ಸಾರಾಂಶ
-ಕನ್ನಡಪ್ರಭ ವಾರ್ತೆ ಹೊನ್ನಾಳಿಯುವಕರು ಶಿಸ್ತು, ಶ್ರದ್ಧೆಯಿಂದ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಿದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1ಮತ್ತು 2, ಯುವ ರೆಡ್‌ಕ್ರಾಸ್ ಘಟಕ ರೋವರ್ಸ ಮತ್ತು ರೇಂಜರ್ಸ ಚಟವಟಿಕೆಗಳು ಹಾಗೂ ಹೊನ್ನಕಿರಣ ವಾರ್ಷಿಕ ಸಂಚಿಕೆ-13ರ ಬಿಡುಗಡೆ ವಿವಿಧ ವೇದಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಹೊನ್ನಾಳಿ ಸರ್ಕಾರಿ ಕಾಲೇಜಿನಲ್ಲಿ 800 ಯುವತಿಯವರು, 300 ಯುವಕರು ವ್ಯಾಸಂಗ ಮಾಡುತ್ತಿದ್ದು, ಹೆಣ್ಣು ಮಕ್ಕಳಲ್ಲಿ ಕಾಣುವ ಶಿಸ್ತು, ಕಲಿಕೆಯಲ್ಲಿನ ಆಸಕ್ತಿ, ಏಕಾಗ್ರತೆ ಗಂಡು ಮಕ್ಕಳಲ್ಲಿ ಕಾಣಿಸುತ್ತಿಲ್ಲ. ಇದರಿಂದ ಬಹುಪಾಲು ಗಂಡು ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡುವಲ್ಲಿ ಹೆಣ್ಣು ಮಕ್ಕಳಿಗಿಂತ ಹಿಂದೆ ಬೀಳುವ ಸಂದರ್ಭಗಳೇ ಹೆಚ್ಚಾಗುತ್ತಿದೆ ಎಂದರು.
ಹಳ್ಳಿಗಳಲ್ಲಿ ಇಂದು ಯುವಕರಿಗೆ ಮದುವೆಯಾಗುವುದು ಕೂಡ ಕಷ್ಟಕರವಾಗುತ್ತಿದೆ, ಕಾರಣ ಸರಿಯಾದ ಶಿಕ್ಷಣ ಹಾಗೂ ಉದ್ಯೋಗ ಇರುವುದಿಲ್ಲ. ಇನ್ನೊಂದೆಡೆ ಸಾಕಷ್ಟು ಜಮೀನು, ಆಸ್ತಿ ಪಾಸ್ತಿ ಇಲ್ಲವೆಂದರೆ ಹೆಣ್ಣು ಮಕ್ಕಳ ಪೋಷಕರು ಇಂತಹ ಗಂಡು ಮಕ್ಕಳಿಗೆ ತಮ್ಮ ಮಗಳನ್ನು ಕೊಡಲು ಹಿಂದೇಟು ಹಾಕುತ್ತಾರೆ ಆದ್ದರಿಂದ ಇಂದು ಗಂಡು ಮಕ್ಕಳ ಮದುವೆಯಾಗುವುದು ಕಷ್ಟಕರವಾಗುತ್ತಿದೆ ಎಂದು ಹಾಸ್ಯಭರಿತ ಹೇಳಿಕೆ ನೀಡದರು.ಶಾಲಾ-ಕಾಲೇಜುಗಳು ಜ್ಞಾನ ದೇಗುಲಗಳಿದ್ದಂತೆ ವಿದ್ಯಾರ್ಥಿಗಳು ಆತ್ಯಂತ ಗೌರವ, ಶ್ರದ್ದೆಯಿಂದ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಆಗಮಿಸಿ ವಿದ್ಯಾಭ್ಯಾಸ ಮಾಡುವ ಮೂಲಕ ಉತ್ತಮ ಸಾಧನೆ ಮಾಡಿ, ಸಮಾಜದ ಆಸ್ತಿಯಾಗಿ ಯುವಕರು ಹೊರಹೊಮ್ಮಬೇಕು ಅಗ ಅವರ ಬದುಕು ಕೂಡ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊನ್ನಕಿರಣ -13 ವಾರ್ಷಿಕ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಆಭಿಷೇಕ್ ಮಾತನಾಡಿ, ಕಲಿಕಾ ಹಂತಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಕೂಡ ನಿರ್ದೀಷ್ಟ ಗುರಿಯನ್ನಿಟ್ಟುಕೊಂಡು ಸಾಧನೆ ಮಾಡಿದಾಗ ಯಶಸ್ಸು ತಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದ ಕಡೆಗೆ ಗಮನಹರಿಸಿ ಶ್ರಮಪಟ್ಟು ವ್ಯಾಸಂಗ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ ವಿದ್ಯಾರ್ಥಿಗಳ ಕುರಿತು ಮಾತನಾಡಿ, ಪ್ರಸ್ತುತ ಹೊನ್ನಾಳಿ ಸರ್ಕಾರಿ ಕಾಲೇಜಿನಲ್ಲಿ ಉತ್ತಮ ಬೋಧಕ ವರ್ಗ, ವಾತಾವರಣಗಳಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಡಾ.ಧನಂಜಯ ಬಿ.ಜಿ.ಡಿ.ಹನುಮಂತಪ್ಪ, ಡಾ.ಆಮೂಲ್ಯ ಆರ್. ಎಚ್.ಹಾಗೂ ಡಾ.ಸಮರ್ಥರಾಮ್ ಬಿ.ಎನ್. ಅವರ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು, ಇದೇ ವೇಳೆ ಕ್ರೀಡಾ ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು,
ಅರ್ಥಶಾಸ್ತ್ರ ಮತ್ತು ಗಣಿತ ಶಾಸ್ತ್ರಗಳಲ್ಲಿ ಆತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.ಈ ವೇಳೆ ಹಿರಿಯ ಉಪನ್ಯಾಸಕ ಡಿ.ಸಿ.ಪಾಟೀಲ, ಉಪನ್ಯಾಸಕ ಬೆಳ್ಳುಳ್ಳಿ ಕೊಟ್ರೇಶ್, ಗ್ರಂಥಪಾಲಕ ನಾಗರಾಜ್ ಡಾ. ಹರೀಶ್ ದೈಹಿಕ ಶಿಕ್ಷಣಾಧಿಕಾರಿ ಹರಿಶ್ ಹಾಗೂ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ಇದ್ದರು.