ಮಕರ ಸಂಕ್ರಾಂತಿ: ಎಳ್ಳುಬೆಲ್ಲ ಹಂಚಿಕೆ, ರಾಸುಗಳ ಕಿಚ್ಚು ಹಾಯಿಸಿ ಜನರ ಸಂಭ್ರಮ

| Published : Jan 15 2025, 12:45 AM IST

ಸಾರಾಂಶ

ಸಂಕ್ರಾಂತಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಹಣ್ಣು ಹಂಪಲುಗಳು, ಹೂ ಹಾಗೂ ಎತ್ತು, ರಾಸುಗಳಿಗೆ ಅಲಂಕರಿಸುವ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಹೆಣ್ಣು ಮಕ್ಕಳು, ಮಹಿಳೆಯರು ಹೊಸ ಬಟ್ಟೆ, ಸೀರೆಗಳನ್ನು ಹಾಕಿಕೊಂಡು ಚಿನ್ನಾಭರಣಗಳಿಂದ ಅಲಂಕರಿಸಿಕೊಂಡು ದೇವರಿಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕರ ಸಂಕ್ರಾಂತಿ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹೆಣ್ಣುಮಕ್ಕಳು ಎಳ್ಳುಬೆಲ್ಲ ಹಂಚಿ, ಯುವಕರು ರಾಸುಗಳನ್ನು ಕಿಚ್ಚು ಹಾಯಿಸುವ ಮೂಲಕ ಸಂಭ್ರಮದಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಹಣ್ಣು ಹಂಪಲುಗಳು, ಹೂ ಹಾಗೂ ಎತ್ತು, ರಾಸುಗಳಿಗೆ ಅಲಂಕರಿಸುವ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಹೆಣ್ಣು ಮಕ್ಕಳು, ಮಹಿಳೆಯರು ಹೊಸ ಬಟ್ಟೆ, ಸೀರೆಗಳನ್ನು ಹಾಕಿಕೊಂಡು ಚಿನ್ನಾಭರಣಗಳಿಂದ ಅಲಂಕರಿಸಿಕೊಂಡು ದೇವರಿಗೆ ಪೂಜೆ ಸಲ್ಲಿಸಿ ನಂತರ ಎಳ್ಳುಬೆಟ್ಟಲ್ಲ ಬುಟ್ಟಿಯೊಂದಿಗೆ ಮನೆಮನೆಗಳಿಗೆ ತೆರಳಿ ಎಳ್ಳುಬೆಲ್ಲ ವಿತರಿಸಿ ಸಂಭ್ರಮಿಸಿದರು.

ಎತ್ತುಗಳು ಕಿಚ್ಚು:

ಮರಕ ಸಂಕ್ರಾಂತಿ ಹಬ್ಬದಂದು ಎತ್ತುಗಳು, ರಾಸುಗಳನ್ನು ಕಿಚ್ಚುಹಾಯಿಸುವುದು ವಿಶೇಷ. ಯುವಕರು ಎತ್ತುಗಳು, ರಾಸುಗಳಿಗೆ ಬಗೆಬಗೆಯ ಬಣ್ಣಗಳನ್ನು ಹಚ್ಚಿ, ವಿವಿಧ ಅಲಂಕಾರಿಕ ವಸ್ತುಗಳು, ಹೂಗಳಿಂದ ಅಲಂಕರಿಸಿ ನಂತರ ಗ್ರಾಮಗಳ ಹೊರವಲಯಗಳಲ್ಲಿ ಗ್ರಾಮಸ್ಥರು ಜತೆಗೂಡಿ ಆಚರಿಸುವ ಕಿಚ್ಚುಹಾಸುವ ಮೂಲಕ ವಿಜಂಭಣೆಯಿಂದ ಆಚರಣೆ ಮಾಡಿದರು. ಯುವಕರು ಬೆಂಕಿಯಲ್ಲಿ ಎತ್ತುಗಳನ್ನು ಕಿಚ್ಚುಹಾಯಿಸುವ ದೃಶ್ಯಗಳನ್ನು ಕಂಡು ಸಾರ್ವಜನಿಕರು ಸಂಭ್ರಮಿಸಿದರು.

ಕಿಚ್ಚು ಹಾಯಿಸುವ ವೇಳೆ ಆಯತಪ್ಪಿ ಬಿದ್ದು ನಾಲ್ವರು ರೈತರಿಗೆ ಗಾಯ

ಮದ್ದೂರು:

ಸಂಕ್ರಾಂತಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಜಾನುವಾರಗಳ ಕಿಚ್ಚು ಹಾಯಿಸುವ ವೇಳೆ ಆಯತಪ್ಪಿ ಬೆಂಕಿಗೆ ಬಿದ್ದು ನಾಲ್ವರು ರೈತರು ಗಾಯಗೊಂಡಿರುವ ಘಟನೆ ತಾಲೂಕಿನ ಹೊಸಕೆರೆ ಹಾಗೂ ಆಲಂಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಜರುಗಿದೆ. ಘಟನೆಯಲ್ಲಿ ಹೊಸಕೆರೆ ಗ್ರಾಮದ ರಾಮಕೃಷ್ಣ, ಆಲಂಶೆಟ್ಟಿಹಳ್ಳಿಯ ಸತೀಶ್, ಶಿವಲಿಂಗ ಹಾಗೂ ಮುನೀಶ್ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ರಾಮಕೃಷ್ಣರ ಬೆನ್ನು, ಕೈ ಕಾಲು ಹಾಗೂ ಮುಖಕ್ಕೆ ತೀವ್ರವಾಗಿ ಸುಟ್ಟಗಾಯವಾಗಿದೆ. ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ.

ಸಂಕ್ರಾಂತಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಎರಡು ಗ್ರಾಮಗಳ ರೈತರು ಜಾನುವಾರುಗಳನ್ನು ಶೃಂಗರಿಸಿ ಕಿಚ್ಚು ಹಾಯಿಸುತ್ತಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಿಗೆ ಬೆದರಿದ ಜಾನುವಾರುಗಳು ಅಡ್ಡಾದಿಡಿಯಾಗಿ ಓಡಿದ ಪರಿಣಾಮ ಈ ಅನಾಹುತ ಸಂಭವಿಸಿದೆ.