ಮಕರ ಸಂಕ್ರಮಣ: ಬಿಂಕದಕಟ್ಟಿ ಮೃಗಾಲಯದಲ್ಲಿ ಜನಸಾಗರ

| Published : Jan 16 2024, 01:50 AM IST

ಮಕರ ಸಂಕ್ರಮಣ: ಬಿಂಕದಕಟ್ಟಿ ಮೃಗಾಲಯದಲ್ಲಿ ಜನಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಗದಗ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಸೋಮವಾರ ಜನ ಸಾಗರವೇ ಹರಿದು ಬಂತು. ಅಲ್ಲಿ ಸಾಮೂಹಿಕ ಭೋಜನ ಮತ್ತು ಪ್ರಾಣಿ ವೀಕ್ಷಣೆಯೊಂದಿಗೆ ಜನರು ಸಂಭ್ರಮದಿಂದ ಹಬ್ಬ ಆಚರಿಸಿದರು.

ಗದಗ: ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಗದಗ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಸೋಮವಾರ ಜನ ಸಾಗರವೇ ಹರಿದು ಬಂತು. ಅಲ್ಲಿ ಸಾಮೂಹಿಕ ಭೋಜನ ಮತ್ತು ಪ್ರಾಣಿ ವೀಕ್ಷಣೆಯೊಂದಿಗೆ ಜನರು ಸಂಭ್ರಮದಿಂದ ಹಬ್ಬ ಆಚರಿಸಿದರು.ಎತ್ತಿನ ಗಾಡಿ, ಕಾರು, ಟ್ರ್ಯಾಕ್ಟರ್, ಟಂ ಟಂ, ಬೈಕ್‌ಗಳಲ್ಲಿ ಕುಟುಂಬ ಸಮೇತರಾಗಿ ಗದಗ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಪ್ರವಾಸಿಗರು ಆಗಮಿಸುತ್ತಿರುವುದು ಸಾಮಾನ್ಯವಾಗಿತ್ತು. ಬೆಳಗ್ಗೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರಾಣಿ ಸಂಗ್ರಹಾಲಯಕ್ಕೆ ಆಗಮಿಸಿದ ಹಿನ್ನೆಲೆ ಝೂ ಮುಂಭಾಗದಲ್ಲಿ ಭಾರೀ ಗದ್ದಲ ಉಂಟಾಯಿತು. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪರದಾಡಿದರು.ಸರದಿಯಲ್ಲಿ ನಿಂತು ಟಿಕೆಟ್ ಪಡೆದ ಜನತೆ:ಮಕರ ಸಂಕ್ರಮಣ ಹಿನ್ನೆಲೆ ಗದಗ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿದ ಹಿನ್ನೆಲೆಯಲ್ಲಿ ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಬಿಂಕದಕಟ್ಟಿ ಮಕ್ಕಳ ಉದ್ಯಾನ ಮತ್ತು ಮೃಗಾಲಯದ ಮುಂಭಾಗ, ಟಿಕೆಟ್ ಕೌಂಟರ್ ಬಳಿ ಬ್ಯಾರಿಕೇಡ್ ಅಳವಡಿಸಿದ್ದರು. ಸಾರ್ವಜನಿಕರು ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಮೃಗಾಲಯದ ಒಳಗಡೆ ನಡೆದರು.

ಯುವಕರು, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ತಂಡೋಪತಂಡವಾಗಿ ಹಚ್ಚ ಹಸಿರಿನಿಂದ ಕೂಡಿದ ಮೃಗಾಲಯಕ್ಕೆ ಆಗಮಿಸಿ, ಇಲ್ಲಿನ ಪ್ರಾಣಿ, ಪಕ್ಷಿಗಳನ್ನು ಒಂದೊಂದಾಗಿ ನೋಡುತ್ತ ಸಾಗಿ ಅವುಗಳ ಚಲನ-ವಲನ, ಆಟೋಟಗಳನ್ನು ನೋಡಿ ಸಂತಸಪಟ್ಟರು. ಪಾಲಕರೊಂದಿಗೆ ಆಗಮಿಸಿದ ಮಕ್ಕಳು ಇಲ್ಲಿಯ ಮಕ್ಕಳ ಉದ್ಯಾನದಲ್ಲಿರುವ ಜೋಕಾಲಿ, ಜಾರು ಬಂಡಿಗಳಲ್ಲಿ ಆಟವಾಡಿ ಸಂಭ್ರಮಿಸಿದರು. ಯುವಕರು, ಮಹಿಳೆಯರು, ಕುಟುಂಬಸ್ಥರು ವಿವಿಧ ಬಣ್ಣದ ಗಿಡಗಳ ಮುಂದೆ, ಪ್ರಾಣಿ, ಪಕ್ಷಿಗಳು ಕಾಣುವಂತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಚಿತ್ರಣ ಸಾಮಾನ್ಯವಾಗಿ ಕಂಡು ಬಂದಿತು.ಸಾಮೂಹಿಕ ಭೋಜನ: ವಿವಿಧ ಖಾದ್ಯಗಳನ್ನ ಮನೆಯಲ್ಲಿಯೇ ಸಿದ್ಧಪಡಿಸಿಕೊಂಡ ಬಂದ ಯುವಕರು, ಕಾಲೇಜು ವಿದ್ಯಾರ್ಥಿನಿಯರು, ಕುಟುಂಬಸ್ಥರು ಮೃಗಾಲಯದ ಸೌಂದರ್ಯವನ್ನು ಸವಿದ ಆನಂತರ ಮಧ್ಯಾಹ್ನದ ವೇಳೆ ಮರದಡಿ ನೆರಳಿನಲ್ಲಿ ಒಂದೆಡೆ ಕುಳಿತು ಊಟ ಮಾಡಿದರು. ಎಳ್ಳು-ಬೆಲ್ಲ ವಿನಿಮಯ ಮಾಡಿಕೊಂಡರು. ಸಂಜೆ ಸೂರ್ಯಾಸ್ತ ಸಮಯದಲ್ಲಿ ಮಹಿಳೆಯರು, ಮಕ್ಕಳು, ಕುಟುಂಬಸ್ಥರು ಹಬ್ಬದ ಸಂಭ್ರಮವನ್ನು ನೆನೆಯುತ್ತಾ ತಮ್ಮ ತಮ್ಮ ಮನೆಗಳತ್ತ ಮರಳಿದರು.

ಸ್ಥಳೀಯರು ಸೇರಿದಂತೆ ಗದಗ, ಮುಂಡರಗಿ, ಲಕ್ಷ್ಮೇಶ್ವರ, ನರಗುಂದ, ಶಿರಹಟ್ಟಿ ಮುಂತಾದ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸಿದ್ದರು.

ಬಿಂದಕಟ್ಟಿ ಪ್ರಾಣಿ ಸಂಗ್ರಹಾಲಯ ಸೇರಿದಂತೆ ಗದಗ ನಗರದ ಸಾಲುಮರದ ತಿಮ್ಮಕ್ಕನ ಉದ್ಯಾನ, ಭೀಷ್ಮಕೆರೆ ಆವರಣದಲ್ಲಿನ ಎತ್ತರ ಬಸವಣ್ಣ, ಶ್ರೀ ವೀರನಾರಾಯಣ ದೇವಸ್ಥಾನ, ಪಂ. ಪುಟ್ಟರಾಜ ಗವಾಯಿಗಳ ದೇವಸ್ಥಾನ ಸೇರಿ ನಗರದ ಅನೇಕ ಪ್ರೇಕ್ಷಣಿಯ ಸ್ಥಳಗಳಿಗೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.