ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ಉತ್ಸವ

| Published : Jan 16 2025, 12:48 AM IST

ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಗೋದೂಳಿ ಸಮಯದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ವಿಶೇಷ ಪುಷ್ಪಗಳಿಂದ ತಯಾರಿಸಿದ ಮಾಲೆ ಹಾಗೂ ಹಣ್ಣುಗಳನ್ನು ನಿವೇದನ ಮಾಡಿ ಮಂಗಳಾರತಿ ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳವಾದ್ಯದೊಂದಿಗೆ ಆರಂಭವಾದ ಮಕರ ಸಂಕ್ರಾಂತಿ ಉತ್ಸವ ಚತುರ್ವೀದಿಗಳಲ್ಲಿ ವೈಭವದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಉತ್ಸವ ಸಡಗರ ಸಂಭ್ರಮದಿಂದ ನೆರವೇರಿತು.

ಯತಿರಾಜದಾಸರ್ ಗುರು ಪೀಠದಿಂದ ಸ್ಥಾನಾಚಾರ್ಯರ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಸಹೋದರರು ಅನೂಚಾನ ಸಂಪ್ರದಾಯ ಹಾಗೂ ಪರಂಪರೆಯಂತೆ ಮಕರ ಸಂಕ್ರಾಂತಿ ಮಹೋತ್ಸವವನ್ನು ಶ್ರದ್ಧಾಭಕ್ತಿಂದ ನೆರವೇರಿಸಿದರು.

ಗೋದೂಳಿ ಸಮಯದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ವಿಶೇಷ ಪುಷ್ಪಗಳಿಂದ ತಯಾರಿಸಿದ ಮಾಲೆ ಹಾಗೂ ಹಣ್ಣುಗಳನ್ನು ನಿವೇದನ ಮಾಡಿ ಮಂಗಳಾರತಿ ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳವಾದ್ಯದೊಂದಿಗೆ ಆರಂಭವಾದ ಮಕರ ಸಂಕ್ರಾಂತಿ ಉತ್ಸವ ಚತುರ್ವೀದಿಗಳಲ್ಲಿ ವೈಭವದಿಂದ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು ಸ್ವಾಮಿಯ ದರ್ಶನಪಡೆದು ಪುನೀತರಾದರು. ನಂತರ ಕೊಠಾರ ಮಂಟಪದಲ್ಲಿ ವಿಶೇಷಪೂಜೆ ನಡೆದ ನಂತರ ಜೋಯಿಸರು ಈ ವರ್ಷದ ಸಂಕ್ರಾಂತಿ ಫಲ ಪಠಣ ನೆರವೇರಿಸಿದರು. ರಾತ್ರಿ ಮೂಲಮೂರ್ತಿ ಚೆಲ್ವತಿ ರುನಾರಾಯಣಸ್ವಾಮಿಗೆ ಅರೆಯರ್ ಪಾಡಲ್‌ನೊಂದಿಗೆ ವಸಂತರಾಗ ಸೇವೆ ನೆರವೇರಿತು.

ಸಂಕ್ರಾಂತಿ ಉತ್ಸವಕ್ಕೂ ಸಂಜೆ ಕ್ಷೇತ್ರದೇವತೆ ಬದರೀನಾರಾಯಣಸ್ವಾಮಿ ಸನ್ನಿಧಿಯ ಫಲಪುಷ್ಪದ ತಟ್ಟೆಗಳನ್ನು ಸಾಂಪ್ರದಾಯಿಕವಾಗಿ ಜೋಡಿಸಿ ನಂತರ ಉತ್ಸವದ ವೇಳೆ ಚೆಲುವನಾರಾಯಣನಿಗೆ ಸಮರ್ಪಿಸಲಾಯಿತು.

ನಂತರ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಚೆಲುವನಾರಾಯಣಸ್ವಾಮಿ ಇಷ್ಟಾರ್ಥ ಕರುಣಿಸಲಿ ಎಂದು ಹಾರೈಸಿ ಸ್ವಾಮಿಗೆ ನಿವೇದನವಾದ ಹಣ್ಣು ಹಾಗೂ ಎಲ್ಲಬೆಲ್ಲದ ತಾಂಬೂಲ ನೀಡಲಾಯಿತು. ಯತಿರಾಜದಾಸರ್ ಗುರುಪೀಠದ ಪ್ರೊ. ಸ್ಥಾನೀಕಂ ಶೆಲ್ವಪ್ಪಿಳ್ಳೆ ಅಯ್ಯಂಗಾರ್, ಮುಖ್ಯಶಿಕ್ಷಕ ಸ್ಥಾನೀಕಂ ಸಂತಾನರಾಮನ್, ಗುರುಪೀಠದ ಶಿಷ್ಯವರ್ಗದ ಹೈಕೋರ್ಟ್ ವಕೀಲ ಜಯರಾಂ, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ತುಂಬಕೆರೆ: ಶಾಂತೇಶ್ವರ ನೂತನ ದೇವಾಲಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀಶಾಂತೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿಯಿಂದ ಶ್ರೀಶಾಂತೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ, ಶಿಲಾ ಪ್ರತಿಷ್ಠಾಪನೆ ಕಾರ್ಯಕ್ರಮ ಜ.17, 18 ಹಾಗೂ 19ರಂದು ಮೂರು ದಿನ ತಾಲೂಕಿನ ತುಂಬಕೆರೆ ಗ್ರಾಮದಲ್ಲಿ ನಡೆಯಲಿದೆ.

ಜ.17ರಂದು ಗೋಧೂಳಿ ಲಗ್ನದಲ್ಲಿ ಗಂಗಾಪೂಜೆ ಅನುಜ್ಞೆ, ಸ್ವಸ್ತಿವಾಚನ, ಅನಿರ್ವಾಣದೀಪ ಪೂಜೆ, ಗಣಪತಿ ಪೂಜೆ, ಮಹಾಸಂಕಲ್ಪ ಭಾಗವತ್‌ ಪುಣ್ಯಾಹ ನಡೆಯಲಿದೆ. ಜ.18ರಂದು ಸುಪ್ರಭಾತ ವೇದ ಪಾರಾಯಣ, ಧ್ವಾರ ತೋರಣಪೂಜೆ, ಯಾಗಶಾಲೆ ಪ್ರವೇಶ, ಅಂಕುರಾರ್ಪಣ 108 ಕಳಶಾರಾಧನೆ ನಡೆಯಲಿದೆ.

ಜ.19 ರಂದಯ ಬ್ರಾಹ್ಮೀ ಮಹೂರ್ತದಲ್ಲಿ ಪಿಂಡಿಕಾ ಪೂಜಾ, ದೇವರ ವಿಗ್ರಹಗಳು ಅಷ್ಟಾ ಬಂಧನ ಪ್ರತಿಷ್ಟೆ, ನಯನೋನ್ಮಿಲನ, ಸಂಗೀತ ಸೇವೆ, ಮಹಾನೈವೃದ್ಯ, ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ಎಲ್ಲಾ ದೇವತಾ ಕಾರ್ಯಕ್ರಮಗಳು ಬೆಳಗ್ಗಿನಿಂದಲೇ ನಡೆಯುತ್ತವೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ಹಾಗೂ ವೈದ್ಯನಾಥಪುರ ಕದಂಬ ಜಂಗಮ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅವರು ಸಾನಿಧ್ಯ ವಹಿಸುವರು.

ಶ್ರೀಶಾಂತೇಶ್ವರ ಸ್ವಾಮಿಯ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮಗಳನ್ನು ನಡೆಸುಯವಂತೆ ದೈವ, ಗುರು, ಹಿರಿಯರ ಹಾಗೂ ಗ್ರಾಮಸ್ಥರ ಪ್ರೇರಣೆಯಂತೆ ದೇವತಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಭಕ್ತಾಧಿಗಳು ಭಾಗವಹಿಸಬೇಕು ಎಂದು ಗ್ರಾಮದ ಮುಖಂಡರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.