಾಪಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಂಡಿಗೆ, ಹಪ್ಪಳ ತಯಾರಿಕಾ ಘಟಕ ಸ್ಥಾಪಿಸುವ ಆಲೋಚನೆ ಇದೆ. ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ 2 ವರ್ಷ ಸೇವೆ ಸಲ್ಲಿಸಿದ ತಮ್ಮ ಪುತ್ರ ಆದರ್ಶ್ ಸಹ ಆಹಾರೋದ್ಯಮಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ ಕೇಕ್ ಉತ್ಪಾದನಾ ಘಟಕದಲ್ಲೂ ಪಾಲುದಾರನಾಗಿದ್ದಾರೆ. ಈಗ ತಂತ್ರಜ್ಞಾನ ಮುಂದುವರಿಯುತ್ತಿದೆ. ಅದಕ್ಕೆ ತಕ್ಕಂತೆ ನಾವೂ ಬದಲಾವಣೆ ಮೈಗೂಡಿಸಿಕೊಂಡಿದ್ದೇವೆ. ಸೇವಾ ಮನೋಭಾವವೇ ನಮ್ಮ ಗುರಿ. ಸೇವೆ ಮತ್ತು ವ್ಯವಹಾರ ಎರಡನ್ನೂ ಸರಿದೂಗಿಸಿಕೊಂಡು ನಮ್ಮ ಕಾಯಕ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಫುಡ್‌ ಸ್ಟ್ಯಾಂಡರ್ಡ್‌ ಮಟ್ಟಕ್ಕೆ ಒತ್ತು:

ಆಡಳಿತ ಮಂಡಳಿ ಮುಖ್ಯಸ್ಥ ಜಿ.ಆರ್. ಆದಿತ್ಯ ಮಾತನಾಡಿ, ಎಂಜಿನಿಯರ್‌ ಆಗಿದ್ದ ತಾವು 10 ವರ್ಷದಿಂದ ಆಹಾರೋದ್ಯಮ ಕ್ಷೇತ್ರಕ್ಕೆಬಂದಿದ್ದೇನೆ. ಮುಂಚೆ ಆಹಾರ್‌-2000 ಕಟ್ಟಡದ ಮೇಲ್ಭಾಗದಲ್ಲೇ ನಮ್ಮ ತಿನಿಸು ತಯಾರಿಕಾ ಘಟಕ ಇತ್ತು. ಈಗ ಇಲ್ಲಿ ವಿಶಾಲ ಜಾಗದಲ್ಲಿ ಅತ್ಯಾಧುನಿಕ ಘಟಕ ಮಾಡಿದ್ದೇವೆ. ಹೈಜನಿಕ್ ಆಗಿ ತಿನಿಸು ತಯಾರಿಕಸು ಎಲ್ಲ ಮಷಿನರಿಗಳನ್ನು ಅಳವಡಿಸಿಕೊಂಡಿದ್ದೇವೆ. ಕಡಿಮೆ ಅವಧಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪನ್ನ ತಯಾರಿಸುವುದು ನಮ್ಮ ಉದ್ದೇಶ. ಫುಡ್‌ ಸ್ಟ್ಯಾಂಡರ್ಡ್‌ ಮಟ್ಟಕ್ಕೆ ಒತ್ತು ನೀಡಿದ್ದೇವೆ. ಶುದ್ಧೀಕರಿಸಿದ ಸಿಹಿ ನೀರಿನಲ್ಲೇ ಇಲ್ಲಿ ಎಲ್ಲ ತಿನಿಸುಗಳ ತಯಾರಿಸಲಾಗುವುದು ಎಂದರು.

ಇತರೆ ಜಿಲ್ಲೆಗೂ ವ್ಯಾಪಾರ ವಿಸ್ತರಣೆ:

ಕುಕ್ಕೀಸ್ ಮಷಿನರಿಯಾಗಲಿದ್ದು, ನಮ್ಮ ಘಟಕವನ್ನೂ ಆಧುನೀಕರಿಸಿಕೊಂಡು, ಅಭಿವೃದ್ಧಿಪಡಿಸುತ್ತಿದ್ದೇವೆ. ಬ್ರೆಡ್‌, ಬನ್ಸ್‌, ರಸ್ಟ್‌ ಮಾತ್ರ ಈವರೆಗೆ ಮಾಡುತ್ತಿದ್ದೆವು. ಇನ್ನು ಮುಂದೆ ಉತ್ಪನ್ನ ಹೆಚ್ಚಿಸಿ, ಹೆಚ್ಚು ಜನರಿಗೆ ತಲುಪಲು ಪ್ರಯತ್ನ ಇದಾಗಿದೆ. ಇವು ಮೂರೇ ಉತ್ಪನ್ನಗಳಲ್ಲ, ಹೋಲ್ ಸೇಲ್ ಮಾರುಕಟ್ಟೆಗೆ ಕಡಿಮೆ ದರಕ್ಕೆ ಜನರಿಗೆ ತಲುಪುವ ಗುರಿ ಹೊಂದಿದ್ದೇವೆ. ಹೊಸ ಉತ್ಪನ್ನಗಳನ್ನು ಸೇರ್ಪಡೆ ಮಾಡುತ್ತಿದ್ದೇವೆ. 4-5 ಹೆಚ್ಚುವರಿ ಯಂತ್ರ ಅಳವಡಿಸಿಕೊಂಡಿದ್ದು, ಇನ್ನೂ 25-30 ಹೆಚ್ಚುವರಿ ಉತ್ಪನ್ನಗಳನ್ನು ಸಿದ್ಧಪಡಿಸಲಿದ್ದೇವೆ. ದಾವಣಗೆರೆ ಜಿಲ್ಲೆಗಷ್ಟೇ ಅಲ್ಲ ಇತರೆ ಜಿಲ್ಲೆಗೂ ನಮ್ಮ ವ್ಯಾಪಾರ ವಿಸ್ತರಿಸುವ ಆಲೋಚನೆ ಇದೆ. ₹5 ರಿಂದ ಉತ್ಪನ್ನಗಳ ದರ ಇರುತ್ತದೆ ಎಂದು ಆದರ್ಶ್ ವಿವರಿಸಿದರು.

ಸಂಸ್ಥೆ ಆಡಳಿತ ಮಂಡಳಿಯ ಸುನಂದಾ ರಮೇಶ ಭಟ್‌, ಶ್ರಾವ್ಯ, ಹಂಸಿಖಾ, ಅವ್ಯುಕ್ತ ಭಟ್‌, ವಿರಾಜ್ ಭಟ್‌, ಅವ್ಯಯ್ ಭಟ್ ಹಾಗೂ ಆಹಾರ್ 2000 ಸಿಬ್ಬಂದಿ ಇದ್ದರು.

- - -

-7ಕೆಡಿವಿಜಿ2, 3:

ದಾವಣಗೆರೆ ಮೈತ್ರಿ ಫುಡ್ ಪ್ರಾಡಕ್ಟ್ಸ್‌ ಪ್ರೈವೇಟ್ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕ, ಆಹಾರ್‌-2000ನ ಜಿ.ವಿ.ರಮೇಶ ಭಟ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.