ಕನ್ನಡಪ್ರಭ ವಾರ್ತೆ ಅಥಣಿನಗರದ ನಿವಾಸಿಗಳು ಗಾಢ ನಿದ್ರೆಯಲ್ಲಿದ್ದಾಗಲೇ ಬಸವೇಶ್ವರ ವೃತ್ತದ ಸಮೀಪದ ಜತ್ತ ರಸ್ತೆಯಲ್ಲಿರುವ ಬ್ರಹ್ಮ ಎಂಟರ್ಪ್ರೈಸಸ್ ವಾಣಿಜ್ಯ ಮಳಿಗೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಅಥಣಿ
ನಗರದ ನಿವಾಸಿಗಳು ಗಾಢ ನಿದ್ರೆಯಲ್ಲಿದ್ದಾಗಲೇ ಬಸವೇಶ್ವರ ವೃತ್ತದ ಸಮೀಪದ ಜತ್ತ ರಸ್ತೆಯಲ್ಲಿರುವ ಬ್ರಹ್ಮ ಎಂಟರ್ಪ್ರೈಸಸ್ ವಾಣಿಜ್ಯ ಮಳಿಗೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.ಭಾನುವಾರದ ನಸುಕಿನ ಜಾವ ಸುಮಾರು 3 ಗಂಟೆಯ ವೇಳೆಗೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಮಳಿಗೆಯಾದ್ಯಂತ ವ್ಯಾಪಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅವಘಡಕ್ಕೆ ನಿಖರವಾದ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.ನಗರದ ಬಸವೇಶ್ವರ ವೃತ್ತದ ಸಮೀಪ ಜತ್ತ ರಸ್ತೆಯಲ್ಲಿರುವ ಮಹಾರಾಷ್ಟ್ರ ಮೂಲದ ಮಾರುತಿ ಮಾಳಿ ಹಾಗೂ ಅಭಿಜಿತ್ ಶಿಂಧೆ ಅವರ ಮಾಲೀಕತ್ವದ ಬ್ರಹ್ಮ ಎಂಟರ್ಪ್ರೈಸಸ್ ಮಳಿಗೆಯಲ್ಲಿ ಮಧ್ಯರಾತ್ರಿಯ ನಂತರ ಹೊಗೆ ಆವರಿಸಿಕೊಂಡಿದ್ದು, ನಸುಕಿನ ಜಾವ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿವೆ. ಪತ್ರಾಸ್ ಶೀಟ್ಗಳಿಂದ ನಿರ್ಮಿಸಲಾದ ಎರಡು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ವೇಗವಾಗಿ ಹರಡಿದ್ದು, ಕೆಲವೇ ನಿಮಿಷಗಳಲ್ಲಿ ಮಳಿಗೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್, ಘಟನೆಯ ಸಂದರ್ಭದಲ್ಲಿ ಮಳಿಗೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.₹4 ಕೋಟಿ ಮೌಲ್ಯದ ವಸ್ತುಗಳು ಭಸ್ಮ: ಅಗ್ನಿ ಅವಘಡದಿಂದ ಮಳಿಗೆಯಲ್ಲಿದ್ದ ಪೀಠೋಪಕರಣಗಳು, ಬ್ರ್ಯಾಂಡೆಡ್ ಬಟ್ಟೆಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಸ್ಟೀಲ್ ಸಾಮಗ್ರಿಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು ₹4 ಕೋಟಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ. ನಿಖರವಾದ ನಷ್ಟದ ಪ್ರಮಾಣ ಪರಿಶೀಲನೆಯ ಬಳಿಕ ತಿಳಿಯಬೇಕಿದೆ.ಬೆಂಕಿ ನಂದಿಸಲು ಸಾರ್ವಜನಿಕರ ಹರಸಾಹಸ: ನಸುಕಿನ ಜಾವ ಮಳಿಗೆಯಿಂದ ದಟ್ಟ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡ ತಕ್ಷಣ ಸ್ಥಳೀಯರು ನೀರು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು.2 ಗಂಟೆಗಳ ಕಾಲ ಅಗ್ನಿಶಾಮಕ ದಳದ ಕಾರ್ಯಾಚರಣೆ: ಮಾಹಿತಿ ಲಭಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಥಣಿ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಬೆಂಕಿ ಅಕ್ಕಪಕ್ಕದ ವಾಣಿಜ್ಯ ಮಳಿಗೆಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.ಅಥಣಿ ಅಗ್ನಿಶಾಮಕ ಠಾಣೆಯ ಎರಡು ವಾಹನಗಳು ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಯ ಎರಡು ಅಗ್ನಿಶಾಮಕ ವಾಹನಗಳು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ಇದೇ ವೇಳೆ ಬರಗಾಲದ ಪರಿಸ್ಥಿತಿಯಲ್ಲಿ ಬೆಂಕಿ ನಂದಿಸಲು ಅಗತ್ಯವಾದ ನೀರು ಸಂಗ್ರಹಿಸುವುದು ಸವಾಲಾಗಿ ಪರಿಣಮಿಸಿತು. ಕೊನೆಗೆ ಪುರಸಭೆಯ ಜಲಕುಂಭದ ನೀರನ್ನು ಬಳಸಿಕೊಂಡು ಬೆಂಕಿ ನಂದಿಸಲಾಯಿತು.ಘಟನಾ ಸ್ಥಳಕ್ಕೆ ಜನಸಾಗರ; ಸಂಚಾರ ಅಸ್ತವ್ಯಸ್ತ: ನಗರದ ಮಧ್ಯಭಾಗದಲ್ಲಿ ಸಂಭವಿಸಿದ ಅಗ್ನಿ ಅವಘಡದ ಸುದ್ದಿ ಹರಡುತ್ತಿದ್ದಂತೆ ಮುಂಜಾನೆಯೇ ಸ್ಥಳದಲ್ಲಿ ಜನಸಾಗರವೇ ಸೇರಿತ್ತು. ಇದರಿಂದ ಜತ್ತ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನಗಳ ಸಂಚಾರವನ್ನು ಸುಗಮಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.ಪೊಲೀಸರಿಂದ ಪರಿಶೀಲನೆ; ನಿಖರ ಕಾರಣದ ಬಗ್ಗೆ ತನಿಖೆ: ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಳಿಗೆಯ ಮಾಲೀಕರಾದ ಮಾರುತಿ ಮಾಳಿ ಹಾಗೂ ಅಭಿಜಿತ್ ಶಿಂಧೆ ಅವರು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಾಥಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದರೂ, ಅವಘಡದ ಹಿಂದಿನ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.ಇನ್ನೊಂದೆಡೆ, ವಿಮಾ ಪರಿಹಾರ ಪಡೆಯುವ ಉದ್ದೇಶದಿಂದಲೇ ಬೆಂಕಿ ಸಂಭವಿಸಿರಬಹುದೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆಯೇ ಎಂಬ ಬಗ್ಗೆಯೂ ಸ್ಥಳೀಯ ವಲಯದಲ್ಲಿ ಅನುಮಾನಗಳು ವ್ಯಕ್ತವಾಗುತ್ತಿವೆ. ಆದರೆ, ಈ ಆರೋಪಗಳಿಗೆ ಸದ್ಯಕ್ಕೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಿಲ್ಲ.ಘಟನಾ ಸ್ಥಳಕ್ಕೆ ಅಥಣಿ ಸಿಪಿಐ ಸಂತೋಷ ಹಳ್ಳೂರ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬರಲಿದೆ.
ಅನಧಿಕೃತ, ಅವೈಜ್ಞಾನಿಕ ವಾಣಿಜ್ಯ ಕಟ್ಟಡಗಳಿಗೆ ಕಡಿವಾಣ ಯಾವಾಗ?ಅಥಣಿ ಪಟ್ಟಣದ ಪುರಸಭೆ ವ್ಯಾಪ್ತಿ ಹಾಗೂ ಗ್ರಾಮೀಣ ಪ್ರದೇಶದ ಹಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಲಾಗಿರುವ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಅನೇಕ ವಾಣಿಜ್ಯ ಮಳಿಗೆಗಳಲ್ಲಿ ಅಗ್ನಿ ನಿರೋಧಕ ಉಪಕರಣಗಳು ಹಾಗೂ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸದಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ಕಟ್ಟಡ ಮಾಲೀಕರು ಕಟ್ಟಡ ನಿರ್ಮಾಣ ಮತ್ತು ಅಗ್ನಿ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು, ಪಿಡಿಒಗಳು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಹೆಸ್ಕಾಂ ಅಧಿಕಾರಿಗಳು ಕಟ್ಟಡಗಳ ಸುರಕ್ಷತಾ ವ್ಯವಸ್ಥೆಗಳ ಕುರಿತು ಸಮರ್ಪಕ ಪರಿಶೀಲನೆ ನಡೆಸಬೇಕೆಂಬ ಒತ್ತಾಯ ಹೆಚ್ಚಾಗಿದೆ.ವಾಣಿಜ್ಯ ಕಟ್ಟಡಗಳಿಗೆ ಅನುಮತಿ ನೀಡುವಾಗ ಅಗತ್ಯ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ. ಕಟ್ಟಡಗಳ ವಿದ್ಯುತ್ ವ್ಯವಸ್ಥೆ, ಅಗ್ನಿ ನಿರೋಧಕ ಉಪಕರಣಗಳು, ತುರ್ತು ನಿರ್ಗಮನ ವ್ಯವಸ್ಥೆ ಸೇರಿದಂತೆ ಸುರಕ್ಷತೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ನಿಯಮಿತ ತಪಾಸಣೆ ನಡೆಸುವುದು ಅತ್ಯಗತ್ಯವಾಗಿದೆ.
ಅಥಣಿಯಲ್ಲಿ ಸಂಭವಿಸಿರುವ ಈ ಅಗ್ನಿ ಅವಘಡವು ವಾಣಿಜ್ಯ ಕಟ್ಟಡಗಳ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಇಂತಹ ಅವಘಡಗಳು ಮರುಕಳಿಸಿದರೆ ಭಾರಿ ಆರ್ಥಿಕ ನಷ್ಟದ ಜೊತೆಗೆ ಮಾನವ ಜೀವಗಳಿಗೂ ಅಪಾಯ ಎದುರಾಗುವ ಸಾಧ್ಯತೆಯಿದೆ.ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ವಾಣಿಜ್ಯ ಕಟ್ಟಡಗಳ ಸುರಕ್ಷತಾ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಕಟ್ಟಡಗಳ ಮಾಲೀಕರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅಗ್ನಿ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಗ್ನಿ ಅವಘಡ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ, ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಸಂಬಂಧಪಟ್ಟ ಇಲಾಖೆಗಳು ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ.