ಹಾವೇರಿ: ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಸಭೆ ಆಡಳಿತಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಪ್ರಸಕ್ತ 2026-27ನೇ ಸಾಲಿನ ₹13.85 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.
ಆದಾಯದ ಮೂಲ ಹೆಚ್ಚಿಸಿಕೊಂಡು ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನದೊಂದಿಗೆ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ನಗರಸಭೆ ಸಿಬ್ಬಂದಿಗೆ ಸೂಚಿಸಿದರು.ಆದಾಯದ ಮೂಲ: ಹಾವೇರಿ ನಗರಸಭೆ ಸ್ವಂತ ಮೂಲಗಳಾದ ಮನೆ ಕಂದಾಯ ₹6.7 ಕೋಟಿ, ನೀರಿನ ಕರ ₹1 ಕೋಟಿ, ಮಳಿಗೆ ಬಾಡಿಗೆ ₹1.65 ಕೋಟಿ, ಸಂತೆ ಶುಲ್ಕ ₹12.50 ಲಕ್ಷ, ವೇತನ ಅನುದಾನ (ಎಸ್‌ಎಫ್‌ಸಿ) ₹5.65 ಕೋಟಿ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ₹3.65 ಕೋಟಿ, ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ ₹2.55 ಕೋಟಿ, ಎಸ್‌ಎಫ್‌ಸಿ ರಾಜ್ಯ ಹಣಕಾಸು ಆಯೋಗದ ಅನುದಾನ ₹2.75 ಕೋಟಿ, ಸ್ವಚ್ಛ ಭಾರತ ಯೋಜನೆಗೆ ₹1 ಕೋಟಿ, ಡೇ-ನಲ್ಮ್ ಯೋಜನೆಗೆ ₹5 ಲಕ್ಷ, ಅಸಾಮಾನ್ಯ ಆದಾಯ ₹6.85 ಕೋಟಿ, ಕಟ್ಟಡ ಪರವಾನಗಿ ಶುಲ್ಕ ₹28.67 ಲಕ್ಷ, ಇತರ ಆದಾಯ ₹3.76 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದರು.
ಆದ್ಯತಾ ವಲಯ: ಪ್ರತಿ ವಾರ್ಡ್‌ನಲ್ಲೂ ರಸ್ತೆ ನಿಮಾಣಕ್ಕೆ ₹4.15 ಕೋಟಿ, ಹೊಸ ಚರಂಡಿ, ಸಿಡಿ ನಿರ್ಮಾಣಕ್ಕೆ ₹1.92 ಕೋಟಿ, ಹೊಸ ಪೈಪ್‌ಲೈನ್‌ಗೆ ₹1.92 ಕೋಟಿ, ಹೊಸ ಪಂಪ್‌ಸೆಟ್ ಖರೀದಿಗೆ ₹95 ಲಕ್ಷ, ರಸ್ತೆ ದುರಸ್ತಿಗೆ ₹98.79 ಲಕ್ಷ, ಚರಂಡಿ ದುರಸ್ತಿಗೆ ₹1.29 ಕೋಟಿ, ನಗರ ನೈರ್ಮಲೀಕರಣಕ್ಕೆ ₹3.96 ಕೋಟಿ, ಪೈಪ್‌ಲೈನ್ ದುರಸ್ತಿಗೆ ₹1.27 ಕೋಟಿ, ಮೋಟಾರ ದುರಸ್ತಿಗೆ ₹89 ಲಕ್ಷ, ನೀರು ಸರಬರಾಜು ಸಾಮಗ್ರಿ ಖರೀದಿಗೆ ₹65 ಲಕ್ಷ, ಬೀದಿ ದೀಪ ನಿರ್ವಹಣೆ ₹1.49 ಕೋಟಿ, ವಿದ್ಯುತ್ ಬಿಲ್‌ಗೆ ₹3.70 ಕೋಟಿ, ವೇತನಕ್ಕಾಗಿ ₹5.55 ಕೋಟಿ, ಸಾರ್ವಜನಿಕ ಉದ್ಯಾನಗಳು ಹಾಗೂ ಕೆರೆ ಅಭಿವೃದ್ಧಿಗಾಗಿ ₹25 ಲಕ್ಷ, ಎಸ್‌ಸಿ, ಎಸ್‌ಟಿ ಜನರ ಅಭಿವೃದ್ಧಿಗೆ ₹30.80 ಲಕ್ಷ, ಅಂಗವಿಕಲರ ಅಭಿವೃದ್ಧಿಗೆ ₹13 ಲಕ್ಷ, ಸ್ಟೇಷನರಿ ಸಾಮಗ್ರಿ ಸೇರಿ ಇತರ ವೆಚ್ಚಕ್ಕಾಗಿ ₹2 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದರು.ಈ ವೇಳೆ ವಿಧಾನಸಭೆ ಉಪಾಧ್ಯಕ್ಷರು, ಶಾಸಕ ರುದ್ರಪ್ಪ ಲಮಾಣಿ, ಅಪರ ಜಿಲ್ಲಾಧಿಕಾರಿ ಎಲ್. ನಾಗರಾಜ, ಪೌರಾಯುಕ್ತ ಎಚ್. ಕಾಂತರಾಜು, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇತರರಿದ್ದರು. ಲೆಕ್ಕಾಧೀಕ್ಷಕಿ ಶೋಭಾ ಉದಗಟ್ಟಿ ನಿರ್ವಹಿಸಿದರು.ಆದಾಯ ಹೆಚ್ಚಿಸಿಕೊಳ್ಳಿ: ನಗರಸಭೆಯ ಆದಾಯದ ಮೂಲ ಹೆಚ್ಚಿಸಿಕೊಂಡು ಮುಂದಿನ ಸಾರಿ ಇನ್ನಷ್ಟು ಹೆಚ್ಚಿನ ಉಳಿತಾಯ ಬಜೆಟ್ ಮಂಡಿಸಲು ಪ್ರಯತ್ನಿಸಬೇಕು. ನಮ್ಮ ಸಂಪನ್ಮೂಲ ಹೆಚ್ಚಿಕೊಂಡರೆ ನಗರದ ಅಭಿವೃದ್ಧಿ ಮಾಡಲು ಅನುಕೂಲ ಆಗಲಿದೆ. ಅ ಖಾತೆಯಿಂದ ಬ ಖಾತೆ ಮಾಡಬೇಕು. ಇದರಿಂದ ಬಡವರಿಗೆ ಅನುಕೂಲ ಆಗಲಿದೆ ಎಂದು ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.