ಅಂಕೋಲಾ ತಾಲೂಕಿನ ಉಳವರೆ ಗ್ರಾಮದ ಅಯ್ಯಪ್ಪ ಸ್ವಾಮಿಯ ಸನ್ನಿಧಾನದ ಎದುರಿನ ಬೆಟ್ಟದ ಪ್ರದೇಶದಲ್ಲಿ ಕಂಡು ಬಂದಿದೆ ಎನ್ನಲಾದ ಮಕರ ಜ್ಯೋತಿಯ ವಿಡಿಯೋ ತಾಲೂಕಿನಲ್ಲಿ ಭಾರಿ ವೈರಲ್ ಆಗಿದೆ.
ರಾಘು ಕಾಕರಮಠ
ಅಂಕೋಲಾ: ತಾಲೂಕಿನ ಉಳವರೆ ಗ್ರಾಮದ ಅಯ್ಯಪ್ಪ ಸ್ವಾಮಿಯ ಸನ್ನಿಧಾನದ ಎದುರಿನ ಬೆಟ್ಟದ ಪ್ರದೇಶದಲ್ಲಿ ಕಂಡು ಬಂದಿದೆ ಎನ್ನಲಾದ ಮಕರ ಜ್ಯೋತಿಯ ವಿಡಿಯೋ ತಾಲೂಕಿನಲ್ಲಿ ಭಾರಿ ವೈರಲ್ ಆಗಿದೆ.ಸಂಕ್ರಮಣದಂದು ಇಲ್ಲಿ ಕಾಣಿಸಿಕೊಳ್ಳುವ ಮಕರ ಜ್ಯೋತಿ ನೋಡಲು ನೂರಾರು ಜನರು ಸೇರುವುದರಿಂದ ಗ್ರಾಮದ ತುಂಬ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.
ಕಳೆದ 19 ವರ್ಷಗಳಿಂದ ಉಳುವರೆಯ ದೊಡ್ಡಕಲ್ಲು ಗುಡ್ಡದ ಮೇಲೆ ಮಕರ ಜ್ಯೋತಿಯ ದಿವ್ಯ ದರ್ಶನವಾಗುತ್ತಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿಯೇ ಇಲ್ಲಿ ಮಕರ ಜ್ಯೋತಿಯ ದರ್ಶನಕ್ಕೆ ಸುತ್ತಮುತ್ತಲಿನ ತಾಲೂಕುಗಳಿಂದ ಜನಸಾಗರ ಹರಿದು ಬರುತ್ತದೆ. ಇಲ್ಲಿಯ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಶಾಂತಮಲೆ ಎಂದು ನಾಮಕರಣ ಮಾಡಲಾಗಿದೆ.ಮಕರ ಸಂಕ್ರಮಣದಂದು ಶಬರಿಮಲೆಯ ಕಾಂತಮಲೆ ಗುಡ್ಡದಲ್ಲಿ ಮಕರ ಜ್ಯೋತಿ ಕಾಣಿಸುವ ವೇಳೆಯಲ್ಲಿಯೆ ಇಲ್ಲಿಯ ದೊಡ್ಡಕಲ್ಲು ಗುಡ್ಡದ ಮೇಲಿರುವ ಮಹಾಕಾಳಿ ದೇವಸ್ಥಾನದ ಮೇಲಿನ ಸುಮಾರು 50 ಮೀ ಅಂತರದಲ್ಲಿ ನಕ್ಷತ್ರದ ಹೊಳಪಿನಂತೆ ಮೂರು ಸಾರಿ ಪ್ರಕಾಶಮಾನವಾಗಿ ಜ್ಯೋತಿ ಮಿನುಗಿದ ಅನುಭವವಾಗುತ್ತದೆ ಎಂದು ಭಕ್ತರು ಹೇಳುತ್ತಾರೆ.
9 ವರ್ಷದ ಹಿಂದೊಮ್ಮೆ ಕಂಡಿರಲಿಲ್ಲ: ಉಳವರೆಯ ಗುಡ್ಡದ ಮೇಲೆ ಜ್ಯೋತಿ ಕಾಣುತ್ತದೆ ಎನ್ನುವ ಸುದ್ದಿ ತಿಳಿದಂತೆ 9 ವರ್ಷಗಳ ಹಿಂದೆ ಸಾವಿರಾರು ಭಕ್ತರು ಮಕರ ಸಂಕ್ರಮಣ ದಿನ ಉಳವರೆಯಲ್ಲಿ ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರು. ಆ ಸಂದರ್ಭದಲ್ಲಿ ಜ್ಯೋತಿ ಕಂಡು ಬಂದಿರಲಿಲ್ಲ. ಆದ್ದರಿಂದ ಮಾರನೇ ವರ್ಷದಿಂದ ಅಲ್ಲಿಗೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಯಿತು.ಮತ್ತೆ ದರ್ಶನ: ಈ ವರ್ಷ ಜ್ಯೋತಿ ನಕ್ಷತ್ರದ ಆಕಾರದಲ್ಲಿ ಬಹಳ ಹೊತ್ತು ಎಲ್ಲರಿಗೂ ಕಂಡು ಬಂದಿದೆ ಎನ್ನುತ್ತಾರೆ ಸ್ಥಳೀಯ ನಾಗರಿಕರು.
ಕನಸಿನಲ್ಲಿ ಸಾಕ್ಷಾತ್ಕಾರ: ಇಲ್ಲಿಯ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಅರ್ಚಕರು ಹಾಗೂ ಈ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಗುರುಸ್ವಾಮಿಗಳಾದ ಮಾಣಿ ನಾಗಪ್ಪ ಗೌಡ ಅವರು 2006ರಲ್ಲಿ ಒಬ್ಬರೇ ಮಕರ ಜ್ಯೋತಿ ವೀಕ್ಷಿಸಿದ್ದರಂತೆ. ಅದಕ್ಕೂ ಕಾರಣವೊಂದಿದೆ. ಗುರುಸ್ವಾಮಿಗಳಾದ ಮಾಣಿ ಅವರಿಗೆ 15 ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಚಿಕಿತ್ಸೆ ಕೂಡ ಫಲಕಾರಿಯಾಗಿರಲಿಲ್ಲ. ಹೀಗಿರುವಾಗ ಮಾಣಿ ಗೌಡ ಅವರಿಗೆ ಕನಸಿನಲ್ಲಿ ಅಯ್ಯಪ್ಪ ಸಾಕ್ಷಾತ್ಕಾರಗೊಂಡು ನೀನು ಅಯ್ಯಪ್ಪ ವ್ರತಧಾರಿಯಾಗಿ 41 ದಿನದ ಕಟ್ಟುನಿಟ್ಟಿನ ವ್ರತ ಪೂರೈಸಿದರೆ ಮಕರ ಜ್ಯೋತಿಯ ದರ್ಶನವನ್ನು ನಿನಗೆ ಇಲ್ಲಿಯ ದೊಡ್ಡಕಲ್ಲು ಗುಡ್ಡದ ಮೇಲೆ ಮಾಡಿಸುತ್ತೇನೆ, ಹಾಗೆಯೇ ನಿನ್ನ ಇಷ್ಟಾರ್ಥ ನೇರವೇರುತ್ತದೆ ಎಂದು ಅಯ್ಯಪ್ಪನ ಸಾಕ್ಷಾತ್ಕಾರದ ನುಡಿ ಕೇಳಿಸಿತಂತೆ.ಆನಂತರ ಅವರು ವ್ರತಧಾರಿಯಾಗಿ ಅಯ್ಯಪ್ಪ ವ್ರತ ಪೂರೈಸಿ, ಇಲ್ಲಿಯೆ ಮಕರ ಜ್ಯೋತಿ ದರ್ಶನ ಪಡೆದರಂತೆ. ಆನಂತರದ ವರ್ಷದಲ್ಲಿ ಅವರಿಗೆ ಹೆಣ್ಣು ಮಗುವಿನ ಸಂತಾನ ಭಾಗ್ಯ ಕಂಡು ಮಗುವಿಗೆ ನಾಗಶ್ರೀ ಎಂದು ಹೆಸರಿಟ್ಟಿದ್ದಾರೆ. ಆನಂತರದ ದಿನಗಳಲ್ಲಿ ಇಲ್ಲಿಯ ಶ್ರೀ ಅಯ್ಯಪ್ಪ ಮಹಿಮೆ ಇತರರಿಗೆ ತಿಳಿದು, ನೂರಾರು ಅಯ್ಯಪ್ಪ ಭಕ್ತರು ಮಾಲೆ ಧರಿಸಿ, ಶಬರಿಮಲೆಯಲ್ಲಿ ಮಂಡಲ ಪೂಜೆ ಮಾಡಿಕೊಂಡು ಮಕರ ಜ್ಯೋತಿಯ ದರ್ಶನ ಭಾಗ್ಯ ಕಾಣಲು ಇಲ್ಲಿಗೆ ಬರುತ್ತಾರೆ.
ವಿಡಿಯೋ ತುಣುಕು: ಮಕರ ಸಂಕ್ರಮಣದ ದಿನ ಉಳವರೆ ಗುಡ್ಡದಲ್ಲಿ ಜ್ಯೋತಿ ಕಂಡುಬಂದಿದೆ ಎಂದು ಹಲವು ಭಕ್ತರು ಹೇಳಿಕೊಂಡಿದ್ದಾರೆ. ಅಂತಹ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜ್ಯೋತಿ ನೋಡಿದ್ದೇವೆ: ನಾವೆಲ್ಲರೂ ಮೊನ್ನೆ ಜ್ಯೋತಿ ನೋಡಿದ್ದೇವೆ. ಗುಡ್ಡದ ತುದಿಯಲ್ಲಿ ನಕ್ಷತ್ರದ ಆಕಾರದಲ್ಲಿ ಅಯ್ಯಪ್ಪ ಸ್ವಾಮಿ ನಮಗೆ ದರ್ಶನ ನೀಡಿದ್ದಾನೆ. ನಾವು ಸಂಕ್ರಾಂತಿಯ ದಿನ ಈ ಗುಡ್ಡದ ಮೇಲೆ ತೆರಳಿ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ತುಪ್ಪಾಭಿಷೇಕ ಮಾಡಿ, ಮಹಾಕಾಳಿಯನ್ನು ಆರಾಧಿಸಿ, ಅಲ್ಲಿಯೇ ಊಟ ಮಾಡಿ ಬರುತ್ತೇವೆ. ಸಂಜೆ ಅಯ್ಯಪ್ಪ ಸನ್ನಿಧಾನದಲ್ಲಿ ಜ್ಯೋತಿ ಕಾಣುವ ಸಂದರ್ಭದಲ್ಲಿಯೇ ಇಲ್ಲಿಯೂ ಜ್ಯೋತಿ ಗೋಚರವಾಗಿದೆ ಎಂದು ಉಳವರೆಯ ಅಯ್ಯಪ್ಪ ವ್ರತಧಾರಿ ಮಾಣಿ ಗೌಡ ಗುರುಸ್ವಾಮಿ ಹೇಳಿದರು.