ಒಂದು ಎಕರೆಗೆ ೧೨ ಕ್ವಿಂಟಲ್ ಮಾತ್ರ ಎನ್ನಲಾಗಿದ್ದರೂ ಕೆಲವು ರೈತರು ಪ್ರತಿ ರೈತರಿಗೆ ೫೦ ಕ್ವಿಂಟಲ್ ಎಂದು ಸರ್ಕಾರ ಹೇಳಿದೆ. ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದರ ಬಗ್ಗೆ ಸರ್ಕಾರ ಸರಿಯಾಗಿ ಮಾಹಿತಿ ನೀಡಬೇಕು ಎಂದು ರೈತರು ಆಗ್ರಹಿಸಿದರು.

ಲಕ್ಷ್ಮೇಶ್ವರ: ಪಟ್ಟಣದಲ್ಲಿ ರೈತರ ಹೋರಾಟದ ಫಲವಾಗಿ ಡಿ. ೧ರಂದು ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಹೋರಾಟದಿಂದ ಬಹುತೇಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗೋವಿನಜೋಳ ರೈತರಿಗೆ ಉಪಯೋಗವಾಗಿದ್ದು, ಆದರೆ ಪಟ್ಟಣದಲ್ಲಿ ಟಿಎಪಿಸಿಎಂಎಸ್ ವತಿಯಿಂದ ಪ್ರಾರಂಭಿಸಿರುವ ಖರೀದಿ ಕೇಂದ್ರಕ್ಕೆ ಬರುವ ರೈತರು ನಿಯಮಗಳಿಂದ ಗೊಂದಲಕ್ಕೀಡಾಗುತ್ತಿದ್ದಾರೆ.ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಹೆಸರು ನೋಂದಾಯಿಸುವ ಕಾರ್ಯ ಪ್ರಾರಂಭವಾದ ವೇಳೆ ಸರ್ವರ್ ಸಮಸ್ಯೆ ಎದುರಿಸಲಾಯಿತು. ಕೆಎಂಎಫ್‌ದ ಲಾಗಿನ್‌ನಲ್ಲಿ ನೋಂದಣಿಯಾದ ರೈತರು ಧಾರವಾಡಕ್ಕೆ ಬೆಳೆಯನ್ನು ತೂಕ ಮಾಡಿ ಅಲ್ಲಿಯೇ ಕೊಡಬೇಕು ಎನ್ನುವ ವದಂತಿಯಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಬಳಿಕ ಇಲ್ಲಿಯೇ ತೆಗೆದುಕೊಳ್ಳಲಾಗುವುದು ಎನ್ನುವ ಮಾಹಿತಿ ನೀಡಲಾಯಿತು. ನಂತರ ಫೆಡರೇಷನ್‌ದ ಲಾಗಿನ್ ನೋಂದಣಿಯೂ ಇದೇ ರೀತಿ ನೆಟ್‌ವರ್ಕ್ ಸಮಸ್ಯೆ ಎದುರಿಸಿತು. ಒಟ್ಟಿನಲ್ಲಿ ಸಾವಿರಾರು ರೈತರು ಮೆಕ್ಕೆಜೋಳ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡು ಖರೀದಿ ಪ್ರಾರಂಭವಾಗುವುದನ್ನು ಕಾಯುತ್ತಿದ್ದರು.ಕಳೆದ ಶುಕ್ರವಾರ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಮೆಕ್ಕೆಜೋಳ ಖರೀದಿ ಪ್ರಾರಂಭಿಸಲಾಯಿತು. ಎರಡು ದಿನಗಳ ಕಾಲ ಅಧಿಕಾರಿಗಳು ಮೆಕ್ಕೆಜೋಳದ ಕಾಳುಗಳ ತೇವಾಂಶ ಪರೀಕ್ಷೆ ಮಾಡಿ ಖರೀದಿಸುವ ಕಾರ್ಯ ಪ್ರಾರಂಭಿಸಿದರು. ಇದಕ್ಕೂ ರೈತರು ಕಾಯುವಂತಾಯಿತು. ನಂತರ ತೂಕ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದ್ದರೂ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅದಕ್ಕೂ ರೈತರನ್ನು ಸುಸ್ತಾಗಿಸಿದೆ.ಸೋಮವಾರ ವಾಹನಗಳಲ್ಲಿ ಮೆಕ್ಕೆಜೋಳದ ಚೀಲಗಳನ್ನು ತುಂಬಿಕೊಂಡು ಬಂದಿದ್ದ ರೈತರು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಅನೇಕ ರೈತರು ನೋಂದಣಿಯಾಗದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಒಂದು ಎಕರೆಗೆ ೧೨ ಕ್ವಿಂಟಲ್ ಮಾತ್ರ ಎನ್ನಲಾಗಿದ್ದರೂ ಕೆಲವು ರೈತರು ಪ್ರತಿ ರೈತರಿಗೆ ೫೦ ಕ್ವಿಂಟಲ್ ಎಂದು ಸರ್ಕಾರ ಹೇಳಿದೆ. ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದರ ಬಗ್ಗೆ ಸರ್ಕಾರ ಸರಿಯಾಗಿ ಮಾಹಿತಿ ನೀಡಬೇಕು. ತೂಕ ಮಾಡಿಕೊಳ್ಳುವುದು ಯಾವಾಗ, ದುಡ್ಡು ಬರುವುದು ಯಾವಾಗ ಎನ್ನುವುದು ರೈತರನ್ನು ಗೊಂದಲಕ್ಕೆ ಸಿಲುಕಿಸಿದೆ ಎನ್ನುತ್ತಾರೆ ಗೊಜನೂರ ಗ್ರಾಮದ ನಿಂಗನಗೌಡ ಪಾಟೀಲ, ಮಹಾಂತಗೌಡ ಪಾಟೀಲ, ರಮೇಶ ಬಾಕಳೆ ಮುಂತಾದವರು.ತೂಕ ಮಾಡುವಾಗ ಹಮಾಲಿ ಮಾಡುವ ಕಾರ್ಮಿಕರು ಹಮಾಲಿ ದರವನ್ನು ಸಹ ಸರಿಯಾಗಿ ನಿರ್ಧರಿಸಿಲ್ಲ ಎನ್ನುತ್ತಾರೆ. ಎಪಿಎಂಸಿ ನೀಡುವಂತೆ ಹಮಾಲಿ ದರ ನೀಡುವುದು ಸಹ ನಿರ್ದಿಷ್ಟವಾಗಿಲ್ಲ. ಹಮಾಲಿ ದರ ಕಡಿಮೆಯಾದರೆ ನಮಗೆ ಕಷ್ಟವಾಗುತ್ತದೆ ಎನ್ನುತ್ತಾರೆ ಕೂಲಿ ಕಾರ್ಮಿಕರು. ಇಂತಹ ಗೊಂದಲಗಳೆಲ್ಲವನ್ನು ಬಗೆಹರಿಸಿ ರೈತರಿಗೆ ಭರವಸೆ ನೀಡುವ ಕಾರ್ಯವನ್ನು ಸರ್ಕಾರ ಶೀಘ್ರವಾಗಿ ಮಾಡಬೇಕು ಎನ್ನುವುದು ಬಹುತೇಕ ರೈತರ ಅಭಿಪ್ರಾಯ.

ಷರತ್ತು ಸಡಿಲಗೊಳಿಸಿ: ಸರ್ಕಾರದ ನಿರ್ದೇಶನದಂತೆ ನಮ್ಮ ಟಿಎಪಿಸಿಎಂಎಸ್ ವತಿಯಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಮಾಡಲಾಗಿದೆ. ಸರ್ಕಾರ ನೀಡಿರುವ ಗೈಡ್‌ಲೈನ್ಸ್ ಪ್ರಕಾರ ಒಬ್ಬ ರೈತರಿಂದ ಎಕರೆಗೆ 12 ಕ್ವಿಂಟಲ್‌ನಂತೆ ಹಾಗೂ ಗರಿಷ್ಠ 50 ಕ್ವಿಂಟಲ್ ಖರೀದಿಸಲಾಗುವುದು. ಸರ್ಕಾರ ಮೆಕ್ಕೆಜೋಳ ಖರೀದಿ ಮಾಡಲು ವಿಧಿಸಿರುವ ಷರತ್ತುಗಳನ್ನು ಸಡಿಲುಗೊಳಿಸಬೇಕು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಣ್ಣ ಉಪನಾಳ ತಿಳಿಸಿದರು.