ಹಿಂದೂಗಳ ವರ್ಷದ ಮೊದಲ ಹಬ್ಬವೆಂದೇ ಕರೆಯುವ ಮಕರ ಸಂಕ್ರಾಂತಿಯನ್ನು ಗುರುವಾರ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಹಲವರು ಮಠ, ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.

ಹುಬ್ಬಳ್ಳಿ:

ಹಿಂದೂಗಳ ವರ್ಷದ ಮೊದಲ ಹಬ್ಬವೆಂದೇ ಕರೆಯುವ ಮಕರ ಸಂಕ್ರಾಂತಿಯನ್ನು ಗುರುವಾರ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಹಲವರು ಮಠ, ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರೆ, ಕೆಲವರು ಉದ್ಯಾನಗಳಿಗೆ ಕುಟುಂಬ ಸಮೇತರಾಗಿ ತೆರಳಿ ತರಹೇವಾರಿ ಭಕ್ಷ್ಯ ಭೋಜನ ಸವಿದು ಸಂಭ್ರಮಿಸಿದರು.

ಮಠ-ಮಂದಿರದಲ್ಲಿ ಜನಸಾಗರ:

ಇಲ್ಲಿನ ಪ್ರಮುಖ ಆರಾಧ್ಯ ದೈವಗಳಲ್ಲೊಂದಾದ ಶ್ರೀಸಿದ್ಧಾರೂಢರ ಮಠಕ್ಕೆ ಬೆಳಗ್ಗೆಯಿಂದ ಸಂಜೆ ವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಉಭಯ ಆರೂಢರ ಗದ್ದುಗೆಯ ದರ್ಶನ ಪಡೆದರು. ಮೂರುಸಾವಿರ ಮಠ, ಉಣಕಲ್ಲಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀಚಂದ್ರಮೌಳೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ಸಿದ್ದಪ್ಪಜ್ಜನ ಮಠ, ನಾಗಶೆಟ್ಟಿಕೊಪ್ಪದ ಮಾರುತಿ ಮಂದಿರ, ನವನಗರದ ಅಯ್ಯಪ್ಪಸ್ವಾಮಿ ಮಂದಿರ, ನಂದೀಶ್ವರ ನಗರದಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನ ಸೇರಿದಂತೆ ನಗರದಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲೂ ಜನಸಂದಣಿ ಹೆಚ್ಚಳವಾಗಿತ್ತು. ನೃಪತುಂಗ ಬೆಟ್ಟ, ಉಣಕಲ್ಲ ಕೆರೆ ಉದ್ಯಾನ, ತೋಳನಕೆರೆ, ನೀರಸಾಗರ ಜಲಾಶಯ, ಕೆಲಗೇರಿ ಕೆರೆಗೆ ಹೆಚ್ಚಿನ ಜನಸಂಖ್ಯೆಯಲ್ಲಿ ಜನರು ಆಗಮಿಸಿ ಹಬ್ಬದ ಸಂಭ್ರಮ ಅನುಭವಿಸಿದರು. ಗಣೇಶಪೇಟೆಯ ಗುಡ್‌ಶೆಡ್‌ ರಸ್ತೆ ಪ್ರದೇಶದಲ್ಲಿ ವಾಸವಾಗಿರುವ ತಮಿಳಿಗರು ಗುರುವಾರ ಪೊಂಗಲ್‌ ಅಂಗವಾಗಿ ವಿವಿಧ ಖಾದ್ಯ ತಯಾರಿಸಿ ಸಹಭೋಜನ ಸವಿದರು.

ಬಸ್ ಫುಲ್‌ ರಶ್:

ರಾಜ್ಯದ ಶಕ್ತಿ ಯೋಜನೆ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ನಗರದಿಂದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಚರಿಸುವ ಬಸ್‌ಗಳು ಮಹಿಳೆಯರಿಂದಲೇ ತುಂಬಿದ್ದವು. ದಿನನಿತ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಹೊಸೂರು, ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಲ್ಲಿ ಕಂಡು ಬಂದರು.

2ನೇ ದಿನವೇ ಹೆಚ್ಚಿನ ಜನಸಂದಣಿ:

ಈ ಬಾರಿ ಕೆಲವರು ಬುಧವಾರದಂದೇ ಸಂಕ್ರಾಂತಿ ಹಬ್ಬ ಆಚರಿಸಿದರೆ, ಗುರುವಾರ ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಕ್ರಾಂತಿ ಆಚರಿಸಿದರು. ಬುಧವಾರಕ್ಕಿಂತಲೂ ಗುರುವಾರ ಎರಡು ಪಟ್ಟ ಜನರು ಮಠ, ಮಂದಿರ, ಉದ್ಯಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುವುದು ಕಂಡುಬಂದಿತು.