ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ₹ 2400 ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಿದೆ. ಆದರೆ ಖರೀದಿ ಕೇಂದ್ರ ತೆರೆಯುವ ರಾಜ್ಯದ ಪ್ರಸ್ತಾವ ತಿರಸ್ಕರಿಸಿ ರಾಜ್ಯ ಸರ್ಕಾರವೇ ಕೇಂದ್ರ ಆರಂಭಿಸಿ ಖರೀದಿಸಬೇಕೆಂದು ನಿರ್ದೇಶಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕಬ್ಬಿನ ಬೆಳೆಗಾರರ ಹೋರಾಟ ತಣ್ಣಗಾಗುತ್ತಿದ್ದಂತೆ ಮೆಕ್ಕೆಜೋಳ ಬೆಳೆದ ರೈತರ ಹೋರಾಟದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇನ್ನೊಂದು ವಾರದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸದಿದ್ದಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೂ ಹೋರಾಟದ ಬಿಸಿ ತಟ್ಟುವ ಸಾಧ್ಯತೆ ನಿಚ್ಚಳವಾಗಿದೆ. ಅಷ್ಟರೊಳಗೆ ಸಮಸ್ಯೆ ಬಗೆಹರಿಸಲು ಸರ್ಕಾರ ಶತಪ್ರಯತ್ನ ನಡೆಸುತ್ತಿದೆ.

ಆಗಿರುವುದೇನು?

ಮೆಕ್ಕೆಜೋಳ ರಾಜ್ಯದ ಪ್ರಮುಖ ಬೆಳೆಯಾಗಿದ್ದು ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾಸನ, ಚಾಮರಾಜನಗರ, ಶಿವಮೊಗ್ಗ ಜಿಲ್ಲೆ ಸೇರಿ ಬರೋಬ್ಬರಿ 20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಕಳೆದ ವರ್ಷ ಧಾರವಾಡ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ ಬೆಳೆದರೆ ಈ ಬಾರಿ 71000ಕ್ಕೇರಿದೆ. ಇದೇ ರೀತಿ ರಾಜ್ಯಾದ್ಯಂತ ಬಿತ್ತನ ಪ್ರಮಾಣ ಹೆಚ್ಚಾಗಿದೆ. ಬಿತ್ತನೆಗೆ ತಕ್ಕಂತೆ ಮಳೆಯಾಗಿದ್ದು ಎಕರೆಗೆ ಕನಿಷ್ಠ 25-30 ಕ್ವಿಂಟಲ್‌ ಇಳುವರಿ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ದರ ಕುಸಿತವಾಗಿದೆ. ಕಳೆದ ವರ್ಷ ಕ್ವಿಂಟಲ್‌ಗೆ ₹ 2200ರಿಂದ ₹ 2400 ಇದ್ದ ದರ ಈ ಬಾರಿ ₹ 1600 ಗಡಿ ದಾಟಿಲ್ಲ. ಹೀಗಾಗಿ ಬೆಂಬಲ ಬೆಲೆಯಲ್ಲೇ ಖರೀದಿಸಿ ರೈತರ ಕೈ ಹಿಡಿಯಬೇಕೆಂಬ ಒತ್ತಡ ಅನ್ನದಾತರದ್ದು.

ಕೇಂದ್ರ ತೆರೆಯಲು ಸಮಸ್ಯೆ:

ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ₹ 2400 ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಿದೆ. ಆದರೆ ಖರೀದಿ ಕೇಂದ್ರ ತೆರೆಯುವ ರಾಜ್ಯದ ಪ್ರಸ್ತಾವ ತಿರಸ್ಕರಿಸಿ ರಾಜ್ಯ ಸರ್ಕಾರವೇ ಕೇಂದ್ರ ಆರಂಭಿಸಿ ಖರೀದಿಸಬೇಕೆಂದು ನಿರ್ದೇಶಿಸಿದೆ. ಮೆಕ್ಕೆಜೋಳ ತಿನ್ನುವ ಪದಾರ್ಥವಲ್ಲ. ಕೋಳಿ, ನಾಯಿ, ದನ ಸೇರಿದಂತೆ ಪಶು ಆಹಾರ, ಎಥಿನಾಲ್‌ ತಯಾರಿಕೆ ಸೇರಿದಂತೆ 50ಕ್ಕೂ ಹೆಚ್ಚು ಉತ್ಪಾದನೆಗಳಿಗೆ ಮೆಕ್ಕೆಜೋಳ ಬಳಸಲಾಗುತ್ತದೆ. ಹೀಗಾಗಿ ರೈತರಿಂದ ಭಾರೀ ಪ್ರಮಾಣದಲ್ಲಿ ಮೆಕ್ಕೆಜೋಳ ಖರೀದಿಸಿ ಏನು ಮಾಡಬೇಕೆಂಬುದು ರಾಜ್ಯ ಸರ್ಕಾರ ಚಿಂತೆ.

ಕೆಎಂಎಫ್‌, ಸಕ್ಕರೆ ಕಾರ್ಖಾನೆ:

ಕೆಎಂಎಫ್‌, ಎಥಿನಾಲ್‌ ತಯಾರಿಕೆ ಸೇರಿದಂತೆ ವಿವಿಧ ವಸ್ತುಗಳ ತಯಾರಿಕೆಗೆ ಸಕ್ಕರೆ ಕಾರ್ಖಾನೆಗಳಿಗೂ ಮೆಕ್ಕೆಜೋಳ ಅಗತ್ಯ. ಹೀಗಾಗಿ ಸರ್ಕಾರ ಸಕ್ಕರೆ ಕಾರ್ಖಾನೆ, ಕೆಎಂಎಫ್‌ಗಳ ಮೊರೆ ಹೋಗಿ ಖರೀದಿಸಲು ಸರ್ಕಾರ ಯೋಚಿಸುತ್ತಿದೆ. ಜತೆಗೆ ಹೊರರಾಜ್ಯಗಳಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಮೆಕ್ಕೆಜೋಳ ಸಾಗಿಸಲು ಸಾಧ್ಯವೇ? ಎಂಬ ಯೋಚನೆ ಕೂಡ ರಾಜ್ಯ ಸರ್ಕಾರ ಮಾಡುತ್ತಿದೆ.

ಕಬ್ಬಿನ ಬೆಳೆಗಾರರ ಬಳಿಕ ಮೆಕ್ಕೆಜೋಳ ಬೆಳೆದ ರೈತರ ಹೋರಾಟ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದ್ದು, ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ನೀವೇ ತೆರೆದು ಖರೀದಿಸಬೇಕು ಎಂಬುದು ಕೇಂದ್ರ ಸರ್ಕಾರದ ಸೂಚನೆ. ಕೆಎಂಎಫ್‌, ಸಕ್ಕರೆ ಕಾರ್ಖಾನೆ ಬಳಸುವ ಕುರಿತು ಹಾಗೂ ಹೊರರಾಜ್ಯಗಳ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಕುರಿತು ಯೋಚಿಸಲಾಗುತ್ತಿದೆ. ಆದಷ್ಟು ಶೀಘ್ರ ಸರ್ಕಾರ ಈ ಸಮಸ್ಯೆ ಬಗೆಹರಿಸಲಿದೆ ಎಂಬುದು ನಮ್ಮ ವಿಶ್ವಾಸ.

ಎನ್‌.ಎಚ್‌. ಕೋನರಡ್ಡಿ, ಶಾಸಕರುಐದು ದಿನ ಉಪವಾಸ ಮಾಡಿದ್ದೇವೆ. ಆಗ ಜಿಲ್ಲಾಡಳಿತ, ಶಾಸಕರು ವಾರದೊಳಗೆ ಖರೀದಿ ಕೇಂದ್ರ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಸೋಮವಾರದೊಳಗೆ ಖರೀದಿ ಕೇಂದ್ರ ಶುರುವಾಗದಿದ್ದಲ್ಲಿ ಚಳಿಗಾಲದ ಅಧಿವೇಶನಕ್ಕೆ ನಮ್ಮ ಹೋರಾಟದ ಬಿಸಿ ಭಾರೀ ಪ್ರಮಾಣದಲ್ಲಿ ತಟ್ಟುವುದು ಖಚಿತ.

ಶಂಕರಪ್ಪ ಅಂಬಲಿ, ರೈತ ಹೋರಾಟಗಾರ