ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಮಹಿಳೆಯರಿಗೆ ಶಕ್ತಿ ತುಂಬಿದ್ದು, ಮಹಿಳೆಯರು ಹೆಚ್ಚೆಚ್ಚು ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಸರ್ಕಾರಕ್ಕೆ ಶಕ್ತಿ ತುಂಬಲು ಮುಂದಾಗಬೇಕು ಎಂದು ಶ್ರೀದೇವಿಕಾ ಸುಬ್ಬರಾವ ಫೌಂಡೇಷನ್ ಮುಖ್ಯಸ್ಥೆ ಹಾಗೂ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ಪುತ್ರಿ ಪಲ್ಲವಿ ನಾಡಗೌಡ ಹೇಳಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ತಾಲೂಕಿನ ವಿವಿಧ ಮಹಿಳಾ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿ ಅವರು ಮಾತನಾಡಿದರು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂದು ಜಾತಿ, ಧರ್ಮಗಳ ಮಧ್ಯೆ ಕಲಹ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡಲಾಗುತ್ತಿದೆ. ರಾಜ್ಯದಲ್ಲಿ ಲಕ್ಷಾಂತರ ಜನರ ಬಡ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳದೇ ಅಸಹಾಯಕರಾಗಿದ್ದಾರೆ. ಜಾಗತಿಕ ತಂತ್ರಜ್ಞಾನದಲ್ಲೂ ಶೋಷಣೆಗೊಳಗಾಗುತ್ತಿರುವ ಘಟನೆಗಳನ್ನು ಕೇಳುತ್ತಿದ್ದೇವೆ ಎಂದರು.ಬಿಜೆಪಿ ಸರ್ಕಾರ ಮಹಿಳೆಯರ ರಕ್ಷಣೆಗಾಗಲಿ ಅಥವಾ ಆತ್ಮಸ್ಥೈರ್ಯ ತುಂಬುವ ಯಾವ ಸಾಮಾಜಿಕ ಕಾರ್ಯವನ್ನೂ ಮಾಡಲಿಲ್ಲ. ಆದರೆ, ನಮ್ಮ ಸರ್ಕಾರ ಯಾರ ಹಂಗೂ ಇಲ್ಲದೇ ಮಹಿಳೆಯರು ಸ್ವತಂತ್ರವಾಗಿ ಕುಟುಂಬವನ್ನು ರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರ ಮತ್ತು ಉಚಿತ ಬಸ್ ಪ್ರಯಾಣ ಯೋಜನೆ ನೀಡಿದ್ದನ್ನು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಸಾವಿತ್ರಿ ಚಿತ್ರನಾಳ, ನಜೀರಾ ಅತ್ತಾರ, ಕಾರ್ಯದರ್ಶಿಯಾಗಿ ಸಂಗಮ್ಮ ಗುರಿಕಾರ, ಚಂದ್ರಮ್ಮ ರುದ್ರಗಂಟಿ, ಗೀತಾ ಅಸ್ಕಿ, ರೇಣುಕಾ ಪೂಜಾರ, ಉಪಾಧ್ಯಕ್ಷೆಯಾಗಿ ಅಮೀದಾ ನವಲಿ, ಬಸಮ್ಮ ಮಳಗಿ, ಶಾಂತಮ್ಮ ಅಸ್ಕಿ, ಲಲೀತಮ್ಮ ಮೇದಿಕಿನಾಳ, ಮಡಿವಾಳಮ್ಮ ಗುರಿಕಾರ ಆಯ್ಕೆಯಾದ ಪದಾಧಿಕಾರಿಗಳಿಗೆ ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.ಈ ವೇಳೆ ತಾಲೂಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ಶಳ್ಳಗಿ, ಸರಸ್ವತಿ ಪಿರಾಪೂರ, ಅಕ್ಷತಾ ಚಲವಾದಿ, ಲಲಿತಾ ಇಳಕಲ್ಲ, ನೀಲಮ್ಮ ಚಲವಾದಿ, ಕಮಲಾ ಭಜಂತ್ರಿ, ಅಚಿಜನಾ ಬಿರಾದಾರ, ದೇವಮ್ಮ ರಕ್ಕಸಗಿ, ಸುಜಾತಾ ಶಿಂಧೆ, ಮಮತಾಜ ಮುಲ್ಲಾ, ಶಿವಲೀಲಾ ಬಸರಕೋಡ ಸೇರಿದಂತೆ ಹಲವರು ಇದ್ದರು.
-----------------------------------ಬಾಕ್ಸ್
ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲಕಳೆದ ೪೦ ವರ್ಷಗಳ ರಾಜಕೀಯ ಇತಿಹಾಸದಲ್ಲಿ ತಂದೆಯವರಾದ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಯಾವತ್ತಿಗೂ ಜಾತಿ ಬೇಧವಾಗಲಿ ಅಥವಾ ಮೇಲು ಕೀಳು ಎನ್ನುವ ಬೇಧವಾಗಲಿ ಮಾಡಿಲ್ಲ. ಎಲ್ಲ ಕಾರ್ಯಕರ್ತರನ್ನು ಅತ್ಯಂತ ಪ್ರೀತಿಯಿಂದ ಗೌರವಿಸುತ್ತಾರೆ. ನಾಡಗೌಡರ ಅಭಿವೃದ್ಧಿ ಹಾಗೂ ಅವರ ಸಂಭಾವಿತ ಸ್ವಭಾವವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ವಿರೋಧ ಪಕ್ಷದವರು ಸುಳ್ಳು ಹೇಳಿಕೆ ನೀಡಿ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆ ಟೀಕೆಗಳಿಗೆ ಕಿವಿಗೊಡದೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಮುನ್ನಡೆಯಬೇಕು ಜೊತೆಗೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾಡಗೌಡರು ಸದಾ ಸಿದ್ದರಾಗಿದ್ದಾರೆ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ ಎಂದು ಪಲ್ಲವಿ ನಾಡಗೌಡ ಧೈರ್ಯ ಹೇಳಿದರು.
-------------