ಕಳೆದ ವರ್ಷ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದೆ ರಸ್ತೆಗಿಳಿದು ಹೋರಾಟ ನಡೆಸಿದ್ದ ರೈತರಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಕೊಂಚ ಸಮಾಧಾನಕರ ಧಾರಣೆ ಸಿಗುತ್ತಿದೆ. ಆದರೆ, ತೀವ್ರ ಬರದ ಹೊಡೆತಕ್ಕೆ ಇಳುವರಿ ಕುಸಿದಿರುವುದರಿಂದ ಬಹುತೇಕ ರೈತರ ಪಾಲಿಗೆ ಉತ್ತಮ ಧಾರಣೆ ಕನ್ನಡಿಯ ಗಂಟಾಗಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ಕಳೆದ ವರ್ಷ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದೆ ರಸ್ತೆಗಿಳಿದು ಹೋರಾಟ ನಡೆಸಿದ್ದ ರೈತರಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಕೊಂಚ ಸಮಾಧಾನಕರ ಧಾರಣೆ ಸಿಗುತ್ತಿದೆ. ಆದರೆ, ತೀವ್ರ ಬರದ ಹೊಡೆತಕ್ಕೆ ಇಳುವರಿ ಕುಸಿದಿರುವುದರಿಂದ ಬಹುತೇಕ ರೈತರ ಪಾಲಿಗೆ ಉತ್ತಮ ಧಾರಣೆ ಕನ್ನಡಿಯ ಗಂಟಾಗಿದೆ.

ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕ್ವಿಂಟಲ್‌ಗೆ ₹2,500ರ ಗಡಿ ದಾಟಿದೆ. ಹಾವೇರಿ ಎಪಿಎಂಸಿಯಲ್ಲಿ ಶುಕ್ರವಾರ ಗರಿಷ್ಠ 2600 ರು.ಗೆ ಮಾರಾಟವಾಗಿದ್ದು, ಮಾದರಿ ಬೆಲೆ 2530 ರು. ಆಗಿದೆ. ಜಿಲ್ಲೆಯಲ್ಲಿ ಒಟ್ಟು 3.24 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದ್ದು, ಕಳೆದ ವರ್ಷ ಶೇ.80ರಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿತ್ತು. ಆದರೆ, ಉತ್ಪಾದನೆ ಹೆಚ್ಚಾಗಿ ಮಾರುಕಟ್ಟೆಗೆ ಆವಕ ಜೋರಾಗಿದ್ದರಿಂದ ಧಾರಣೆ ಕ್ವಿಂಟಲ್‌ಗೆ ₹1,600ರಿಂದ ₹1,800ಕ್ಕೆ ಕುಸಿದಿತ್ತು. ಕನಿಷ್ಠ ₹2,500 ಬೆಲೆ ನೀಡಬೇಕೆಂದು ಆಗ್ರಹಿಸಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಈ ಬಾರಿ ಹಂಗಾಮಿನ ಆರಂಭದಲ್ಲಿಯೇ ಧಾರಣೆ ₹2,500 ದಾಟಿದೆ. ಆದರೆ, ಬೆಳೆ ಕಡಿಮೆ ಇರುವುದರಿಂದ ಬೆಲೆ ಏರಿಕೆಯ ಪೂರ್ಣ ಲಾಭ ರೈತರಿಗೆ ಸಿಗದಂತಾಗಿದೆ.

ಆವಕ ಕುಂಠಿತ, ಧಾರಣೆಗೆ ಬಲ: ಈ ಬಾರಿಯೂ ಮೆಕ್ಕೆಜೋಳದ ಬಿತ್ತನೆ ಪ್ರಮಾಣ ವಾಡಿಕೆಯಷ್ಟೇ ಇದ್ದರೂ, ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಇಳುವರಿ ಗಣನೀಯವಾಗಿ ಕುಸಿದಿದೆ. ಹೀಗಾಗಿ, ಮಾರುಕಟ್ಟೆಗೆ ಮೆಕ್ಕೆಜೋಳದ ಆವಕ ಕಡಿಮೆಯಾಗಿದ್ದು, ಉತ್ತಮ ಗುಣಮಟ್ಟದ ಉತ್ಪನ್ನಕ್ಕೆ ವ್ಯಾಪಾರಿಗಳಿಂದ ಬೇಡಿಕೆ ಹೆಚ್ಚಿದೆ.

ಸಾಮಾನ್ಯವಾಗಿ ಅಕ್ಟೋಬರ್ ಮೊದಲ ವಾರದಿಂದ ಡಿಸೆಂಬರ್ ಮೊದಲ ವಾರದವರೆಗೆ ಮೆಕ್ಕೆಜೋಳದ ಕೊಯ್ಲು ನಡೆಯುತ್ತದೆ. ಕಳೆದ ವರ್ಷ ಹಾವೇರಿ ಮಾರುಕಟ್ಟೆಗೆ ಅಕ್ಟೋಬರ್‌ನಲ್ಲಿ 34 ಸಾವಿರ ಕ್ವಿಂಟಲ್ ಮೆಕ್ಕೆಜೋಳ ಆವಕವಾಗಿತ್ತು. ಆಗ ಧಾರಣೆ ₹1,600ರಿಂದ ₹2,000ರ ಆಸುಪಾಸಿನಲ್ಲಿತ್ತು. ನವೆಂಬರ್‌ನಲ್ಲಿ 96 ಸಾವಿರ ಕ್ವಿಂಟಲ್ ಹಾಗೂ ಡಿಸೆಂಬರ್‌ನಲ್ಲಿ 2.61 ಲಕ್ಷ ಕ್ವಿಂಟಲ್ ಆವಕವಾಗಿದ್ದರೂ ಬೆಲೆಯಲ್ಲಿ ಹೆಚ್ಚಿನ ಚೇತರಿಕೆ ಕಂಡುಬಂದಿರಲಿಲ್ಲ.

ಈ ಬಾರಿ ಇಳುವರಿ ಕುಸಿತ ಹಾಗೂ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ಬರುತ್ತಿರುವುದು ಧಾರಣೆಗೆ ಬಲ ನೀಡಿದೆ. ಹಾವೇರಿ ಎಪಿಎಂಸಿಯಲ್ಲಿ ಸೆಪ್ಟೆಂಬರ್ ತಿಂಗಳಿಡೀ ಕೇವಲ 2,937 ಕ್ವಿಂಟಲ್ ಮೆಕ್ಕೆಜೋಳ ಆವಕವಾಗಿದೆ. ಅಕ್ಟೋಬರ್‌ನಿಂದ ಆವಕದಲ್ಲಿ ತುಸು ಏರಿಕೆಯಾಗಿದೆ. ಗುರುವಾರ 7901 ಕ್ವಿಂಟಲ್‌, ಅ.9ರಂದು 11259 ಕ್ವಿಂಟಲ್‌ ಮೆಕ್ಕೆಜೋಳ ಆವಕವಾಗಿದೆ. ರೈತರು ಹಿಂದಿನ ವರ್ಷಗಳಂತೆ ದೊಡ್ಡ ಪ್ರಮಾಣದಲ್ಲಿ ಉತ್ಪನ್ನ ತರುತ್ತಿಲ್ಲ. ಹಳೆಯ ದಾಸ್ತಾನು ಕೂಡ ಸೀಮಿತವಾಗಿರುವುದು ಧಾರಣೆಯ ಮೇಲೆ ಪರಿಣಾಮ ಬೀರಿದೆ.

ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಹಿರೇಕೆರೂರು, ಹಾನಗಲ್ಲ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ಎಪಿಎಂಸಿಗಳಲ್ಲಿ ಕ್ವಿಂಟಲ್‌ಗೆ ಸುಮಾರು 2500 ರು. ಧಾರಣೆಯಿದೆ.

ಕಳೆದ ವರ್ಷದ ಇದೇ ಹಂಗಾಮಿನಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಈ ಬಾರಿ ಮಾರುಕಟ್ಟೆಯ ಧಾರಣೆ ತುಸು ನೆಮ್ಮದಿ ನೀಡಿದೆ. ಆದರೆ, ಕೈಯಲ್ಲಿ ಬೆಳೆ ಇಲ್ಲದಿರುವುದರಿಂದ ಬೆಲೆ ಏರಿಕೆಯ ಪ್ರಯೋಜನ ಸೀಮಿತವಾಗಿದೆ. ಇಳುವರಿ ಕುಸಿತದಿಂದ ಉತ್ಪಾದನಾ ವೆಚ್ಚವೂ ವಸೂಲಿಯಾಗದ ಪರಿಸ್ಥಿತಿ ನಿರ್ಮಾಣವಾಗಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಎಥೆನಾಲ್ ಬೇಡಿಕೆಯೂ ಧಾರಣೆಗೆ ಬೆಂಬಲ

ದೇಶದಲ್ಲಿ ಧಾನ್ಯ ಆಧಾರಿತ ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳ ಪ್ರಮುಖ ಕಚ್ಚಾವಸ್ತುವಾಗಿದೆ. ಮತ್ತೊಂದೆಡೆ, ಕೋಳಿ ಸಾಕಾಣಿಕೆ ಉದ್ಯಮದ ಪೌಲ್ಟ್ರಿ ಆಹಾರ ತಯಾರಿಕೆಯಲ್ಲಿಯೂ ಮೆಕ್ಕೆಜೋಳಕ್ಕೆ ಪ್ರಮುಖ ಸ್ಥಾನವಿದೆ. ಈ ಎರಡೂ ಕ್ಷೇತ್ರಗಳಿಂದ ಮೆಕ್ಕೆಜೋಳಕ್ಕೆ ಬೇಡಿಕೆ ಇರುವುದರಿಂದ ಮಾರುಕಟ್ಟೆಯಲ್ಲಿ ಧಾರಣೆಗೆ ಬೆಂಬಲ ಸಿಗುತ್ತಿದೆ.

ಬೆಲೆ ಏರಿದರೂ ಬರದ ಹೊಡೆತ ತಪ್ಪಿಲ್ಲ: ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯಾಗಿರುವುದು ಒಂದೆಡೆಯಾದರೆ, ಹೊಲದಲ್ಲಿ ಬೆಳೆ ಕೈಕೊಟ್ಟಿರುವುದು ಮತ್ತೊಂದೆಡೆ. ಬಿತ್ತನೆ ಮಾಡಿದ್ದರೂ ನಿರೀಕ್ಷಿತ ಇಳುವರಿ ಸಿಗದಿರುವುದರಿಂದ ರೈತರಿಗೆ ಆದಾಯದ ಕೊರತೆ ಎದುರಾಗಿದೆ. ಹೀಗಾಗಿ, ಮಾರುಕಟ್ಟೆಯ ಬೆಲೆ ಏರಿಕೆಯನ್ನು ಮಾತ್ರ ಆಧರಿಸಿ ರೈತರ ಸ್ಥಿತಿ ಸುಧಾರಿಸಿದೆ ಎಂದು ಹೇಳಲಾಗದು.

ರೈತರು ಉತ್ಪನ್ನ ಮಾರಾಟದಲ್ಲಿ ಆತುರಪಡದೆ ಸ್ಥಳೀಯ ಎಪಿಎಂಸಿಗಳ ದರ, ಗುಣಮಟ್ಟಕ್ಕೆ ಅನುಗುಣವಾಗಿ ಸಿಗುವ ಬೆಲೆ ಹಾಗೂ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರುವ ಆವಕವನ್ನು ಗಮನಿಸುವುದು ಅಗತ್ಯ ಎಂಬುದು ಕೃಷಿ ವಲಯದ ಅಭಿಪ್ರಾಯ. ಆದರೆ, ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಮಾರುಕಟ್ಟೆ ಧಾರಣೆಯೊಂದೇ ಪರಿಹಾರವಾಗಲಾರದು. ಬರದಿಂದ ಉಂಟಾದ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂಬ ಆಗ್ರಹವೂ ಕೇಳಿಬಂದಿದೆ.

ಕಳೆದ ವರ್ಷ ಮೆಕ್ಕೆಜೋಳಕ್ಕೆ ಬೆಲೆ ಏರಿಕೆ ಮಾಡಬೇಕೆಂದು ನಾವು ಪ್ರತಿಭಟನೆ ನಡೆಸಿದ್ದೆವು. ಈ ಬಾರಿ ಬೆಲೆ ಏರಿಕೆಯಾಗಿದ್ದರೂ ರೈತರ ಕೈಯಲ್ಲಿ ಬೆಳೆ ಕಡಿಮೆ ಇದೆ. ತೀವ್ರ ಬರಗಾಲದಿಂದ ಇಳುವರಿ ಕುಸಿದಿದ್ದು, ರೈತರಿಗೆ ನಿರೀಕ್ಷಿತ ಆದಾಯ ಸಿಗುತ್ತಿಲ್ಲ. ಸರ್ಕಾರ ಬರಪೀಡಿತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.