ಒಂದೇ ದಿನ ದಾಬಸ್‌ಪೇಟೆಯಲ್ಲಿ ಎರಡು ಪ್ರತ್ಯೇಕ ಸರಗಳ್ಳತನ

| Published : Jul 14 2024, 01:30 AM IST

ಒಂದೇ ದಿನ ದಾಬಸ್‌ಪೇಟೆಯಲ್ಲಿ ಎರಡು ಪ್ರತ್ಯೇಕ ಸರಗಳ್ಳತನ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆಯ ಸೋಂಪುರ ಹೋಬಳಿಯ ಶಾರದಾ ಕ್ರಾಸ್ ಕೈಗಾರಿಕಾ ಪ್ರದೇಶದ ಸಮೀಪ ಸರಗಳ್ಳತನ ನಡೆದಿದೆ. ದಾಬಸ್‌ಪೇಟೆ ಪಟ್ಟಣದ ಕಮಲಾ ಅವರು ಶನಿವಾರ ಮಧ್ಯಾಹ್ನ 1.15 ಗಂಟೆಯಲ್ಲಿ ತಾಯಿ ಜತೆ ಗಣೇಶನ ದೇವಾಲಯಕ್ಕೆ ಹೋಗಿ ವಾಪಸ್ಸು ಬರುತ್ತಿದ್ದಾಗ, ಬೈಕಿನಲ್ಲಿ ಬಂದ ಕಳ್ಳರು ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾರೆ.

ಸೋಂಪುರ ಹೋಬಳಿಯ ಶಾರದಾ ಕ್ರಾಸ್, ಮದೇನಹಳ್ಳಿ ಗ್ರಾಮದಲ್ಲಿ ಘಟನೆ

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಸೋಂಪುರ ಹೋಬಳಿಯಲ್ಲಿ ಎರಡು ಪ್ರತ್ಯೇಕ ಸರಗಳ್ಳತನಗಳು ನಡೆದಿರುವುದು ಹೋಬಳಿಯ ನಾಗರಿಕರಲ್ಲಿ ಆತಂಕವನ್ನುಂಟು ಮಾಡಿದೆ.

ಸೋಂಪುರ ಹೋಬಳಿಯ ಶಾರದಾ ಕ್ರಾಸ್ ಕೈಗಾರಿಕಾ ಪ್ರದೇಶದ ಸಮೀಪ ಸರಗಳ್ಳತನ ನಡೆದಿದೆ. ದಾಬಸ್‌ಪೇಟೆ ಪಟ್ಟಣದ ಕಮಲಾ ಅವರು ಶನಿವಾರ ಮಧ್ಯಾಹ್ನ 1.15 ಗಂಟೆಯಲ್ಲಿ ತಾಯಿ ಜತೆ ಗಣೇಶನ ದೇವಾಲಯಕ್ಕೆ ಹೋಗಿ ವಾಪಸ್ಸು ಬರುತ್ತಿದ್ದಾಗ, ಬೈಕಿನಲ್ಲಿ ಬಂದ ಕಳ್ಳರು ಶಿವಗಂಗೆಗೆ ಹೋಗುವ ದಾರಿ ಕೇಳುವ ನೆಪದಲ್ಲಿ ಆಕೆಯ ಕುತ್ತಿಗೆಗೆ ಕೈ ಹಾಕಿ 45 ಗ್ರಾಂ ತೂಕದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾರೆ.

ಮಾದೇನಹಳ್ಳಿ ಗ್ರಾಮದ ಪವಿತ್ರಾ ಶನಿವಾರ ಮಧ್ಯಾಹ್ನ 2.15ರಲ್ಲಿ ಮನೆ ಬಾಗಿಲಿನಲ್ಲಿ ನಿಂತಿದ್ದಾಗ, ಕಾಂಪೌಂಡ್ ದಾಟಿ ಬಂದ ಅಪರಿಚಿತ ವ್ಯಕ್ತಿ, ಈ ಊರಿನಲ್ಲಿ ಡೇರಿ ಎಲ್ಲಿದೆ ಎಂದು ಕೇಳಿದ್ದು, ಮನೆಯಲ್ಲಿದ್ದ ಹುಡುಗನೊಬ್ಬ ಡೇರಿ ತೋರಿಸಲು ಜತೆಗೆ ಹೋಗುವ ವೇಳೆ ಪವಿತ್ರಾ ಕೊರಳಿಗೆ ಕೈ ಹಾಕಿ 60 ಗ್ರಾಂ ತೂಕದ ಚಿನ್ನದ ಸರ ಹಾಗೂ ಕರಡಿಗೆಯನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಪವಿತ್ರಾ ಕೊರಳಿಗೆ ಕೈ ಹಾಕಿದಾಗ ತಕ್ಷಣ ಮಾಂಗಲ್ಯ ಸರ ಕಿತ್ತುಕೊಂಡು ಬರದಿದ್ದಾಗ ಅವರನ್ನು ಎಳೆದಾಡಿದ್ದು ಅವರ ಕುತ್ತಿಗೆಗೆ, ಮಂಡಿಗೆ ಗಾಯಗಳಾಗಿವೆ. ಅವರ ಮಗಳು ಬಿಡಿಸಲು ಹೋದಾಗ ಮಗಳನ್ನು ನೂಕಿ ಪರಾರಿಯಾಗಿದ್ದಾನೆ. ಗಾಯಗೊಂಡ ಪವಿತ್ರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಬೈಕ್ ಹತ್ತಿಸಲು ಯತ್ನ: ಬೈಕ್ ನಲ್ಲಿ ಪರಾರಿಯಾದ ಕಳ್ಳರ ಬೈಕ್‌ ಅನ್ನು ಅಡ್ಡ ಹಾಕಲು ಹೋದ ಗ್ರಾಮಸ್ಥರ ಮೇಲೆ ಬೈಕ್ ಹತ್ತಿಸಲು ಹೋಗಿ ಬೆದರಿಸಿ ಪರಾರಿಯಾಗಿದ್ದಾರೆ.

ವಿಶೇಷ ತಂಡ ರಚನೆ:

ಘಟನಾ ಸ್ಥಳಕ್ಕೆ ಎಎಸ್ಪಿ ನಾಗರಾಜು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಸರಗಳ್ಳರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇವರ ಪತ್ತೆ ಹಚ್ಚಲು ಈಗಾಗಲೇ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು ಶೀಘ್ರವೇ ಪತ್ತೆ ಹಚ್ಚುತ್ತೇವೆ ಎಂದರು. ತುಮಕೂರು, ಸೋಲೂರು, ಅತ್ತಿಬೆಲೆಯಲ್ಲಿ ಕಳ್ಳತನ ಮಾಡಿರುವ ಕಳ್ಳರ ಗುಂಪು ಇಲ್ಲಿಯೂ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಡಿವೈಎಸ್‌ಪಿ ಜಗದೀಶ್, ಎಸ್‌ಐ ರಾಜು, ಪಿಎಸ್‌ಐ ವಿಜಯಕುಮಾರಿ ಭೇಟಿ ನೀಡಿ ಪರಿಶೀಲಿಸಿದರು.