ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸುಗ್ಗಿ ಹಬ್ಬವಾಗಿರುವ ಮಕರ ಸಂಕ್ರಾಂತಿಯನ್ನು ಎಳ್ಳು ಬೆಲ್ಲಗಳ ವಿನಿಮಯ, ಪೊಂಗಲ್ ಸೇರಿದಂತೆ ವಿಶೇಷ ಖಾದ್ಯಗಳ ತಯಾರಿಕೆ, ಗೋವುಗಳನ್ನು ಕಿಚ್ಚು ಹಾಯಿಸುವುದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳ ಮೂಲಕ ಸಿಲಿಕಾನ್ ಸಿಟಿಯ ಜನರು ಸಡಗರ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ನಗರದೆಲ್ಲೆಡೆ ಸಡಗರ ಮನೆ ಮಾಡಿತ್ತು. ಪೊಂಗಲ್ ಸೇರಿದಂತೆ ಕಬ್ಬು, ಕೊಬ್ಬರಿ, ಗೆಣಸು, ಕಡಲೆಕಾಯಿ, ಬಾಳೆಹಣ್ಣು ಮತ್ತು ಅವರೆಕಾಯಿಗಳಿಂದ ವಿಶೇಷ ಖಾದ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿದರು.
ಸುಧಾಮನಗರ ಸೇರಿದಂತೆ ವಿವಿಧೆಡೆ ತಮಿಳು, ಕೇರಳ ಮೂಲದ ಜನತೆ ಸಾಮೂಹಿಕವಾಗಿ ಪೊಂಗಲ್ ತಯಾರಿಸಿ ಗಮನ ಸೆಳೆದರು. ಹಲವು ಬಡಾವಣೆಗಳಲ್ಲಿ ಸುಗ್ಗಿ-ಹುಗ್ಗಿಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನಗರದ ಎಲ್ಲ ದೇಗುಲಗಳಲ್ಲಿಯೂ ಅಲಂಕಾರ, ವಿಶೇಷ ಪೂಜೆಗಳು ಜರುಗಿದವು. ದೊಮ್ಮಲೂರಿನ ಶ್ರೀ ಸೂರ್ಯನಾರಾಯಣ ದೇಗುಲದಲ್ಲಿ ಸುಮಾರು 500 ಜನ ಸೇರಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.
ಪ್ರಮುಖವಾಗಿ ಗವಿಗಂಗಾಧರೇಶ್ವರ, ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ, ಸೀತಾ ಸರ್ಕಲ್ ಮಂಜುನಾಥೇಶ್ವರ ದೇವಸ್ಥಾನ ಸೇರಿದಂತೆ ಎಲ್ಲ ಶೈವ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಾಗಿ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಂಜೆ ಜಯನಗರದ ಎರಡನೇ ಹಂತ ಕನಕನ ಪಾಳ್ಯದಲ್ಲಿ ರೈತರು ಗೋವುಗಳನ್ನು ಕಿಚ್ಚು ಹಾಯಿಸುವ ಮೂಲಕ ಸಾಂಪ್ರದಾಯಿಕ ಆಚರಣೆ ನಡೆಸಿದರು. ಹನುಮಂತ ನಗರ, ಗವಿಪುರ ಗುಟ್ಟಳ್ಳಿ ಸೇರಿ ಇನ್ನಿತರೆಡೆ ಗೋವುಗಳನ್ನು ಪೂಜಿಸಿ ಕಿಚ್ಚು ಹಾಯಿಸಲಾಯಿತು.
ಶಿವಲಿಂಗ ಸ್ಪರ್ಶಿಸಿದ ಸೂರ್ಯರಶ್ಮಿ
ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ವೇಳೆ ಪುರಾತನ ಪ್ರಸಿದ್ಧ ಗವಿಪುರಂನ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಶಿವಲಿಂಗದ ಮೇಲೆ 52 ಸೆಕೆಂಡ್ ಹಾಗೂ ಪಾದದಿಂದ ಲಿಂಗದ ಪೀಠದವರೆಗೆ 46 ಸೆಕೆಂಡ್ ಕಾಲ ಸೂರ್ಯರಶ್ಮಿ ಶಿವಲಿಂಗವನ್ನು ನಮಿಸಿತು.
ದಕ್ಷಿಣ ಬಾಗಿಲಿನ ಮೂಲಕ ನಂದಿಯ ಕೊಂಬಿನ ಮೂಲಕ ಹಾದು ಶಿವಲಿಂಗವನ್ನು ಸ್ಪರ್ಶಿಸಿತು. ಈ ವೇಳೆ ಗಂಗಾಧರನಿಗೆ ಪಂಚಾಭೀಷೇಕ ನಡೆಸಲಾಯಿತು. ಬಳಿಕ ಪುಷ್ಪಾಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು.
ಆದರೆ, ಸ್ವಾಮಿಯ ಶಿಖೆಯನ್ನು ಸೂರ್ಯರಶ್ಮಿ ಸ್ಪರ್ಶಿಸಲಿಲ್ಲ. ಇದರಿಂದ ಗಂಗೆ ಕ್ರೋಧಿತಳಾಗಬಹುದು. ಪರಿಣಾಮ ಅಲ್ಲಲ್ಲಿ ಜಲಕಂಟಕದ ಸಾಧ್ಯತೆಯಿದೆ. ಹೀಗಾಗಿ ಗಂಗೆ, ಶಿವರ ಕೋಪಶಮನಕ್ಕಾಗಿ ಮಂಗಳವಾರದಿಂದ 11 ದಿನಗಳ ಕಾಲ ರುದ್ರಾಭಿಷೇಕ, ರುದ್ರಜಪ ನೆರವೇರಿಸಲಾಗುವುದು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ತಿಳಿಸಿದರು.
ದೇಗುಲಕ್ಕೆ ಸಹಸ್ರಾರು ಮಂದಿ ಭಕ್ತಾದಿಗಳು ನಗರದ ನಾನಾ ಮೂಲೆಗಳಿಂದ ಸಾಗರದಂತೆ ಹರಿದು ಬಂದಿದ್ದರು. ದೇಗುಲದ ಒಳಗೆ ಎಲ್ಲರಿಗೂ ಪ್ರವೇಶ ಇರದಿದ್ದ ಕಾರಣ ಹೊರಭಾಗದಲ್ಲಿ ಎರಡು ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿತ್ತು.
ಜನದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹಾಗೂ ದೇಗುಲದ ಆಡಳಿತ ಸಿಬ್ಬಂದಿ ಹರಸಾಹಸ ಪಟ್ಟರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ರವಿ ಸುಬ್ರಮಣ್ಯ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಸೇರಿ ಹಲವು ಮಂದಿ ಗಣ್ಯರೂ ಸಹ ಭಾಗಿಯಾಗಿದ್ದರು.