ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ 2025-26ನೇ ಸಾಲಿನ ಮೆಕ್ಕೆಜೋಳ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ತಾಲೂಕು ಕೇಂದ್ರಗಳು ಸೇರಿದಂತೆ ಒಂಭತ್ತು ಕಡೆಗಳಲ್ಲಿ ಈಗಾಗಲೇ ಆರಂಭಿಸಲಾಗಿದೆ. ಜಿಲ್ಲೆಯ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಹ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಹಾವೇರಿ: ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ 2025-26ನೇ ಸಾಲಿನ ಮೆಕ್ಕೆಜೋಳ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ತಾಲೂಕು ಕೇಂದ್ರಗಳು ಸೇರಿದಂತೆ ಒಂಭತ್ತು ಕಡೆಗಳಲ್ಲಿ ಈಗಾಗಲೇ ಆರಂಭಿಸಲಾಗಿದೆ. ಜಿಲ್ಲೆಯ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಹ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಸರ್ಕಾರದ ಮಾರ್ಗಸೂಚಿಯಂತೆ ಮೆಕ್ಕೆಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಖರೀದಿ ಕೇಂದ್ರ: ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಈಗಾಗಲೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಹಾವೇರಿ, ರಾಣಿಬೆನ್ನೂರು( ಎಪಿಎಂಸಿ ಮೆಗಾ ಮಾರುಕಟ್ಟೆ ಹಾಗೂ ಮುಖ್ಯ ಮಾರುಕಟ್ಟೆ), ಹಿರೇಕೆರೂರು, ರಟ್ಟಿಹಳ್ಳಿ ತಾಲೂಕು ಮಾಸೂರು, ಶಿಗ್ಗಾಂವಿ, ಸವಣೂರ, ಹಾನಗಲ್ಲ ಹಾಗೂ ಬ್ಯಾಡಗಿ ತಾಲೂಕು ಚಿಕ್ಕಬಾಸೂರ ಎಪಿಎಂಸಿ ಯಾರ್ಡಗಳಲ್ಲಿ ಆರಂಭಿಸಲಾಗಿದೆ ಎಂದರು.ಹಾವೇರಿ ತಾಲೂಕಿನ ಬೆಳವಿಗಿ, ನೆಗಳೂರು, ಗುತ್ತಲ, ದೇವಗಿರಿ, ಕುರುಬಗೊಂಡ, ಹಾವನೂರು, ಸಂಗೂರು, ಅಗಡಿ ಮತ್ತು ಕಾಟೇನಹಳ್ಳಿ, ರಾಣಿಬೆನ್ನೂರು ತಾಲೂಕಿನ ಮಡ್ಲೇರಿ, ಕಮದೋಡ, ಇಟಗಿ, ಕರೂರ, ಹನಮಾಪೂರ, ಕುಪ್ಪೇಲೂರ, ಹಲಗೇರಿ, ಹೆಡಿಯಾಲ, ಹರನಗಿರಿ ಮತ್ತು ನದಿಅರಳಿಹಳ್ಳಿ , ಹಿರೇಕೆರೂರು-ರಟ್ಟಿಹಳ್ಳಿ ತಾಲೂಕಿನ ಮಕರಿ, ಶಿರಗಂಬಿ, ನಾಗವಂದ, ಬೋಗಾವಿ, ಚಿಕ್ಕೇರೂರು, ಕೋಡ, ರಟ್ಟಿಹಳ್ಳಿ ಮತ್ತು ಹಂಸಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ, ಮಣಿಕಟ್ಟಿ, ಹುಲಗೂರ, ಚಂದಾಪೂರ, ಹನುಮನಹಳ್ಳಿ, ಕ್ಯಾಲಕೊಂಡ, ದುಂಡಶಿ, ಹುನಗುಂದ ಮತ್ತು ಮುಗಳಿ, ಸವಣೂರ ತಾಲೂಕಿನ ಕಲಿವಾಳ, ಕಡಕೋಳ, ಹಿರೇಮುಗದೂರ, ಯಲವಿಗಿ, ಹತ್ತಿಮತ್ತೂರು, ಕಾರಡಗಿ, ಚೌಡಾಳ ಮತ್ತು ಕುಣಿಮೆಳ್ಳಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ.ಹಾನಗಲ್ಲ ತಾಲೂಕಿನ ಆಡೂರು, ಹಿರೂರು, ಕುಸನೂರು, ಅರಳೇಶ್ವರ, ಮಾರನಬೀಡ, ಹೆರೂರು, ಅಕ್ಕಿಆಲೂರು, ಬಮ್ಮನಹಳ್ಳಿ ಮತ್ತು ಬೆಳಗಾಲಪೇಟೆ, ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು, ಕಾಗಿನೆಲೆ, ಘಾಳಪೂಜಿ, ಬನ್ನಿಹಟ್ಟಿ, ಕದರಮಂಡಲಗಿ, ಕಲ್ಲೇದೇವರ, ಹೊಸ ಶಿಡೇನೂರ, ಮತ್ತೂರು ಮತ್ತು ಖುರ್ದಕೋಡಿಹಳ್ಳಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಉತ್ಪನ್ನ ಖರೀದಿ ಕೇಂದ್ರಗಳ ಕುರಿತಂತೆ ವ್ಯಾಪಕ ಪ್ರಚಾರನಡೆಸಿ, ಕರಪತ್ರ, ಬ್ಯಾನರ್ ಅಳಡಿಸುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು. ರೈತರಿಂದ ಖರೀದಿಸಿದ ಉತ್ಪನ್ನ ದಾಸ್ತಾನು ಮಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಉಗ್ರಾಣಗಳನ್ನು ಕಾಯ್ದಿರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಿತ್ತನೆ ಪ್ರದೇಶ: ಜಿಲ್ಲೆಯಲ್ಲಿ 2,58,167 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಸುಮಾರು 12.50 ಮೆಟ್ರಿಕ್ ಟನ್ ಉತ್ಪನ್ನ ಬರುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರುಗಳ ವ್ಯವಹಾರಗಳ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಹಾಯಕ ನಿರ್ದೇಶಕರು ಇತರರು ಇದ್ದರು.